ಬುಧವಾರ, ಮಾರ್ಚ್ 29, 2023
23 °C
ರಾಷ್ಟ್ರಮಟ್ಟದ ಈಜು ಸ್ಪರ್ಧೆಗಳಲ್ಲಿ ಅನಿಕೇತ್‌ ಸಾಧನೆ

ಮಕ್ಕಳ ದಿನಾಚರಣೆ ವಿಶೇಷ: 12 ಶಸ್ತ್ರಚಿಕಿತ್ಸೆಯಾದರೂ ‘ಛಲ’ ಬಿಡದ 13ರ ಬಾಲಕ

ಇಮಾಮ್‌ಹುಸೇನ್‌ ಗೂಡುನವರ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಈ ಬಾಲಕನ ವಯಸ್ಸು ಹದಿಮೂರು. ಈಗಾಗಲೇ ಆತನಿಗೆ ಹನ್ನೆರಡು ಶಸ್ತ್ರಚಿಕಿತ್ಸೆಗಳಾಗಿವೆ. 

ಆದರೆ, ಈ ಬಾಲಕನ ಸಾಧನೆಗೆ ಯಾವುದೂ ಅಡ್ಡಿಬಂದಿಲ್ಲ. ಅಂಗ ವೈಕಲ್ಯದ ಮಧ್ಯೆಯೂ ರಾಷ್ಟ್ರಮಟ್ಟದ ಈಜು ಟೂರ್ನಿಗಳಲ್ಲಿ ಮಿಂಚುತ್ತಿದ್ದಾರೆ.

ನಗರದ ಅನಗೋಳ ಬಡಾವಣೆಯ ಈಜುಪಟು ಅನಿಕೇತ್‌ ಚಿದಂಬರ ಪಿಲನಕರ್‌ ಯಶೋಗಾಥೆ ಇದು. ಹುಟ್ಟಿನಿಂದಲೂ ಆರೋಗ್ಯ ಸಮಸ್ಯೆ ಎದುರಿಸುತ್ತಲೇ ಬೆಳೆದ ಬಾಲಕ, ಇದೀಗ ಈಜಿನಲ್ಲಿ ಸಾಧನೆ ಮೆರೆಯುತ್ತಿದ್ದಾರೆ. ರಾಷ್ಟ್ರೀಯ ಟೂರ್ನಿಗಳಲ್ಲಿ 6, ರಾಜ್ಯಮಟ್ಟದ ಟೂರ್ನಿ ಗಳಲ್ಲಿ 3 ಚಿನ್ನದ ಪದಕ ಗಳಿಸಿದ್ದಾರೆ.

ಸದ್ಯ ಅಸ್ಸಾಮ್‌ನ ಗುವಾಹಟಿಯಲ್ಲಿ 22ನೇ ಪ್ಯಾರಾ ನ್ಯಾಷನಲ್‌ ಸ್ವಿಮ್ಮಿಂಗ್‌ ಚಾಂಪಿಯನ್‌ಷಿಪ್‌ ನಡೆಯುತ್ತಿದೆ. ಅಲ್ಲಿ ಸಬ್‌ ಜೂನಿಯರ್‌ ವಿಭಾಗದ 100 ಮೀ ಮತ್ತು 50 ಮೀ. ಫ್ರೀಸ್ಟೈಲ್‌, 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ‘ಬೆಸ್ಟ್‌ ಸ್ವಿಮ್ಮರ್‌’ ಪ್ರಶಸ್ತಿಗೆ ಭಾಜನವಾಗಿದ್ದಾರೆ.

ಬದುಕನ್ನೇ ಬದಲಿಸಿತು: ‘ನಮ್ಮ ಮಗನ ಜೀವನ ಎಲ್ಲ ಮಕ್ಕಳಂತಿರಲಿಲ್ಲ. ಅವನಿಗೆ ನಿಲ್ಲಲು, ನಡೆಯಲು ಆಗುತ್ತಿರಲಿಲ್ಲ. ಮೂರು ತಿಂಗಳಿಂದ 6 ವರ್ಷದವನಾಗುವವರೆಗೆ ಕೈ, ಕಾಲು, ಮೊಣಕಾಲು ಮತ್ತು ಕಿವಿಗೆ ಸಂಬಂಧಿಸಿ 12 ಶಸ್ತ್ರಚಿಕಿತ್ಸೆ ಮಾಡಿಸಿದೆವು. ಆದರೂ, ನಮ್ಮ ನಿರೀಕ್ಷೆಯಂತೆ ಆರೋಗ್ಯ ಸುಧಾ ರಿಸಲಿಲ್ಲ. ಈಜಲು ಆರಂಭಿಸಿದ ನಂತರ ಆರೋಗ್ಯವೂ ಸುಧಾರಿಸಿತು. ಬದುಕಿನ ಚಿತ್ರಣವೇ ಬದಲಾಯಿತು’ ಎಂದು ಚಿದಂಬರ ಹಾಗೂ ಶ್ವೇತಾ ದಂಪತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಇಲ್ಲಿನ ಜೆಎನ್‌ಎಂಸಿ ಈಜುಕೊಳದಲ್ಲಿ ನಿತ್ಯ ಒಂದೂವರೆ ತಾವು ಅಭ್ಯಾಸ ಮಾಡುತ್ತಾನೆ. ಕಳೆದ 7 ವರ್ಷಗಳಿಂದ ಉಮೇಶ ಕಲಘಟಗಿ, ಗೋವರ್ಧನ ಕಾಕತಕರ್‌ ಮತ್ತಿತರರು ತರಬೇತಿ ನೀಡುತ್ತಿದ್ದಾರೆ. ಈಜಿನಿಂದಾಗಿ ಶರೀರ ಗಟ್ಟಿಯಾಗಿದ್ದು, ನಮ್ಮ ನೆರವಿನಿಂದ ನಡೆಯುತ್ತಿದ್ದಾನೆ. ಅವನಲ್ಲಿ ಆತ್ಮವಿಶ್ವಾಸವೂ ಹೆಚ್ಚಾಗಿದೆ’ ಎಂದು ಸಂತಸ ಹಂಚಿಕೊಂಡರು.

ನಗರದ ಮುಕ್ತಾಂಗಣ ವಿದ್ಯಾಲಯದಲ್ಲಿ ಅನಿಕೇತ್‌ 7ನೇ ತರಗತಿ ಓದುತ್ತಿದ್ದಾನೆ. ಈ ಹಿಂದೆ ಪಾಲಕರೇ ಎತ್ತಿಕೊಂಡು ಹೋಗಿ ಡೆಸ್ಕ್‌ ಮೇಲೆ ಕೂರಿಸುತ್ತಿದ್ದರು. ಈಗ ತಾನೇ ತರಗತಿ ಕೊಠಡಿಗೆ ಹೋಗುತ್ತಿದ್ದಾನೆ. ತಂದೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ಗೃಹಿಣಿ.

‘ಅನಿಕೇತ್‌ಗೆ ಏನಾದರೂ ಸಾಧಿಸಬೇಕೆನ್ನುವ ಇಚ್ಛೆಯಿದೆ. ನಮ್ಮ ಬಳಿ ಉತ್ಸಾಹದಿಂದ ಅಭ್ಯಾಸ ನಡೆಸುತ್ತಿದ್ದಾನೆ. ಅವನು ಅಂತರರಾಷ್ಟ್ರೀಯ ಮಿಂಚುವ ವಿಶ್ವಾಸವಿದೆ’ ಎನ್ನುತ್ತಾರೆ ತರಬೇತುದಾರ ಉಮೇಶ ಕಲಘಟಗಿ.

*

ಈಜು ನನ್ನ ಬದುಕಿನಲ್ಲಿ ಭರವಸೆ ಮೂಡಿಸಿದೆ. ಮುಂದಿನ ವರ್ಷಗಳಲ್ಲಿ ಪ್ಯಾರಾ ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌ಗಳಲ್ಲಿ ಗೆದ್ದು, ಭಾರತಕ್ಕೆ ಚಿನ್ನದ ಪದಕ ತರುವುದೇ ನನ್ನ ಗುರಿಯಾಗಿದೆ.
-ಅನಿಕೇತ್‌ ಪಿಲನಕರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು