ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾನ್‌ಬಾಲ್ಸ್‌: ಐತಿಹಾಸಿಕ ಚಿನ್ನದ ಸಾಧನೆ ಮಾಡಿದ ಭಾರತೀಯ ವನಿತೆಯರು

Last Updated 2 ಆಗಸ್ಟ್ 2022, 15:51 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್‌: ಇಲ್ಲಿನ ವಿಕ್ಟೋರಿಯಾ ಪಾರ್ಕ್‌ನಲ್ಲಿರುವ ಲಾನ್‌ ಬಾಲ್ಸ್‌ ರಿಂಕ್ಸ್‌ನಲ್ಲಿ ಭಾರತ ಮಹಿಳಾ ಲಾನ್‌ ಬಾಲ್ಸ್‌ ತಂಡದವರು ಮಂಗಳವಾರ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದರು.

ಭಾರತದಲ್ಲಿ ಅಷ್ಟೊಂದು ಜನಪ್ರಿಯತೆ ಹೊಂದಿಲ್ಲದ ಲಾನ್‌ ಬಾಲ್ಸ್‌ ಕ್ರೀಡೆಯಲ್ಲಿ ಲಭಿಸಿದ ಮೊದಲ ಪದಕ ಇದಾಗಿದೆ. ಫೋರ್ಸ್‌ (ನಾಲ್ವರ ತಂಡ) ವಿಭಾಗದ ಫೈನಲ್‌ನಲ್ಲಿ ಭಾರತ 17–10 ರಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತು. ವೇಟ್‌ಲಿಫ್ಟಿಂಗ್‌ಅನ್ನು ಹೊರತುಪಡಿಸಿ, ಈ ಕೂಟದಲ್ಲಿ ಭಾರತಕ್ಕೆ ದೊರೆತ ಮೊದಲ ಚಿನ್ನ ಇದಾಗಿದೆ.

ಲವ್ಲಿ ಚೌಬೆ, ಪಿಂಕಿ, ನಯನ್ಮೊನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕೆ ಅವರನ್ನೊಳಗೊಂಡ ಭಾರತ ಫೈನಲ್‌ನಲ್ಲಿ ಪ್ರಭಾವಿ ಪ್ರದರ್ಶನ ನೀಡಿತು. ಆರಂಭದಲ್ಲೇ ಗುರಿ ಹಿಡಿಯುವಲ್ಲಿ ನಿಖರತೆ ಸಾಧಿಸಿದ ತಂಡ, 8–2 ರಲ್ಲಿ ಮೇಲುಗೈ ಪಡೆಯಿತು.

ತಬೆಬೊ ಮುವಾಂಗೊ, ಬ್ರಿಜೆಟ್ ಕ್ಯಾಲಿಟ್ಜ್‌, ಎಸ್ಮೆ ಕ್ರುಗೆರ್‌ ಮತ್ತು ಯೋಹಾನ ಸ್ನೈಮನ್‌ ಅವರನ್ನು ಒಳಗೊಂಡ ಅನುಭವಿ ದಕ್ಷಿಣ ಆಫ್ರಿಕಾ ತಂಡ ಮರುಹೋರಾಟ ನಡೆಸಿ 8–8 ರಲ್ಲಿ ಸಮಬಲ ಮಾಡಿತು.

ಆದರೆ ಕೊನೆಯ ಮೂರು ಸುತ್ತುಗಳಲ್ಲಿ ಒತ್ತಡವನ್ನು ಸಮರ್ಥವಾಗಿ ಮೆಟ್ಟಿನಿಂತ ಭಾರತ ತಂಡದವರು, ಗೆಲುವು ಪಡೆದು ಚಾರಿತ್ರಿಕ ಸಾಧನೆ ಮಾಡಿದರು.

ಮಹಿಳೆಯರ ಫೋರ್ಸ್‌ ವಿಭಾಗದಲ್ಲಿ ಭಾರತ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಗೆದ್ದು, ಇದೇ ಮೊದಲ ಬಾರಿ ಫೈನಲ್‌ ಪ್ರವೇಶಿಸಿತ್ತು. ಚೊಚ್ಚಲ ಫೈನಲ್‌ನಲ್ಲೇ ಯಶಸ್ಸು ದೊರೆತಿದೆ.

ಲವ್ಲಿ ಅವರು ಜಾರ್ಖಂಡ್‌ ಪೊಲೀಸ್‌ ಇಲಾಖೆಯಲ್ಲಿ ಕಾನ್‌ಸ್ಟೆಬಲ್‌ ಆಗಿದ್ದರೆ, ರಾಂಚಿಯವರಾದ ರೂಪಾ ಅವರು ಕ್ರೀಡಾ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ. ಪಿಂಕಿ ಅವರು ನವದೆಹಲಿಯ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದು, ನಯನ್ಮೊನಿ ಅವರು ಅಸ್ಸಾಂನ ಅರಣ್ಯ ಇಲಾಖೆಯ ಉದ್ಯೋಗಿ.

‘ಪದಕ ಗೆದ್ದರಷ್ಟೇ ಭಾರತದಲ್ಲಿ ಈ ಕ್ರೀಡೆಯ ಬಾಗಿಲು ತೆರೆಯಲಿದೆ ಎಂಬುದು ನಮಗೆ ಗೊತ್ತಿತ್ತು. ಮುಂದಿನ ದಿನಗಳಲ್ಲಿ ಲಾನ್‌ ಬಾಲ್ಸ್‌ ಭಾರತದಲ್ಲಿ ಜನಪ್ರಿಯತೆ ಪಡೆದುಕೊಳ್ಳಲಿದೆ. ಲಾನ್‌ ಬಾಲ್ಸ್‌ ಫೆಡರೇಷನ್‌ ಮತ್ತು ಐಒಎ ನೀಡಿದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ಲವ್ಲಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT