ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸರ್‌ಗಳ ‘ಗೃಹ ತಾಲೀಮು’ ತೃಪ್ತಿ ತಂದಿಲ್ಲ: ಕುಟ್ಟಪ್ಪ

ರಾಷ್ಟ್ರೀಯ ಶಿಬಿರಗಳ ಪುನರಾಂಭಕ್ಕೆ ಕಾಯುತ್ತಿರುವೆ: ಕೋಚ್‌ ಕುಟ್ಟಪ್ಪ
Last Updated 24 ಮೇ 2020, 20:15 IST
ಅಕ್ಷರ ಗಾತ್ರ

ನವದೆಹಲಿ: ‘ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಬಾಕ್ಸರ್‌ಗಳು ಮನೆಯಲ್ಲೇ ನಡೆಸುತ್ತಿರುವ ತಾಲೀಮು ಕುರಿತು ನನಗೆ ತೃಪ್ತಿಯಿಲ್ಲ. ರಾಷ್ಟ್ರೀಯ ಶಿಬಿರಗಳ ಪುನರಾರಂಭಕ್ಕೆಕಾಯುತ್ತಿರುವೆ’ ಎಂದು ಭಾರತ ಪುರುಷರ ಬಾಕ್ಸಿಂಗ್‌ ಮುಖ್ಯ ಕೋಚ್‌, ಕನ್ನಡಿಗ ಸಿ.ಎ.ಕುಟ್ಟಪ್ಪ ಹೇಳಿದ್ದಾರೆ.

ಟೋಕಿಯೊ ಕೂಟಕ್ಕೆ ಅರ್ಹತೆ ಗಿಟ್ಟಿಸಿರುವ ಪುರುಷ ಹಾಗೂ ಮಹಿಳಾ ಬಾಕ್ಸರ್‌ಗಳಿಗೆ ಜೂನ್‌ 10ರಿಂದ ಪಟಿಯಾಲದಲ್ಲಿ ತರಬೇತಿ ನೀಡಲು ಭಾರತ ಬಾಕ್ಸಿಂಗ್‌ ಫೆಡರೇಷನ್‌ ಚಿಂತನೆ ನಡೆಸಿದೆ.

ಕೊರೊನೊತ್ತರ ಪರಿಸ್ಥಿತಿಯಲ್ಲಿ ತರಬೇತಿಗೆ ಎದುರಾಗುವ ಸವಾಲುಗಳ ಬಗ್ಗೆ ಮಾತನಾಡಿದ ಕುಟ್ಟಪ್ಪ ‘ತರಬೇತಿ ಹೇಗಿರುತ್ತದೆ ಎಂದು ನನಗೂ ಅರಿವಿಲ್ಲ. ಆದರೆ ಆ ‘ಅಪರಿಚಿತ’ನನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗುವುದು’ ಎಂದಿದ್ದಾರೆ.

‘ಬಾಕ್ಸರ್‌ಗಳು ಮನೆಯಲ್ಲೇ ತಾಲೀಮು ನಡೆಸುತ್ತಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಕುರಿತು ನನಗೆ ತೃಪ್ತಿಯಂತೂ ಇಲ್ಲ. ಫಿಟ್‌ನೆಸ್‌ ತರಬೇತಿಯನ್ನು ಸೂಕ್ತವಾಗಿ ನಿರ್ವಹಿಸುತ್ತಿದ್ದಾರೆ ಎನಿಸುತ್ತದೆ. ಆದರೆ ಆಹಾರ ನಿಯಂತ್ರಣ ಸಾಧ್ಯವಿಲ್ಲ. ಇದೆಲ್ಲರ ಮೇಲ್ವಿಚಾರಣೆ ನಡೆಸಲು ಶಿಬಿರಗಳ ಆರಂಭ ಅವಶ್ಯಕ’ ಎಂದು ಕುಟ್ಟಪ್ಪ ನುಡಿದರು.

ಕೊರೊನಾ ಸೋಂಕು ಹಬ್ಬುವುದನ್ನು ತಡೆಯಲು ಜಾರಿ ಮಾಡಿದ ಲಾಕ್‌ಡೌನ್‌ನಿಂದಾಗಿ ರಾಷ್ಟ್ರೀಯ ಶಿಬಿರಗಳನ್ನು ಮಾರ್ಚ್‌ ತಿಂಗಳಲ್ಲಿ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಒಂಬತ್ತು ಬಾಕ್ಸರ್‌ಗಳು ಮನೆಯಲ್ಲೇ ಉಳಿದುಕೊಳ್ಳುವಂತಾಗಿತ್ತು.

‘ ಒಂದೊಮ್ಮೆ ಶಿಬಿರ ಪುನರಾರಂಭವಾದರೆ ಅದು ಪ್ರತ್ಯೇಕ ವಲಯವಾಗಿರಲಿದೆ. ಶಿಬಿರದೊಳಗೆ ಪ್ರವೇಶಿಸುವವರಿಗೆ ಹೊರಗಡೆ ಹೋಗುವ ಅವಕಾಶ ನೀಡಲಾಗುವುದಿಲ್ಲ. ಕೋಚ್‌ಗಳು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಹೊರತುಪಡಿಸಿ ಆಟಗಾರರ ಸಂಪರ್ಕಕ್ಕೆ ಬೇರಾರೂ ಬರಬಾರದು. ಎಲ್ಲ ಶಿಷ್ಟಾಚಾರಗಳನ್ನು ಪಾಲಿಸಲಾಗುವುದು’ ಎಂದು ಕುಟ್ಟಪ್ಪ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT