ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಮಟ್ಟದ ಕುಸ್ತಿ ‘ಅಖಾಡ’ಕ್ಕೆ ಇಳಿಯಲು ಹಳಿಯಾಳದ ಯುವತಿಯರು ಸಜ್ಜು

Last Updated 22 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಹಳಿಯಾಳ: ತಾಲ್ಲೂಕಿನ ಗ್ರಾಮೀಣ ಭಾಗದ ಕುಸ್ತಿಪಟುಗಳಾದ ಲೀನಾ ಅಂತೋನ ಸಿದ್ದಿ ಹಾಗೂ ಸುಜಾತಾ ತುಕಾರಾಮ ಪಾಟೀಲ ರಾಷ್ಟ್ರಮಟ್ಟದಲ್ಲಿ ಕುಸ್ತಿ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಗದಗದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಆಯ್ಕೆ ಟ್ರಯಲ್ಸ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.

ತಾಲ್ಲೂಕಿನ ದೊಡ್ಡಕೊಪ್ಪ ಗ್ರಾಮದ ಲೀನಾ 2011ರಲ್ಲಿ ಕ್ರೀಡಾ ಇಲಾಖೆಯ ಜಿಲ್ಲಾ ಕುಸ್ತಿ ಅಖಾಡಕ್ಕೆ ಪ್ರವೇಶ ಪಡೆದರು. ಅದೇ ವರ್ಷ ಹಳಿಯಾಳದಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಅವರು ವಿ.ಆರ್‌.ಡಿ.ಎಂ ಟ್ರಸ್ಟ್, ಜಿಲ್ಲಾ ಮತ್ತು ರಾಜ್ಯ ಕುಸ್ತಿ ಸಂಘದಿಂದ ಆಯೋಜಿಸಿದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.

30 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಲೀನಾ ತೃತೀಯ ಸ್ಥಾನ ಪಡೆದಿದ್ದರು. ಅದರಿಂದ ಸಿಕ್ಕಿದ ಸ್ಫೂರ್ತಿಯು ಕುಸ್ತಿ ಕ್ರೀಡೆಯತ್ತ ಮತ್ತಷ್ಟು ಆಸಕ್ತಿ ಮೂಡಿಸಿತು. 2015ರಲ್ಲಿ ಔರಂಗಾಬಾದ್‌ನಲ್ಲಿ ನಡೆದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಮೂರನೇ ಸ್ಥಾನ ಜಯಿಸಿದರು. 2018ರಲ್ಲಿ ಹಳಿಯಾಳದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ‘ಒನಕೆ ಓಬವ್ವ’ ಪ್ರಶಸ್ತಿಯೊಂದಿಗೆ ಬಂಗಾರದ ಪದಕ, ನಗದು ಬಹುಮಾನ, ಪ್ರಶಸ್ತಿ ಪತ್ರ ತಮ್ಮದಾಗಿಸಿಕೊಂಡರು.

2019ರಲ್ಲಿ ಬೆಳಗಾವಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ‘ಮಹಿಳಾ ಕರ್ನಾಟಕ ಕೇಸರಿ’, 2020ರಲ್ಲಿ ಧಾರವಾಡದಲ್ಲಿ ಪುನಃ ಅದೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. 2018– 19ರಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಆಯೋಜಿಸಿದ ಪದವಿಪೂರ್ವ ಶಾಲಾ– ಕಾಲೇಜುಗಳ ವಿಭಾಗದ ಕುಸ್ತಿ ಪಂದಾವಳಿಯಲ್ಲಿ ಸ್ಪರ್ಧಿಸಿದ್ದರು. ಹಳಿಯಾಳದ ಶಿವಾಜಿ ಪದವಿಪೂರ್ವ ವಿದ್ಯಾಲಯದ ಪ್ರತಿನಿಧಿಯಾಗಿ ಬಂಗಾರದ ಪದಕಕ್ಕೆ ಕೊರಳೊಡಿದ್ದರು. ‌ಅವರು ದಾಂಡೇಲಿಯ ಬಂಗೂರ ನಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ.

ತಾಲ್ಲೂಕಿನ ಸಾತ್ನಳ್ಳಿ ಗ್ರಾಮದ ಸುಜಾತಾ ಪಾಟೀಲ ಕೂಡ 2013ರಲ್ಲಿ ಜಿಲ್ಲಾ ಕುಸ್ತಿ ಅಖಾಡಕ್ಕೆ ಪ್ರವೇಶ ಪಡೆದರು. ಅದೇ ವರ್ಷ ವಿ.ಆರ್‌ ಡಿ.ಎಂ ಟ್ರಸ್ಟ್‌ ಆಯೋಜಿಸಿದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಕಂಚಿನ ಪದಕ, 2014ರಲ್ಲಿ ಬಂಗಾರದ ಪದಕ ಜಯಿಸಿದರು.

ದಾವಣಗೆರೆ, ಮೈಸೂರು, ಬೆಂಗಳೂರು, ಮಹಾರಾಷ್ಟ್ರ, ಉತ್ತರ ಪ್ರದೇಶ, ಒಡಿಶಾ ಸೇರಿದಂತೆ ವಿವಿಧೆಡೆ ನಡೆದ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ. 2018ರಲ್ಲಿ ಬೆಳಗಾವಿಯಲ್ಲಿ ‘ಕರ್ನಾಟಕ ಕಿಶೋರಿ’ ಪ್ರಶಸ್ತಿಗೆ ಭಾಜನರಾದರು. ಹಳಿಯಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ ವ್ಯಾಸಂಗ ಮಾಡುತ್ತಿರುವ ಸುಜಾತಾ, ಈಗ ರಾಜ್ಯ ತಂಡದ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಇಬ್ಬರೂ ರಾಷ್ಟ್ರಮಟ್ಟದಲ್ಲಿ ತರಬೇತಿ ಪಡೆದು, ಒಲಿಂಪಿಕ್‌ ಹಾಗೂ ಏಷ್ಯನ್‌ ಕ್ರೀಡೆಯಲ್ಲಿ ಭಾಗವಹಿಸುವ ಗುರಿ ಹೊಂದಿದ್ದಾರೆ.

ತರಬೇತುದಾರರಾದ ತುಕಾರಾಮ ಗೌಡ, ಮಂಜುನಾಥ ಘೇವಡೆ, ಕಾಡೇಶ ನ್ಯಾಮಗೌಡ, ಬಾಲಕೃಷ್ಣ ದಡ್ಡಿ ಇಲ್ಲಿನ ಕುಸ್ತಿ ಅಖಾಡದಲ್ಲಿ ತಾಲೀಮ ನಡೆಸುತ್ತಿರುವ ಪಟುಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಉ.ಪ್ರ.ದಲ್ಲಿ ಸ್ಪರ್ಧೆ:ರಾಷ್ಟ್ರಮಟ್ಟದ ಆಯ್ಕೆ ಪ್ರಕ್ರಿಯೆಯು ಉತ್ತರಪ್ರದೇಶದ ಗೊಂಡಾದಲ್ಲಿ ನಡೆಯಲಿದ್ದು, ಲೀನಾ 65 ಕೆ.ಜಿ. ವಿಭಾಗದಲ್ಲಿ ಮತ್ತು ಸುಜಾತಾ 68 ಕೆ.ಜಿ. ವಿಭಾಗದಲ್ಲಿ ಸೆಣಸಲಿದ್ದಾರೆ.

ಇವರಿಬ್ಬರೂ ಹಳಿಯಾಳದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಜಿಲ್ಲಾ ಕುಸ್ತಿ ಅಖಾಡದಲ್ಲಿ ಪಳಗಿದ್ದಾರೆ. 10 ವರ್ಷಗಳಿಂದ ನಿರಂತರವಾಗಿ ಪ್ರಶಸ್ತಿಗಳನ್ನು ಜಯಿಸುತ್ತಿದ್ದಾರೆ. ರಾಜ್ಯ ಹಾಗೂ ಹೊರ ರಾಜ್ಯಗಳ ಕುಸ್ತಿ ಪಂದ್ಯಾವಳಿಗಳಲ್ಲಿ ಮೇಲುಗೈ ಸಾಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT