ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರ್ಯಾಕ್‌ನಲ್ಲಿ ಸಕ್ಸಸ್ ‘ಧಿಂಗ್‌ ಎಕ್ಸ್‌ಪ್ರೆಸ್’

Last Updated 28 ಜುಲೈ 2019, 20:00 IST
ಅಕ್ಷರ ಗಾತ್ರ

ದೃಶ್ಯ–1: ಏಪ್ರಿಲ್ 20, 2019. ಸ್ಥಳ: ದೋಹಾ. ಏಷ್ಯನ್ ಅಥ್ಲೆಟಿಕ್ಸ್ ಕೂಟದ ಮೊದಲ ದಿನ 400 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕಾಗಿದ್ದ ಭಾರತದ ಹಿಮಾ ದಾಸ್ ಮೊದಲನೇ ಹೀಟ್ಸ್‌ಗೆ ಭರವಸೆಯಿಂದಲೇ ಸಿದ್ಧರಾಗಿದ್ದರು. ಆದರೆ ಹೀಟ್ಸ್‌ನಲ್ಲಿ ಓಡುತ್ತಿದ್ದಾಗ ಕಾಣಿಸಿಕೊಂಡ ಬೆನ್ನು ನೋವು ಅವರಿಗೆ ನಿರಾಸೆ ಉಂಟು ಮಾಡಿತ್ತು. ಶ್ರೀಲಂಕಾದ ರದೀಶಾ ರಮನಾಯಕ ಅವರು ಗೆದ್ದು ಫೈನಲ್ಸ್‌ಗೆ ಅರ್ಹತೆ ಪಡೆದಿದ್ದರು. ಹಿಮಾ ದಾಸ್ ಕಣ್ಣೀರು ಹಾಕುತ್ತ ‘ಟ್ರ್ಯಾಕ್’ ತೊರೆದಿದ್ದರು.

ದೃಶ್ಯ –2: ಜುಲೈ 20, 2019. ಸ್ಥಳ: ನೋವ್ ಮೆಸ್ಟ್ರೊ, ಜೆಕ್ ಗಣರಾಜ್ಯ. ಇಲ್ಲಿ ನಡೆದ ಅಥ್ಲೆಟಿಕ್ಸ್ ಕೂಟದ 400 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದ ಹಿಮಾ ಸಂಭ್ರಮದಿಂದ ಕುಣಿದರು. ದೇಶದ ಪ್ರಮುಖರು ಅವರಿಗೆ ಅಭಿನಂದನೆ ಸಲ್ಲಿಸಿದರು.ಮರುದಿನ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯಿತು. ಕಾರಣವಿಷ್ಟೇ: ಇದು ಕೇವಲ ಒಂದು ಚಿನ್ನದ ಸಾಧನೆಯಾಗಿರಲಿಲ್ಲ. ಅದು 20 ದಿನಗಳ ಅವಧಿಯಲ್ಲಿ ಅವರು ಗೆದ್ದ ಐದನೇ ಚಿನ್ನವಾಗಿತ್ತು. ಪೋಲೆಂಡ್ ಮತ್ತು ಜೆಕ್ ಗಣರಾಜ್ಯದ ಟ್ರ್ಯಾಕ್‌ಗಳಲ್ಲಿ ಮಿಂಚು ಮೂಡಿಸಿದ ಹಿಮಾ, ಮೊದಲ ನಾಲ್ಕು ಕೂಟಗಳಲ್ಲಿ 200 ಮೀಟರ್ಸ್ ಓಟದ ಚಿನ್ನ ಕೊರಳಿಗೇರಿಸಿಕೊಂಡಿದ್ದರು.

19 ವರ್ಷದ ಹಿಮಾ, ಏಕಾಏಕಿ ಬೆಳಕಿಗೆ ಬಂದ ಪ್ರತಿಭೆ. ಕಳೆದ ವರ್ಷ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಮಾಡಿದ ಅಮೋಘ ಸಾಧನೆಗಳು ಅವರನ್ನು ದೇಶದ ಅಥ್ಲೆಟಿಕ್ಸ್‌ನ ಭರವಸೆಯಾಗಿಸಿದ್ದವು.

ಇದಕ್ಕೂ ಮೊದಲು ನಡೆದಿದ್ದ ಐಎಎಎಫ್ 20 ವರ್ಷದೊಳಗಿನವರ ಅಥ್ಲೆಟಿಕ್ಸ್ ಕೂಟದಲ್ಲಿ ಅವರು ಚಿನ್ನದ ಹೊಳಪು ತೋರಿದ್ದರು. ಕಳೆದ ವರ್ಷ ಏಪ್ರಿಲ್‌ನಲ್ಲಿ ಗೋಲ್ಡ್ ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕೂಟದ 400 ಮೀಟರ್ಸ್ ಮತ್ತು 4x400 ಮೀಟರ್ಸ್ ರಿಲೆಯಲ್ಲಿ ಪಾಲ್ಗೊಂಡಿದ್ದ ಹಿಮಾ, ವೈಯಕ್ತಿಕ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದರು. ಸ್ಪರ್ಧೆಯಲ್ಲಿ ಆರನೇ ಸ್ಥಾನ ಗಳಿಸಿದ್ದರು. ಇಲ್ಲಿ ಗಮನ ಸೆಳೆದ ಅಂಶ, ಅವರು ಮತ್ತು ಚಿನ್ನ ಗೆದ್ದ ಅಮಾಂಟಲ್ ಮೊನ್ಶೊ (ಬೋತ್ಸ್ವಾನಾ) ನಡುವಿನ ಕಾಲದ ಅಂತರ ಕೇವಲ 1.17 ಸೆಕೆಂಡು. ರಿಲೆಯಲ್ಲಿ ಹಿಮಾ ಇದ್ದ ತಂಡ ಏಳನೇ ಸ್ಥಾನ ಗಳಿಸಿತ್ತು.

ಕಳೆದ ವರ್ಷ ಜುಲೈನಲ್ಲಿ ಫಿನ್ಲೆಂಡ್‌ನಲ್ಲಿ ನಡೆದಿದ್ದ 20 ವರ್ಷದೊಳಗಿನವರ ವಿಶ್ವ ಕೂಟದಲ್ಲಿ ಚಿನ್ನ ಗೆದ್ದು ಟ್ರ್ಯಾಕ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಯುವ ಅಥ್ಲೀಟ್ ಎನಿಸಿಕೊಂಡಿದ್ದರು. ಸ್ಪರ್ಧೆಯ ಮೊದಲಾರ್ಧದಲ್ಲಿ ಕೊಂಚ ನಿಧಾನವಾಗಿ ಓಡಿದ ಹಿಮಾ ಕೊನೆಯ 100 ಮೀಟರ್ಸ್ ಹಾದಿಯಲ್ಲಿ ಮೂವರನ್ನು ಹಿಂದಿಕ್ಕಿ ಚಿನ್ನಕ್ಕೆ ಮುತ್ತು ನೀಡಿದ್ದರು. ಇದಾಗಿ ಒಂದು ವರ್ಷದ ನಂತರ ಇದೀಗ ಒಂದೇ ‘ಪ್ರವಾಸ’ದಲ್ಲಿ ಐದು ಚಿನ್ನ ಗೆದ್ದುಕೊಂಡು ದೇಶದ ಅಥ್ಲೆಟಿಕ್ ಕ್ಷೇತ್ರದಲ್ಲಿ ಸಂತಸದ ಅಲೆಗಳನ್ನು ಎಬ್ಬಿಸಿದ್ದಾರೆ.

ಮುಂದೆ ಇದೆ ಕಠಿಣ ಹಾದಿ
ಈ ಐದೂ ಕೂಟಗಳಲ್ಲಿ ಹಿಮಾ ಯೋಜನಾಬದ್ಧ ತಂತ್ರಗಳೊಂದಿಗೆ ಕಣಕ್ಕೆ ಇಳಿದಿದ್ದರು. 200 ಮೀಟರ್ಸ್ ಓಟ ಈ ಅಥ್ಲೀಟ್‌ನ ನೆಚ್ಚಿನ ವಿಭಾಗ ಅಲ್ಲ. ಅವರು ಹೆಚ್ಚು ಸಾಧನೆ ಮಾಡಿರುವುದು 400 ಮೀಟರ್ಸ್‌ನಲ್ಲಿ. ಆದರೂ 200 ಮೀಟರ್ಸ್‌ನ ನಾಲ್ಕು ಸ್ಪರ್ಧೆಗಳಲ್ಲಿ ಪಾಲ್ಗೊಂಡದ್ದು ಯಾಕೆ ಎಂಬ ಸಂದೇಹ ಮೂಡುವುದು ಸಹಜ. ಇದಕ್ಕೆ ಕಾರಣವೂ ಇದೆ. ಕೊನೆಯಲ್ಲಿ ಭಾಗವಹಿಸಬೇಕಾಗಿರುವ 400 ಮೀಟರ್ಸ್ ಓಟಕ್ಕೆ ತಯಾರಿ ಎಂಬಂತೆ ಅವರು ಆ ನಾಲ್ಕು ಸ್ಪರ್ಧೆಗಳಲ್ಲಿ ‘ಟ್ರ್ಯಾಕ್’ಗೆ ಇಳಿದಿದ್ದರು.

400 ಮೀಟರ್ಸ್‌ನಲ್ಲಿ ಮೊದಲಿಗರಾದರೂ ನಿರೀಕ್ಷಿತ ಸಾಮರ್ಥ್ಯ ತೋರಲಾಗದ ನಿರಾಸೆ ಅವರನ್ನು ಕಾಡಿತ್ತು. ಈ ಸ್ಪರ್ಧೆಯಲ್ಲಿ ಅವರು ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆಗಿಂತ ತುಂಬ ಹಿಂದೆ ಉಳಿದಿದ್ದರು. ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸುವ ಸಾಧನೆ ಕೂಡ ಮಾಡಲಾಗಲಿಲ್ಲ. ಈ ಗುರಿ ಸಾಧಿಸಲು ಅವರು ಇನ್ನಷ್ಟು ಶ್ರಮ ಹಾಕಬೇಕಾಗುತ್ತದೆ. ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಟಿಕೆಟ್ ಗಿಟ್ಟಿಸುವ ಸವಾಲು ಕೂಡ ಅವರ ಮುಂದೆ ಇದೆ.

ಹಿಂದುಳಿದ ಸಮುದಾಯದ ಸಾಧಕಿ
ಹಿಮಾ ದಾಸ್ ಜನಿಸಿದ್ದು ಧಿಂಗ್ ಪಟ್ಟಣದ ಕಂದುಲಿಮರಿ ಗ್ರಾಮದಲ್ಲಿ. ತಂದೆ ರಂಜಿತ್ ದಾಸ್, ತಾಯಿ ಜೊನಾಲಿ. ಅಸ್ಸಾಂನ ಅತ್ಯಂತ ಹಿಂದುಳಿದ ಮತ್ತು ವಿಶಿಷ್ಟವಾದ ಸಮುದಾಯ ಕ್ಯೋತ್ ಅಥವಾ ಕೈಬರ್ತಾ. ಈ ಸಮುದಾಯದಲ್ಲಿ ಜನಿಸಿದ ಹಿಮಾ ಇಚ್ಛಾಶಕ್ತಿ, ಪರಿಶ್ರಮದ ಪ್ರತೀಕವಾಗಿ ಬೆಳೆದರು. 400 ಮೀಟರ್ಸ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಬರೆಯುವ ಮಟ್ಟಕ್ಕೆ ಈ ಪ್ರತಿಭೆ ಬೆಳೆಯಿತು.

ಕಳೆದ ವರ್ಷ ಜಕಾರ್ತದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಅವರು ಈ ಸಾಧನೆ ಮಾಡಿದರು. ಕೃಷಿಕ ದಂಪತಿಯ ಐವರು ಮಕ್ಕಳಲ್ಲಿ ಅತ್ಯಂತ ಕಿರಿಯ ಮಗಳು ಹಿಮಾ. ಫುಟ್‌ಬಾಲ್ ಆಟದಲ್ಲಿ ಆಸಕ್ತಿ ಹೊಂದಿದ್ದ ಅವರು ಭಾರತದಲ್ಲಿ ಮಹಿಳಾ ಫುಟ್‌ಬಾಲ್‌ನಲ್ಲಿ ಸಾಧನೆ ಮಾಡಲು ಅವಕಾಶಗಳು ಕಡಿಮೆ ಎಂದು ಮನವರಿಕೆಯಾದಾಗ ಬೇರೆ ಕ್ರೀಡೆಯ ಕಡೆಗೆ ನೋಟ ಹರಿಸಿದ್ದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಂಸುಲ್ ಹಕ್ ಅವರ ಸಲಹೆ ಮೇರೆಗೆ ಓಟದ ಟ್ರ್ಯಾಕ್‌ಗೆ ಧುಮುಕಿದರು.

* ಹೆಸರು: ಹಿಮಾ ದಾಸ್
ಜನನ: ಜನವರಿ 9, 2000
ಅಡ್ಡ ಹೆಸರು: ಧಿಂಗ್ ಎಕ್ಸ್‌ಪ್ರೆಸ್
ಸ್ಥಳ: ಧಿಂಗ್‌, ನಗಾಂವ್‌ (ಅಸ್ಸಾಂ)

* ಸ್ಪರ್ಧಿಸುವ ವಿಭಾಗಗಳು
100, 200, 400 ಮೀಟರ್ಸ್‌.

ಪದಕಗಳು
* ಏಷ್ಯನ್ ಗೇಮ್ಸ್‌ ಜಕಾರ್ತ
ಮಹಿಳೆಯರ 4x400 ಮೀಟರ್ಸ್‌ ರಿಲೇ: ಚಿನ್ನ
ಮಿಶ್ರ ವಿಭಾಗದ 4x400 ಮೀ ರಿಲೇ: ಚಿನ್ನ
ಮಹಿಳೆಯರ 400 ಮೀಟರ್ಸ್‌: ಬೆಳ್ಳಿ

ವಿಶ್ವ 20 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ ಥಾಂಪೆರೆ
400 ಮೀಟರ್ಸ್ : ಚಿನ್ನ

* ಉತ್ತಮ ಕಾಲ–ಸಾಧನೆ
100 ಮೀಟರ್ಸ್‌:11.74 ಸೆಕೆಂಡು (2018)
200 ಮೀಟರ್ಸ್‌:23.10 ಸೆಕೆಂಡು (2018)
400 ಮೀಟರ್ಸ್:50.79 ಸೆಕೆಂಡು (2018)

ಕೋಚ್‌ಗಳು
* ನಿಪೋ ದಾಸ್
* ನವಜೀತ್ ಮಾಲಕಾರ್
* ಗಲಿನಾ ಬುಕಾರಿನ

ಪ್ರಶಸ್ತಿ-ಬಿರುದುಗಳು
*
2018ರ ಸೆಪ್ಟೆಂಬರ್‌ನಲ್ಲಿ ಅರ್ಜುನ ಪ್ರಶಸ್ತಿ
* 2018ರ ನವೆಂಬರ್‌ನಲ್ಲಿ ಯುನಿಸೆಫ್‌ಗೆ ಭಾರತದ ಮೊತ್ತ ಮೊದಲ ಯುವ ರಾಯಭಾರಿಯಾಗಿ ನೇಮಕ
* 2018ರಲ್ಲಿ ಅಸ್ಸಾಂ ರಾಜ್ಯದ ಕ್ರೀಡಾ ರಾಯಭಾರಿಯಾಗಿ ನೇಮಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT