ಬುಧವಾರ, ಸೆಪ್ಟೆಂಬರ್ 18, 2019
24 °C
ಎರಡು ರಿಲೇ ತಂಡಗಳಲ್ಲಿ ಅವಕಾಶ

ವಿಶ್ವ ಅಥ್ಲೆಟಿಕ್‌ ಕೂಟ: ಭಾರತ ತಂಡದಲ್ಲಿ ಹಿಮಾ, ಪೂವಮ್ಮ

Published:
Updated:

ನವದೆಹಲಿ: ವಿಶ್ವ ಜೂನಿಯರ್‌ ಚಾಂಪಿಯನ್‌ ಹಿಮಾ ದಾಸ್‌, ದೋಹಾದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ಸೋಮವಾರ ಪ್ರಕಟಿಸಲಾಗಿರುವ 25 ಮಂದಿಯ ಭಾರತ ತಂಡದಲ್ಲಿ 4x00 ಮೀ. ರಿಲೇ ಓಟಗಾರ್ತಿಯಾಗಿ ಸ್ಥಾನ ಪಡೆದಿದ್ದಾರೆ. ಸೆ. 27ರಿಂದ ವಿಶ್ವ ಚಾಂಪಿಯನ್‌ಷಿಪ್‌ ನಡೆಯಲಿದೆ.

ಕರ್ನಾಟಕದ ಎಂ.ಆರ್‌.ಪೂವಮ್ಮ ಅವರೂ ರಿಲೇ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತ ಅಥ್ಲೆಟಿಕ್‌ ಫೆಡೇಷನ್‌ ಆಯ್ಕೆ ಸಮಿತಿ ಸಭೆಯ ನಂತರ ತಂಡದ ಸದಸ್ಯರ ಸಂಖ್ಯೆ ನಿರ್ಧರಿಸಲಾಯಿತು. ವಿಶ್ವ ವಿ.ವಿ. ಚಾಂಪಿಯನ್‌ ದ್ಯುತಿ ಚಾಂದ್‌ ಅವರು 100 ಮೀಟರ್‌ ಓಟದಲ್ಲಿ ಅರ್ಹತಾ ಮಟ್ಟ ತಲುಪದಿದ್ದರೂ, ಸ್ಪರ್ಧೆಗೆ ಅಗತ್ಯವಿರುವ ಅಥ್ಲೀಟುಗಳ ಸಂಖ್ಯೆಯೊಳಗಿದ್ದಾರೆ.

ಹಿಮಾ ನೆಚ್ಚಿನ 400 ಮೀ. ಓಟದಲ್ಲಿ ಅರ್ಹತಾ ಮಟ್ಟ ತಲುಪಿಲ್ಲ. ಆದರೆ ಮಹಿಳಾ 4x400 ಮೀ. ರಿಲೇ ಮತ್ತು ಮಿಕ್ಸೆಡ್‌ 4x400 ಮೀ. ರಿಲೇ ತಂಡದ ಓಟಗಾರ್ತಿಯಾಗಿ ಅವಕಾಶ ಪಡೆದಿದ್ದಾರೆ.

ಜಾವೆಲಿನ್‌ ಥ್ರೊ ಸ್ಪರ್ಧಿ ನೀರಜ್‌ ಚೋಪ್ರಾ ಮೊಣಕೈ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದು, ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಲ್ಲ. ‘ಅವರ ಹೆಸರನ್ನು ಆಯ್ಕೆಗಾರರು ಚರ್ಚಿಸಲಿಲ್ಲ’ ಎಂದು ಎಎಫ್‌ಐ ಪ್ರಕಟಣೆ ತಿಳಿಸಿದೆ. ಆವರು ಸಂಪೂರ್ಣ ಚೇತರಿಸಿಕೊಂಡು ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ಗೆ ಸಜ್ಜಾಗಲು ಇಲ್ಲಿ ಅವಕಾಶ ನೀಡಿಲ್ಲ ಎನ್ನಲಾಗಿದೆ.

ತಂಡ ಇಂತಿದೆ: ಪುರುಷರು: ಜಬೀರ್‌ ಎಂ.ಪಿ. (400 ಮೀ. ಹರ್ಡಲ್ಸ್‌), ಜಿನ್ಸನ್‌ ಜಾನ್ಸನ್‌ (1,500 ಮೀ.), ಅವಿನಾಶ್‌ ಸೇಬಲ್‌ (3,000 ಮೀ. ಸ್ಟೀಪರ್‌ಚೇಸ್‌), ಕೆ.ಟಿ.ಇರ್ಫಾನ್. ದೇವೆಂದರ್‌ ಸಿಂಗ್‌ (20 ಕಿ.ಮೀ. ನಡಿಗೆ), ಗೋಪಿ ಟಿ. (ಮ್ಯಾರಥಾನ್‌), ಶ್ರೀಶಂಕರ್‌ ಎಎಂ. (ಲಾಂಗ್‌ಜಂಪ್‌), ತೇಜಿಂದರ್‌ ಪಾಲ್‌ ಸಿಂಗ್‌ ತೂರ್‌ (ಷಾಟ್‌ಪಟ್‌), ಶಿವಪಾಲ್‌ ಸಿಂಗ್‌ (ಜಾವೆಲಿನ್‌ ಥ್ರೊ), ಮುಹಮ್ಮದ್‌ ಅನಾಸ್‌, ನಿರ್ಮಲ್‌ ನೋವ ಟಾಮ್‌, ಅಲೆಕ್ಸ್‌ ಆ್ಯಂಟನಿ, ಅಮೋಜ್‌ ಜಾಕೋಬ್‌, ಕೆ.ಎಸ್‌.ಜೀವನ್‌, ಧರುಣ್‌ ಆಯ್ಯಸಾಮಿ ಮತ್ತು ಹರ್ಷಕುಮಾರ್‌ (4x400 ಮೀ. ಪುರುಷರ ಮತ್ತು ಮಿಕ್ಸಡ್‌ ರಿಲೆ).

ಮಹಿಳೆಯರು: ಪಿ.ಯು.ಚಿತ್ರಾ (1,500 ಮೀ.), ಅನ್ನು ರಾಣಿ (ಜಾವೆಲಿನ್‌ ಥ್ರೊ), ಹಿಮಾ ದಾಸ್‌, ವಿಸ್ಮಯಾ ವಿ.ಕೆ., ಪೂವಮ್ಮ ಎಂ.ಆರ್‌., ಜಿಷ್ಣಾ ಮ್ಯಾಥ್ಯೂ, ರೇವತಿ ವಿ., ಸುಭಾ ವೆಂಕಟೇಶನ್‌, ವಿತ್ಯಾ ಆರ್‌. (4x400 ಮೀ. ಮಹಿಳೆಯರ ಮತ್ತು ಮಿಕ್ಸಡ್‌ ರಿಲೆ ತಂಡ).

Post Comments (+)