ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ರಾಜ್‌ಕುಮಾರ್‌ ಕೈಚಳಕಕ್ಕೆ ಒಲಿದ ಕಂಚು

ಏಷ್ಯಾಕಪ್ ಹಾಕಿ ಟೂರ್ನಿ: ಜಪಾನ್ ವಿರುದ್ಧ ಏಕೈಕ ಗೋಲಿನಿಂದ ಭಾರತ ತಂಡಕ್ಕೆ ಜಯ
Last Updated 1 ಜೂನ್ 2022, 19:25 IST
ಅಕ್ಷರ ಗಾತ್ರ

ಜಕಾರ್ತ, ಇಂಡೊನೇಷ್ಯಾ: ಯುವ ಆಟಗಾರರನ್ನು ಒಳಗೊಂಡ ಭಾರತ ಹಾಕಿ ತಂಡವು ಏಷ್ಯಾಕಪ್ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿದೆ.

ಮೂರನೇ ಸ್ಥಾನಕ್ಕಾಗಿ ಬುಧವಾರ ನಡೆದ ಪಂದ್ಯದಲ್ಲಿ ಬೀರೇಂದ್ರ ಲಾಕ್ರಾ ಸಾರಥ್ಯದ ತಂಡವು 1–0ಯಿಂದ ಜಪಾನ್‌ಗೆ ಸೋಲುಣಿಸಿತು. ಪಂದ್ಯದ ಏಳನೇ ನಿಮಿಷದಲ್ಲೇ ರಾಜ್‌ಕುಮಾರ್ ಪಾಲ್ ಕೈಚಳಕ ತೋರಿ ಭಾರತದ ಗೆಲುವಿಗೆ ಕಾರಣರಾದರು.

ಹೋದ ಬಾರಿ ಚಾಂಪಿಯನ್ ಆಗಿದ್ದ ಭಾರತ, ಮಂಗಳವಾರ ಸೂಪರ್ ಫೋರ್‌ ಹಂತದ ಅಂತಿಮ ಲೀಗ್ ಪಂದ್ಯದಲ್ಲಿ 4–4ರಿಂದ ದಕ್ಷಿಣ ಕೊರಿಯಾ ಎದುರು ಡ್ರಾ ಸಾಧಿಸಿತ್ತು. ಇದರಿಂದಾಗಿ ಗೋಲು ಗಳಿಕೆಯ ಆಧಾರದಲ್ಲಿ ಹಿಂದೆ ಬಿದ್ದು, ಫೈನಲ್‌ ತಲುಪಲಿಲ್ಲ.

ಈ ಹಣಾಹಣಿಯಲ್ಲಿ ಭಾರತ ತಂಡವು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮಂದಾಯಿತು. ಅದಕ್ಕೆ ಏಳನೇ ನಿಮಿಷದಲ್ಲಿ ಫಲ ಲಭಿಸಿತು. ಉತ್ತಮ್‌ ಸಿಂಗ್ ಅವರ ನೆರವು ಪಡೆದ ರಾಜ್‌ಕುಮಾರ್ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿ ಭಾರತ ತಂಡದಲ್ಲಿ ಸಂಭ್ರಮ ಮೂಡಿಸಿದರು. ಇದಾದ ಐದು ನಿಮಿಷಗಳ ಬಳಿಕ ತಂಡಕ್ಕೆ ಸತತ ಎರಡು ಪೆನಾಲ್ಟಿ ಅವಕಾಶಗಳು ಲಭಿಸಿದರೂ ಗೋಲು ದಾಖಲಾಗಲಿಲ್ಲ.

ಈ ಹಂತದಲ್ಲಿ ಸಮಬಲದ ಗೋಲು ಹೊಡೆಯಲು ಜಪಾನ್‌ನ ಪ್ರಯತ್ನವೂ ಕೈಗೂಡಲಿಲ್ಲ. 20ನೇ ನಿಮಿಷದಲ್ಲಿ ಆ ತಂಡಕ್ಕೆ ದೊರೆತ ಎರಡು ಪೆನಾಲ್ಟಿ ಅವಕಾಶಗಳೂ ವ್ಯರ್ಥವಾದವು. ಕನ್ನಡಿಗ ಎಸ್‌.ವಿ. ಸುನಿಲ್ ನೀಡಿದ ಪಾಸ್‌ನಲ್ಲಿ ಮತ್ತೊಂದು ಗೋಲು ಗಳಿಕೆಯ ಅವಕಾಶ ರಾಜ್‌ಕುಮಾರ್ ಅವರಿಗಿತ್ತು. ಆದರೆ ಎದುರಾಳಿ ಗೋಲ್‌ಕೀಪರ್ ಚೆಂಡನ್ನು ಯಶಸ್ವಿಯಾಗಿ ತಡೆದರು.

ಕೊನೆಯ ಕ್ವಾರ್ಟರ್‌ನಲ್ಲಿ ಜಪಾನ್ ತಂಡಕ್ಕೆ ಮೂರು ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭಿಸಿದರೂ ಭಾರತದ ಭದ್ರಕೋಟೆಯನ್ನು ಭೇದಿಸಲಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT