ಭಾರತ ತಂಡಕ್ಕೆ ಸೋಲು

7
ಚಾಂಪಿಯನ್ಸ್ ಟ್ರೋಫಿ ಹಾಕಿ: ಆಸ್ಟ್ರೇಲಿಯಾಗೆ ಜಯ

ಭಾರತ ತಂಡಕ್ಕೆ ಸೋಲು

Published:
Updated:
ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರು ಚೆಂಡಿಗಾಗಿ ಪೈಪೋಟಿ ನಡೆಸಿದರು   ಪಿಟಿಐ ಚಿತ್ರ

ಬ್ರೆಡಾ, ನೆದರ್‌ಲ್ಯಾಂಡ್ಸ್‌ (ಪಿಟಿಐ): ಭಾರತ ಪುರುಷರ ತಂಡವು ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸೋತಿದೆ. 

ಬುಧವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವು ಭಾರತ ತಂಡವನ್ನು 3–2ರಿಂದ ಮಣಿಸಿತು. 

ಪಂದ್ಯದ ಆರಂಭದಿಂದಲೂ ಉಭಯ ತಂಡಗಳು ಪ್ರಬಲ ಪೈಪೋಟಿ ನಡೆಸಿದವು. 6ನೇ ನಿಮಿಷದಲ್ಲಿ ಆಸ್ಟ್ರೇಲಿಯಾದ ಲಾಚ್ಲಾನ್‌ ಶಾರ್ಪ್‌ ಅವರು ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ, ಆಸ್ಟ್ರೇಲಿಯಾ ತಂಡದ ಸಂತಸ ಬಹಳ ಹೊತ್ತು ಉಳಿಯಲಿಲ್ಲ. 10ನೇ ನಿಮಿಷದಲ್ಲಿ ಭಾರತದ ವರುಣ್‌ ಕುಮಾರ್‌ ಅವರು ಗೋಲು ತಂದಿತ್ತು ಸಮಬಲ ಸಾಧಿಸಲು ನೆರವಾದರು. 

ಆಸ್ಟ್ರೇಲಿಯಾ ತಂಡದ ಟಾಮ್‌ ಕ್ರೇಗ್‌ ಅವರು 15ನೇ ನಿಮಿಷದಲ್ಲಿ ಎರಡನೇ ಗೋಲು ದಾಖಲಿಸಿದರು. 33ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ತಂಡವು ಮತ್ತೆ ಸಂಭ್ರಮಿಸಿತು. ಆ ತಂಡದ ಟ್ರೆಂಟ್‌ ಮಿಟ್ಟನ್‌ ಅವರು ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸಿ ಮುನ್ನಡೆಯನ್ನು 3–1ಕ್ಕೆ ಹೆಚ್ಚಿಸಿದರು. 

ನಂತರ ಭಾರತ ತಂಡದ ಆಟಗಾರರು ಹಲವು ಬಾರಿ ಗೋಲು ಗಳಿಸಲು ನಡೆಸಿದ ಪ್ರಯತ್ನಗಳನ್ನು ಆಸ್ಟ್ರೇಲಿಯಾದ ರಕ್ಷಣಾ ವಿಭಾಗದ ಆಟಗಾರರು ವಿಫಲಗೊಳಿಸಿದರು. 

ಪಂದ್ಯದ ದ್ವಿತೀಯಾರ್ಧದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಅವರು ಗೋಲು ಗಳಿಸಿ (58ನೇ ನಿ.) ಮುನ್ನಡೆಯನ್ನು ತಗ್ಗಿಸಿದರು. ಇದರಿಂದಾಗಿ ಒತ್ತಡಕ್ಕೆ ಸಿಲುಕಿದ ಭಾರತ ತಂಡವು ಬಿರುಸಿನ ಆಟವಾಡಲು ಆರಂಭಿಸಿತು. ಆದರೆ, ಆಸ್ಟ್ರೇಲಿಯಾ ತಂಡದ ಸಂಘಟಿತ ಹೋರಾಟದಿಂದಾಗಿ ಭಾರತ ತಂಡಕ್ಕೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. 

ಈ ಸೋಲಿನಿಂದಾಗಿ ಭಾರತ ತಂಡವು ಮೂರು ಪಂದ್ಯಗಳಿಂದ ಒಟ್ಟು 6 ಪಾಯಿಂಟ್‌ಗಳನ್ನು ಕಲೆ ಹಾಕಿ ಪಾಯಿಂಟ್‌ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಗುರುವಾರ ನಡೆಯುವ ಪಂದ್ಯದಲ್ಲಿ ಭಾರತ ತಂಡವು ಬೆಲ್ಜಿಯಂ ತಂಡವನ್ನು ಎದುರಿಸಲಿದೆ. 

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !