ಮಂಗಳವಾರ, ಆಗಸ್ಟ್ 20, 2019
27 °C

ಐಶ್ವರ್ಯ ಪಿಸ್ಸೆ ಅಪೂರ್ವ ಸಾಧನೆ

Published:
Updated:
Prajavani

ವರ್ಪಲೋತ, ಹಂಗರಿ (ಪಿಟಿಐ): ಯುವ ಮೋಟಾರ್ ಸ್ಪೋರ್ಟ್‌ ವಾಹನದ ಚಾಲಕಿ, ಬೆಂಗಳೂರಿನ ಐಶ್ವರ್ಯ ಪಿಸ್ಸೆ ಅಪೂರ್ವ ಸಾಧನೆ ಮಾಡಿ ಮಿಂಚಿದರು. ಇಲ್ಲಿ ನಡೆದ ಎಫ್‌ಐಎಂ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದ ಅವರು ಮೋಟಾರ್ ಸ್ಪೋರ್ಟ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಗಳಿಸಿದ ಭಾರತದ ಮೊದಲ ಮಹಿಳೆ ಎಂದೆನಿಸಿಕೊಂಡರು.

23 ವರ್ಷದ ಐಶ್ವರ್ಯ ಭಾನುವಾರ ಮುಕ್ತಾಯಗೊಂಡ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 65 ಪಾಯಿಂಟ್ ಗಳಿಸಿದರು. ಈ ಮೂಲಕ ಪೋರ್ಚುಗಲ್‌ನ ರೀಟಾ ವಿಯೆರಾ ಅವರನ್ನು ನಾಲ್ಕು ಪಾಯಿಂಟ್‌ಗಳ ಅಂತರದಿಂದ ಹಿಂದಿಕ್ಕಿದರು. ದುಬೈನಲ್ಲಿ ನಡೆದಿದ್ದ ಮೊದಲ ಸುತ್ತಿನಲ್ಲಿ ಮೊದಲಿಗರಾಗಿದ್ದ ಅವರು ಪೋರ್ಚ್‌ಗಲ್‌ನಲ್ಲಿ ಮೂರನೇ ಮತ್ತು ಸ್ಪೇನ್‌ನಲ್ಲಿ ಐದನೇ ಸ್ಥಾನ ಗಳಿಸಿದ್ದರು. ಭಾನುವಾರ ನಾಲ್ಕನೇಯವರಾಗಿದ್ದರು.

ಜೂನಿಯರ್ ವಿಭಾಗದಲ್ಲೂ ಸಾಮರ್ಥ್ಯ ಮೆರೆದ ಅವರು ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡರು. ಪ್ರಶಸ್ತಿ ಗೆದ್ದ ಚಿಲಿಯ ಥಾಮಸ್ ಡಿ ಗವಾಡೊ 60 ಪಾಯಿಂಟ್ ಗಳಿಸಿದರೆ ಐಶ್ವರ್ಯ 46 ಪಾಯಿಂಟ್ ಕಲೆ ಹಾಕಿದರು.

‘ಕಳೆದ ವರ್ಷ ಸ್ಪೇನ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದೆ. ಅದು ನನ್ನ ಮೊದಲ ಅಂತರರಾಷ್ಟ್ರೀಯ ಸ್ಪರ್ಧೆಯಾಗಿತ್ತು. ಗಾಯ ಗಂಭೀರ ಆಗಿದ್ದುದರಿಂದ ಇನ್ನು ಮುಂದೆ ಸ್ಪರ್ಧಿಸಲು ಸಾಧ್ಯವಿದೆಯೇ ಎಂಬ ಸಂದೇಹ ಮೂಡಿತ್ತು. ನಂತರ ಎಲ್ಲವೂ ಸರಿ ಹೋಯಿತು. ಈಗ ಪ್ರಶಸ್ತಿ ಗೆದ್ದಿರುವುದು ಅತ್ಯಂತ ಖುಷಿ ನೀಡಿದೆ’ ಎಂದು ಐಶ್ವರ್ಯ ಹೇಳಿದರು.

Post Comments (+)