ಜಪಾನ್‌ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ: ಭಾರತದ ಆಟಗಾರರ ಸವಾಲು ಅಂತ್ಯ

7
ಕ್ವಾರ್ಟರ್ ಫೈನಲ್‌ನಲ್ಲಿ ಸೋತ ಕಿದಂಬಿ ಶ್ರೀಕಾಂತ್‌

ಜಪಾನ್‌ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ: ಭಾರತದ ಆಟಗಾರರ ಸವಾಲು ಅಂತ್ಯ

Published:
Updated:
Deccan Herald

ಟೋಕಿಯೊ: ಕಿದಂಬಿ ಶ್ರೀಕಾಂತ್ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುವುದರೊಂದಿಗೆ ಜಪಾನ್‌ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಆಟಗಾರರ ಸವಾಲು ಮುಕ್ತಾಯಗೊಂಡಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಶ್ರೀಕಾಂತ್‌ ದಕ್ಷಿಣ ಕೊರಿಯಾದ ಲೀ ಡಾಂಗ್ ಕಿಯಾನ್‌ ವಿರುದ್ಧ 21–19, 16–21, 18–21ರಿಂದ ಸೋತರು.

ಒಂದು ತಾಸು 19 ನಿಮಿಷಗಳ ಪಂದ್ಯದ ಮೊದಲ ಗೇಮ್‌ನಲ್ಲಿ ಭಾರತದ ಆಟಗಾರ ಪ್ರಾಬಲ್ಯ ಮೆರೆದು ಗೆದ್ದರು. ಉಳಿದೆರಡು ಗೇಮ್‌ಗಳಲ್ಲಿ ಪ್ರಬಲ ಪೈಪೋಟಿ ಒಡ್ಡಿದರೂ ಜಯ ಗಳಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದಿದ್ದ ಶ್ರೀಕಾಂತ್‌ ಈಚೆಗೆ ಮುಕ್ತಾಯಗೊಂಡ ಏಷ್ಯನ್‌ ಕ್ರೀಡಾಕೂಟದಲ್ಲಿ ಹಾಂಕಾಂಗ್‌ನ ವಾಂಗ್‌ ವಿಂಗ್‌ ಕೀ ವಿನ್ಸೆಂಟ್‌ ಎದುರು ಸೋತು ಹೊರಬಿದ್ದಿದ್ದರು. ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ವಿನ್ಸೆಂಟ್ ಅವರನ್ನು ಮಣಿಸಿ ಸೇಡು ತೀರಿಸಿಕೊಂಡ ಶ್ರೀಕಾಂತ್‌ ಎಂಟರ ಘಟ್ಟದ ಪಂದ್ಯದಲ್ಲಿ ಭರವಸೆಯಿಂದಲೇ ಕಣಕ್ಕೆ ಇಳಿದಿದ್ದರು. ಆದರೆ ಕೊನೆಗೆ ನಿರಾಸೆಗೊಂಡರು.

ರೋಮಾಂಚಕಾರಿ ಹಣಾಹಣಿ: ಮೊದಲ ಗೇಮ್‌ನ ಆರಂಭದಲ್ಲಿ 2–4ರ ಹಿನ್ನಡೆ ಕಂಡ ಅವರು ನಂತರ ಚೇತರಿಸಿಕೊಂಡು 9–5ರಿಂದ ಮುನ್ನಡೆದರು. ಆದರೆ ತಿರುಗೇಟು ನೀಡಿದ ಲೀ 10–10ರಿಂದ ಸಮಬಲ ಸಾಧಿಸಿದರು. ನಂತರವೂ ಪಂದ್ಯ ಕುತೂಹಲಕಾರಿಯಾಗಿ ಸಾಗಿತು. ಶ್ರೀಕಾಂತ್‌ 19–17ರಿಂದ ಮುನ್ನಡೆದ ಸಂದರ್ಭದಲ್ಲಿ ಲೀ ಪ್ರತಿ ಹೋರಾಟ ನಡೆಸಿದರೂ ಗೇಮ್‌ ಶ್ರೀಕಾಂತ್ ಪಾಲಾಯಿತು.

ಎರಡನೇ ಗೇಮ್‌ನಲ್ಲಿ ಲೀ ಭರವಸೆಯಿಂದಲೇ ಆಡಿದರು. ಇದರ ಪರಿಣಾಮ 12–5ರಿಂದ ಮುನ್ನಡೆ ಸಾಧಿಸಿದರು. ಹಿಡಿತ ಸಾಧಿಸಲು ಶ್ರೀಕಾಂತ್‌ ನಡೆಸಿದ ಶ್ರಮವೆಲ್ಲವೂ ವ್ಯರ್ಥವಾಯಿತು. 1–1 ಗೇಮ್‌ಗಳ ಸಮಬಲ ಸಾಧಿಸಿದ ಉಭಯ ಆಟಗಾರರು ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಜಿದ್ದಾಜಿದ್ದಿಯ ಹೋರಾಟಕ್ಕೆ ಮುಂದಾದರು.

ಲೀ 12–9ರಿಂದ ಮುನ್ನಡೆ ಸಾಧಿಸಿದ್ದ ಸಂದರ್ಭದಲ್ಲಿ ಲಯಕ್ಕೆ ಮರಳಿದ ಶ್ರೀಕಾಂತ್‌ 13–12ರಿಂದ ಮುನ್ನಡೆದು ನಿರೀಕ್ಷೆ ಮೂಡಿಸಿದರು. ಗೇಮ್‌ 14–14ರಿಂದ ಸಮಗೊಂಡಾಗ ಪ್ರೇಕ್ಷಕರು ಮತ್ತಷ್ಟು ರೋಮಾಂಚನಗೊಂಡರು. ಆದರೆ ನಂತರ ನಿರಂತರ ಪಾಯಿಂಟ್‌ಗಳನ್ನು ಕಲೆ ಹಾಕಿದ ಲೀ ಗೆಲುವಿನ ನಗೆ ಬೀರಿದರು.

ಪಿ.ವಿ.ಸಿಂಧು ಮತ್ತು ಎಚ್‌.ಎಸ್‌.ಪ್ರಣಯ್‌ ಗುರುವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಸೋತು ಹೊರಬಿದ್ದಿದ್ದರು. ಸಿಂಧು, ಚೀನಾದ ಗೋ ಫಂಜಿ ಅವರಿಗೆ 18–21, 19–21ರಿಂದ ಮಣಿದರು. ಪ್ರಣಯ್‌ ಅವರು ಇಂಡೊನೇಷ್ಯಾದ ಆ್ಯಂಟನಿ ಸಿನಿಸುಕಾ ಜಿಂಟಿಂಗ್‌ ಎದುರು 14–21, 17–21ರಿಂದ ಸೋತರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !