ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾಯ್ತು ಸಿಂಧು...?

Last Updated 4 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬರೋಬ್ಬರಿ ಮೂರು ವರ್ಷಗಳ ಹಿಂದಿನ ಮಾತು. ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಆಯೋಜನೆಯಾಗಿದ್ದ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಬೆಡಗು ಮೂಡಿಸಿದ್ದ ಪಿ.ವಿ.ಸಿಂಧು, ಸಾಂಬಾ ನಾಡಿನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದರು. ಮಹಿಳಾ ಸಿಂಗಲ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದುಹೊಸ ಮೈಲುಗಲ್ಲು ಸ್ಥಾಪಿಸಿದ್ದರು. ಈ ಸಾಧನೆ ಮಾಡಿದ ದೇಶದ ಮೊದಲ ಬ್ಯಾಡ್ಮಿಂಟನ್‌ ತಾರೆ ಎಂಬ ಹಿರಿಮೆಗೂ ಭಾಜನರಾಗಿದ್ದರು. ಅವರ ಸಾಧನೆ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯ ಸೆಲೆಯಾಗಿ ಪರಿಣಮಿಸಿತ್ತು.

ಕೂಟದ ಫೈನಲ್‌ನಲ್ಲಿ ಸಿಂಧು, ಸ್ಪೇನ್‌ನ ಕ್ಯಾರೋಲಿನ್‌ ಮರಿನ್‌ ಅವರ ಸವಾಲು ಮೀರಿ ಚಿನ್ನದ ಪದಕಕ್ಕೆ ಕೊರಳೊಡ್ಡಲಿ ಎಂದು ಕೋಟ್ಯಂತರ ಮಂದಿ ಪ್ರಾರ್ಥಿಸಿದ್ದರು. ಭಾರತದ ಆಟಗಾರ್ತಿ ಮೊದಲ ಗೇಮ್‌ನಲ್ಲಿ ಗೆದ್ದಾಗಲಂತೂ ಕ್ರೀಡಾಂಗಣ ಹಾಗೂ ಟಿ.ವಿ.ಮುಂದೆ ಕುಳಿತಿದ್ದವರೆಲ್ಲಾ ಹಿರಿ ಹಿರಿ ಹಿಗ್ಗಿದ್ದರು. ನಂತರದ ಎರಡು ಗೇಮ್‌ಗಳಲ್ಲಿ ನಡೆದಿದ್ದೇ ಬೇರೆ. ಆರಂಭದಲ್ಲಿ ಗರ್ಜಿಸಿದ್ದ ಸಿಂಧು, ನಂತರ ಸಂಪೂರ್ಣವಾಗಿ ಮಂಕಾಗಿ ಹೋಗಿದ್ದರು. ಅಂದು ಆವರಿಸಿದ್ದ ‘ಫೈನಲ್‌ ಫೋಬಿಯಾ’ ಅವರನ್ನು ಬೆಂಬಿಡದೆ ಕಾಡುತ್ತಿದೆ.

2017ರಲ್ಲಿ ಅವರು ಹಾಂಗ್‌ಕಾಂಗ್‌ ಓಪನ್‌, ಬಿಡಬ್ಲ್ಯುಎಫ್‌ ಸೂಪರ್‌ ಸೀರಿಸ್‌ ಫೈನಲ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅಂತಿಮ ಘಟ್ಟದಲ್ಲಿ ಎಡವಿದ್ದರು. 2018ರಲ್ಲೂ ಫೈನಲ್‌ನಲ್ಲಿ ‘ಪಲ್ಟಿ’ ಹೊಡೆಯುವುದು ಮುಂದುವರಿದಿತ್ತು. ಇಂಡಿಯಾ ಓಪನ್‌ ಮತ್ತು ಥಾಯ್ಲೆಂಡ್‌ ಓಪನ್‌ನಲ್ಲಿ ರನ್ನರ್‌ ಅಪ್‌ ಆಗಿದ್ದ ಅವರು, ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ‘ಚಿನ್ನ’ದ ಅವಕಾಶ ಕೈಚೆಲ್ಲಿದ್ದರು. ಜಕಾರ್ತದಲ್ಲಿ ಜರುಗಿದ್ದ ಏಷ್ಯನ್‌ ಕ್ರೀಡಾಕೂಟದಲ್ಲೂ ಸಿಂಧುಗೆ ಚಿನ್ನ ಕೈಗೆಟುಕದ್ದಾಗಿತ್ತು. ಫೈನಲ್‌ನಲ್ಲಿ ಅವರು ತೈ ಜು ಯಿಂಗ್‌ಗೆ ಶರಣಾಗಿದ್ದರು. ಚಿನಾದಲ್ಲಿ ಆಯೋಜನೆಯಾಗಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಫೈನಲ್‌ನಲ್ಲಿ ಮುಗ್ಗರಿಸಿದ್ದರು.

ವರ್ಷಾಂತ್ಯದಲ್ಲಿ ನಡೆದಿದ್ದ ವಿಶ್ವ ಟೂರ್‌ ಫೈನಲ್ಸ್‌ನಲ್ಲಿ ಅಂತೂ ಇಂತು ಸಿಂಧು ಚಿನ್ನದ ಬೇಟೆಯಾಡಿದ್ದರು. ಬ್ಯಾಡ್ಮಿಂಟನ್‌ನಲ್ಲಿ ಮತ್ತೆ ಸಿಂಧು ‘ಪರ್ವ’ ಶುರುವಾಯಿತು ಅಂದುಕೊಂಡವರಿಗೆ ಕಾಡಿದ್ದು ನಿರಾಸೆಯೇ. 2019ರ ಋತುವಿನಲ್ಲಿ ಅವರು ಒಂದೇ ಒಂದು ಪ್ರಶಸ್ತಿಯನ್ನೂ ಮಡಿಲಿಗೆ ಹಾಕಿಕೊಂಡಿಲ್ಲ. ಹೀಗಾಗಿಯೇ ಅವರಿಗೆ ‘ಚೋಕರ್‌’ ಹಣೆಪಟ್ಟಿ ಅಂಟಿಕೊಂಡಿದೆ.

ಸಿಂಧು ಆಟ ರುಚಿಸುತ್ತಿಲ್ಲ

ಇತ್ತೀಚಿನ ದಿನಗಳಲ್ಲಿ ಸಿಂಧು ಆಟ, ಬ್ಯಾಡ್ಮಿಂಟನ್‌ ಪ್ರಿಯರಿಗೆ ಅಷ್ಟಾಗಿ ರುಚಿಸುತ್ತಿಲ್ಲ. ಚೀನಾ, ಜಪಾನ್‌, ಸ್ಪೇನ್‌, ಚೀನಾ ತೈಪೆಯ ಆಟಗಾರ್ತಿಯರಲ್ಲಿ ನಡುಕ ಹುಟ್ಟಿಸುತ್ತಿದ್ದ ಭಾರತದ ಆಟಗಾರ್ತಿ, ಈಗ ಅವರೆದುರು ಸುಲಭವಾಗಿ ಮಂಡಿಯೂರುತ್ತಿದ್ದಾರೆ. ಯಿಂಗ್‌, ಮರಿನ್‌, ಸಂಗ್‌ ಜಿ ಹ್ಯೂನ್, ಯಮಗುಚಿ ಅವರು ಎದುರಾದರೆ ಸಿಂಧು ಸೋಲು ಖಚಿತ ಎಂಬ ಭಾವನೆ ಅಭಿಮಾನಿಗಳಲ್ಲಿ ಅಚ್ಚೊತ್ತಿಬಿಟ್ಟಿದೆ.

‘ಸಿಂಧು ತುಂಬಾ ಉದಾಸೀನದಿಂದ ಆಡುತ್ತಾರೆ, ಹಿಂದಿದ್ದ ಛಲ ಮತ್ತು ಬದ್ಧತೆಯನ್ನು ಈಗ ಅವರ ಆಟದಲ್ಲಿ ನೋಡಲು ಆಗುತ್ತಿಲ್ಲ. ಅವರು ಗೆಲುವಿಗಾಗಿ ಹೋರಾಡುವುದನ್ನೇ ಮರೆತಿದ್ದಾರೆ’ ಎಂಬ ಅಸಮಾಧಾನವೂ ಅಭಿ ಮಾನಿಗಳ ಮನದಲ್ಲಿ ಬೇರೂರಿದೆ.

ಈ ವರ್ಷದ ಏಪ್ರಿಲ್‌ ಐದರಂದು ನಡೆದಿದ್ದ ಮಲೇಷ್ಯಾ ಓಪನ್‌ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸಿಂಧು, ವಿಶ್ವ ರ‍್ಯಾಂಕಿಂಗ್‌ನಲ್ಲಿ ತನಗಿಂತಲೂ ನಾಲ್ಕು ಸ್ಥಾನ ಕೆಳಗಿದ್ದ (10ನೇ ಸ್ಥಾನ) ಸಂಗ್‌ ಜಿ ಹ್ಯೂನ್‌ ಎದುರು ಆಘಾತ ಕಂಡಿದ್ದು ಇದಕ್ಕೊಂದು ಉದಾಹರಣೆ. ಆ ಹೋರಾಟದಲ್ಲಿ ಸಿಂಧು ಅನನುಭವಿಯಂತೆ ಆಡಿದ್ದರು. ಪದೇ ಪದೇ ತಪ್ಪುಗಳನ್ನು ಮಾಡಿ ಎದುರಾಳಿಗೆ ಪಾಯಿಂಟ್ಸ್‌ ಬಿಟ್ಟುಕೊಟ್ಟಿದ್ದರು. ಅವರ ರ‍್ಯಾಕೆಟ್‌ನಿಂದ ಪರಿಣಾಮಕಾರಿ ಸರ್ವ್‌ಗಳೂ ಹೊರಹೊಮ್ಮಿರಲಿಲ್ಲ. ಆತ್ಮವಿಶ್ವಾಸದ ಕೊರತೆಯೂ ಎದ್ದು ಕಂಡಿತ್ತು. ಎರಡನೇ ಗೇಮ್‌ನಲ್ಲಿ ಅವರು ಕೇವಲ ಏಳು ಪಾಯಿಂಟ್ಸ್‌ ಗಳಿಸಲಷ್ಟೇ ಶಕ್ತವಾಗಿದ್ದು ಇದಕ್ಕೆ ಸಾಕ್ಷಿಯಂತಿತ್ತು. ‘ಲೈನ್‌ ಕಾಲ್‌’ ಮತ್ತು ಹಾಕ್‌ ಐ ಚಾಲೆಂಜ್‌ ಮಾಡುವಾಗಲೂ ಎಡವಿದ್ದರು.

ಹೋದ ತಿಂಗಳ ಅಂತ್ಯದಲ್ಲಿ ನಡೆದಿದ್ದ ಇಂಡೊನೇಷ್ಯಾ ಓಪನ್‌ ಫೈನಲ್‌ನಲ್ಲೂ ಸಿಂಧು ಅವರಿಂದ ಇದೇ ತಪ್ಪುಗಳು ಮರುಕಳಿಸಿದ್ದವು. ಜಪಾನ್‌ನ ಅಕಾನೆ ಯಮಗುಚಿ ಎದುರಿನ ಹೋರಾಟದಲ್ಲಿ ಭಾರತದ ಆಟಗಾರ್ತಿ ಕೇವಲ 51 ನಿಮಿಷಗಳಲ್ಲಿ ಸೋಲೊಪ್ಪಿಕೊಂಡಿದ್ದರು. ಈ ಹಣಾಹಣಿಯಲ್ಲಿ ಭಾರತದ ಆಟಗಾರ್ತಿ, ವೇಗದ ಆಟಕ್ಕೆ ಒತ್ತು ನೀಡಿರಲಿಲ್ಲ. ನೆಟ್‌ನ ಸಮೀಪದಲ್ಲಿ ಷಟಲ್‌ ಡ್ರಾ‍ಪ್‌ ಮಾಡುವ ಜಾಣ್ಮೆಯನ್ನೂ ಪ್ರದರ್ಶಿಸಿರಲಿಲ್ಲ. ದೀರ್ಘ ರ‍್ಯಾಲಿಗಳನ್ನು ಆಡಲೂ ವಿಫಲರಾಗಿದ್ದರು. ಪಂದ್ಯದ ನಂತರ ಸ್ವತಃ ಅವರೇ ಇದನ್ನು ಒಪ್ಪಿಕೊಂಡಿದ್ದರು.

ಬದಲಾದ ತಂತ್ರ: ಸಿಗದ ಬಿಡುವು

ಸಿಂಧು ಅವರು ಈಗ ಆಟದ ಶೈಲಿಯಲ್ಲಿ ಬದಲಾವಣೆ ಮಾಡಿ ಕೊಂಡಿದ್ದಾರೆ. ಹೊಸ ಶೈಲಿಗೆ ಒಗ್ಗಿಕೊಂಡು ಆಡುವುದಕ್ಕೆ ಕಷ್ಟ ವಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಹೋದ ವರ್ಷದ ಅಂತ್ಯದಲ್ಲಿ ನಡೆದಿದ್ದ ವಿಶ್ವ ಟೂರ್‌ ಫೈನಲ್‌ನಲ್ಲಿ ಚಿನ್ನ ಗೆದ್ದ ಬಳಿಕ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನಲ್ಲಿ (ಪಿಬಿಎಲ್‌) ಪಾಲ್ಗೊಂಡಿದ್ದರು.

ಈ ವರ್ಷವೂ ನಿರಂತರವಾಗಿ ಟೂರ್ನಿಗಳನ್ನು ಆಡುತ್ತಿದ್ದಾರೆ. ಇದರಿಂದಾಗಿ ಅವರಿಗೆ ವಿಶ್ರಾಂತಿ ಸಿಗುತ್ತಿಲ್ಲ. ಹೀಗಾಗಿ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಇದು ಅವರ ಆಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದೂ ಹಲವರು ವಿಶ್ಲೇಷಿಸಿದ್ದಾರೆ. ಸಿಂಧು, ಈಗೀಗ ಆಟದತ್ತ ಗಮನ ಕೇಂದ್ರೀಕರಿಸುತ್ತಿಲ್ಲ. ಪ್ರೊಮೋಷನ್‌ ಕಾರ್ಯಕ್ರಮಗಳಲ್ಲೇ ಮುಳುಗಿ ಹೋಗುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

‘ಸಿಂಧು ಅವರು ಆಟಕ್ಕಿಂತಲೂ ಹೆಚ್ಚು ಪ್ರೊಮೋಷನ್‌ ಮತ್ತು ಇತರೆ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದಿದ್ದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ತೇಜಸ್ ಯುದ್ಧ ವಿಮಾನ ಹಾರಾಟದಲ್ಲಿ ಭಾಗ ವಹಿಸಿದ್ದು, ಬಳಿಕ ಫ್ಯಾಷನ್‌ ಷೋ ಒಂದರಲ್ಲಿ ಕಾಣಿಸಿಕೊಂಡಿದ್ದು ಇದಕ್ಕೆ ಸಾಕ್ಷಿ. ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಮನಸ್ಸು ಚಂಚಲವಾಗುತ್ತದೆ. ಏಕಾಗ್ರತೆ ಕಳೆದುಕೊಳ್ಳುತ್ತೇವೆ. ಆಟದತ್ತ ಚಿತ್ತ ಹರಿಸುವುದು ಕಷ್ಟವಾಗುತ್ತದೆ. ಸಿಂಧು ವಿಷಯದಲ್ಲಿ ಆಗಿರುವುದೂ ಇದೆ’ ಎಂದು ಹಿರಿಯ ಆಟಗಾರ್ತಿ ಮತ್ತು ವೀಕ್ಷಕ ವಿವರಣೆಗಾರ್ತಿ ಗಿಲ್ಲಿನ್‌ ಕ್ಲಾರ್ಕ್‌ ಹೇಳಿರುವುದು ಇಲ್ಲಿ ಉಲ್ಲೇಖಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT