ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4ನೇ ತರಗತಿಯಿಂದ ಎಂಬಿಬಿಎಸ್‌ವರೆಗೆ...

ಪದವೀಧರರ ಎದುರು ತೊಡೆ ತಟ್ಟಿದ ಪ್ರಾಥಮಿಕ ಶಿಕ್ಷಣ ಪಡೆದವರು, ಚುನಾವಣಾ ಸ್ಪರ್ಧಾ ಕಣದಲ್ಲಿ ಎಸ್ಸೆಸ್ಸೆಲ್ಸಿ ಓದಿದವರೇ ಹೆಚ್ಚು
Last Updated 4 ಮೇ 2018, 8:31 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಈ ಬಾರಿ ಜಿಲ್ಲೆಯ ವಿಧಾನಸಭೆ ಚುನಾವಣೆ ಸ್ಪರ್ಧಾ ಕಣದಲ್ಲಿ 4ನೇ ತರಗತಿಯಿಂದ ಹಿಡಿದು ವೈದ್ಯಕೀಯ ಪದವಿ (ಎಂಬಿಬಿಎಸ್) ಪಡೆದವರು ಕಾಣಸಿಗುತ್ತಾರೆ. ಐದು ಕ್ಷೇತ್ರಗಳಲ್ಲಿ ‘ಅದೃಷ್ಟ’ ಪಣಕ್ಕೊಡ್ಡಿರುವ ಪ್ರಮುಖ ರಾಜಕೀಯ ಪಕ್ಷಗಳ ಪ್ರಬಲ ಅಭ್ಯರ್ಥಿಗಳಲ್ಲಿ ಪ್ರಾಥಮಿಕ ಶಾಲೆ ಓದಿದವರಿಂದ ಹಿಡಿದು ಸ್ನಾತಕೋತ್ತರ ಪದವಿ ಪಡೆದವರಿದ್ದಾರೆ.

ಅಂತಿಮ ಕಣದಲ್ಲಿ ಜಿಲ್ಲೆಯಲ್ಲಿ 77 ಅಭ್ಯರ್ಥಿಗಳಿದ್ದು ಆ ಪೈಕಿ ಶೇ 26 ರಷ್ಟು (20) ಎಸ್ಸೆಸ್ಸೆಲ್ಸಿ ಓದಿದವರಿದ್ದಾರೆ. ಎಲ್ಲ ಅಭ್ಯರ್ಥಿಗಳಲ್ಲಿ ಇವರೇ ಅತಿ ಹೆಚ್ಚಿನ ಸಂಖ್ಯೆಯವರು! ಇವರ ಅರ್ಧದಷ್ಟು (10) ಪಿಯುಸಿ ವಿದ್ಯಾರ್ಹತೆ ಹೊಂದಿವವರಿದ್ದಾರೆ.

ಅಭ್ಯರ್ಥಿಗಳ ಪೈಕಿ 8 ಪ್ರಾಥಮಿಕ, 22 ಪ್ರೌಢ ಶಿಕ್ಷಣ, 9 ಪದವೀಧರರು, 5 ಜನ ಕಾನೂನು ಪದವೀಧರರು ಗಮನ ಸೆಳೆಯುತ್ತಾರೆ. ಉಳಿದಂತೆ ವಿವಿಧ ಪದವಿ ಪೂರ್ವ ಮತ್ತು ತಾಂತ್ರಿಕ ಪದವೀಧರರು ಇದ್ದಾರೆ.

ಅತಿ ಹೆಚ್ಚು (22) ಅಭ್ಯರ್ಥಿಗಳನ್ನು ಹೊಂದಿರುವ ಚಿಂತಾಮಣಿ ಕ್ಷೇತ್ರದಲ್ಲಿ ಅತಿ ಕಡಿಮೆ ವಿದ್ಯಾರ್ಹತೆ (4ನೇ ತರಗತಿ) ಹೊಂದಿರುವ (ಸೈಯದ್‌ ಅಯೂಬ್‌ (ಫೆಡರಲ್‌ ಕಾಂಗ್ರೆಸ್‌ ಆಫ್‌ ಇಂಡಿಯಾ), ಜಮೀರ್‌ ಪಾಷಾ (ಅಂಬೇಡ್ಕರ್‌ ಸಮಾಜ ಪಕ್ಷ)) ಅಭ್ಯರ್ಥಿಗಳಿದ್ದಾರೆ. ಹೆಚ್ಚು ಎಸ್ಸೆಸ್ಸೆಲ್ಸಿಗರು (8) ಇರುವುದು ಇಲ್ಲೇ. ಈ ಪೈಕಿ ಪ್ರಮುಖ ಅಭ್ಯರ್ಥಿಗಳಲ್ಲಿ ಒಬ್ಬರಾದ ಶಾಸಕ ಎಂ.ಕೃಷ್ಣಾರೆಡ್ಡಿ ಸಹ ಸೇರುತ್ತಾರೆ.

ಕಾಂಗ್ರೆಸ್ ಅಭ್ಯರ್ಥಿ ವಾಣಿ ಕೃಷ್ಣಾರೆಡ್ಡಿ ಅವರು ಬಿಎ ಪೂರ್ಣಗೊಳಿಸಿದರೆ, ಬಿಜೆಪಿ ಅಭ್ಯರ್ಥಿ ನಾ.ಶಂಕರ್‌ ಮತ್ತು ಪಕ್ಷೇತರ ಅಭ್ಯರ್ಥಿ ಎಸ್‌.ರಚನಾ ಅವರು ಕಾನೂನು ಪದವಿ ಪಡೆದಿದ್ದಾರೆ. ಪ್ರಬಲ ಹುರಿಯಾಳುಗಳಲ್ಲಿ ಒಬ್ಬರಾದ ಡಾ.ಎಂ.ಸಿ.ಸುಧಾಕರ್ (ಭಾರತೀಯ ಪ್ರಜಾ ಪಕ್ಷ) ಅವರು ಮಂಗಳೂರಿನ ಎ.ಬಿ.ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆಯಲ್ಲಿ ಸ್ನಾತಕೋತ್ತರ (ಎಂಡಿಎಸ್‌) ಪದವಿ ಪಡೆದಿದ್ದಾರೆ.

ಜಿಲ್ಲಾ ಕೇಂದ್ರವನ್ನು ಒಳಗೊಂಡ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಮುಖ ಅಭ್ಯರ್ಥಿಗಳ ಪೈಕಿ ಕೆ.ಪಿ.ಬಚ್ಚೇಗೌಡ (ಜೆಡಿಎಸ್) ಬಿ.ಎಸ್ಸಿ, ಡಾ.ಜಿ.ವಿ.ಮಂಜುನಾಥ್ (ಬಿಜೆಪಿ) ಮತ್ತು ಡಾ.ಕೆ.ಸುಧಾಕರ್ (ಕಾಂಗ್ರೆಸ್) ಅವರು ಎಂಬಿಬಿಎಸ್ ಶಿಕ್ಷಣ ಪೂರೈಸಿದ್ದಾರೆ. ಪಕ್ಷೇತರರಲ್ಲಿ ಪ್ರಮುಖರಾಗಿರುವ ಕೆ.ವಿ.ನವೀನ್ ಕಿರಣ್ ಅವರು ಸ್ನಾತಕೋತ್ತರ ಪದವಿ (ಎಂಎ) ಪಡೆದಿದ್ದಾರೆ.

ಸಣ್ಣದೊಂದು ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ಕನಿಷ್ಠ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಉನ್ನತ ಶಿಕ್ಷಣ ಪಡೆದರೂ ಪರೀಕ್ಷೆ, ಸಂದರ್ಶನ ಎದುರಿಸಿ ಕೆಲಸ ದಕ್ಕಿಸಿಕೊಳ್ಳಲು ಕಷ್ಟ ಪಡಬೇಕು. ಕೆಲಸ ಸಿಕ್ಕರೂ ತಿಂಗಳಿಗೊಮ್ಮೆ ಸಂಬಳಕ್ಕೆ ಕಾಯಬೇಕು. ಆದರೆ ಒಮ್ಮೆ ಶಾಸಕನಾದರೆ ಜೀವನಪರ್ಯಂತ ನೆಮ್ಮದಿಯಾಗಿ ಇರಬಹುದು. ಅದಕ್ಕೆ ಯಾವುದೇ ಮಾನದಂಡ ಇಲ್ಲ. ಇಷ್ಟೇ ಓದಬೇಕು ಎಂಬ ನಿಯಮವೂ ಇಲ್ಲ. ಶಾಸಕ ಸ್ಥಾನಕ್ಕೆ ಸ್ಪರ್ಧಿಸುವವರಿಗೆ ಕನಿಷ್ಠ ವಿದ್ಯಾರ್ಹತೆ ನಿಗದಿ ಮಾಡುವುದು ಒಳಿತು. ಇದರಿಂದ ರಾಜಕೀಯದಲ್ಲಿ ಕನಿಷ್ಠ ಗುಣಮಟ್ಟದ ಮೌಲ್ಯಗಳನ್ನಾದರೂ ಉಳಿಸಲು ಸಾಧ್ಯ ಎನ್ನುತ್ತಾರೆ ಹಿರಿಯ ನಾಗರಿಕ ರಾಮಕೃಷ್ಣೇಗೌಡ.

ಜನಪ್ರತಿನಿಧಿಗೆ ನಿರ್ದಿಷ್ಟ ಮಾನದಂಡ ಬೇಕು ಎಂಬ ಬೇಡಿಕೆ ಸಾರ್ವತ್ರಿಕ ಚುನಾವಣೆ ವ್ಯವಸ್ಥೆ ಜಾರಿಗೆ ಬಂದಾಗಿನಿಂದಲೂ ಪ್ರತಿಧ್ವನಿಸುತ್ತಲೇ ಇದೆ. ಅನೇಕ ಬಾರಿ ಸಂಸದರು, ಶಾಸಕರು ಸದನಗಳಲ್ಲಿ, ಸಾರ್ವಜನಿಕ ಜೀವನದಲ್ಲಿ ತೋರುವ ಕೆಳಮಟ್ಟದ ವರ್ತನೆಗಳು ಪದೇ ಪದೇ ಪ್ರಶ್ನೆಯನ್ನು ಎತ್ತುತ್ತಲೇ ಇವೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ‘ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?’ ಎಂಬ ಪ್ರಶ್ನೆಗೆ ಉತ್ತರ ಸಿಗುವುದೇ ಇಲ್ಲ ಎಂಬುದು ಬ್ಯಾಂಕ್‌ ನೌಕರ ನಿತೀಶ್‌ ಹೇಳುವರು.

ಜೈಪಾಲ್ ರೆಡ್ಡಿ ಓದಿದ್ದು 6ನೇ ತರಗತಿ

ಗೌರಿಬಿದನೂರು ಕ್ಷೇತ್ರದ ಸ್ಪರ್ಧಾ ಕಣದಲ್ಲಿ 13 ಅಭ್ಯರ್ಥಿಗಳಿದ್ದಾರೆ. ಈ ಪೈಕಿ ಪ್ರಬಲ ಅಭ್ಯರ್ಥಿಗಳಲ್ಲಿ ಒಬ್ಬರಾದ ಕೆ.ಜೈಪಾಲ್ ರೆಡ್ಡಿ (ಬಿಜೆಪಿ) ಅವರು ಅತಿ ಕಡಿಮೆ (6ನೇ ತರಗತಿ) ಶಿಕ್ಷಣ ಪಡೆದವರು. ಕಾಂಗ್ರೆಸ್‌ ಹುರಿಯಾಳು ಎನ್.ಎಚ್.ಶಿವಶಂಕರರೆಡ್ಡಿ ಅವರು 1974ರಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಪದವಿ (ಬಿಎಸ್ಸಿ, ಎಜಿ) ಮುಗಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸಿ.ಆರ್.ನರಸಿಂಹಮೂರ್ತಿ ಮತ್ತು ಸಿಪಿಎಂ ಅಭ್ಯರ್ಥಿ ಎನ್.ಆರ್.ರವಿಚಂದ್ರರೆಡ್ಡಿ ಅವರು ಪಿಯುಸಿ ಓದಿದ್ದಾರೆ.

ಬಾಗೇಪಲ್ಲಿಯಲ್ಲಿ ‘ಬಿಎ’ ಓದಿದವರೇ ಹೆಚ್ಚು

ಬಾಗೇಪಲ್ಲಿಯಲ್ಲಿರುವ ಅಭ್ಯರ್ಥಿಗಳ ಪೈಕಿ ಬಿಎ ಪದವೀಧರರೇ ಹೆಚ್ಚಿನ (6) ಸಂಖ್ಯೆಯಲ್ಲಿದ್ದಾರೆ. ಈ ಪೈಕಿ ಪ್ರಮುಖ ಅಭ್ಯರ್ಥಿಗಳಾಗಿರುವ ಸಿ.ಆರ್.ಮನೋಹರ್ (ಜೆಡಿಎಸ್), ಪಿ.ಸಾಯಿಕುಮಾರ್ (ಬಿಜೆಪಿ) ಸೇರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಟಿಸಿಎಚ್‌ ಓದಿಕೊಂಡಿದ್ದಾರೆ. ಸಿಪಿಎಂ ಅಭ್ಯರ್ಥಿ ಜಿ.ವಿ.ಶ್ರೀರಾಮರೆಡ್ಡಿ ಅವರು ಕಾನೂನು ಪದವಿ ಪಡೆದಿದ್ದಾರೆ.

ರಾಜಣ್ಣ ಬಿಎಸ್ಸಿ ಪಾಸ್, ಮುನಿಯಪ್ಪ ಫೇಲ್

ಶಿಡ್ಲಘಟ್ಟ ವಿಧಾನಸಭೆ ಚುನಾವಣೆ ಕಣದ ಪ್ರಮುಖ ಅಭ್ಯರ್ಥಿಗಳಲ್ಲಿ ಒಬ್ಬರಾದ ವಿ.ಮುನಿಯಪ್ಪ (ಕಾಂಗ್ರೆಸ್) ಬಿಎಸ್ಸಿ ಪದವಿ ಪರೀಕ್ಷೆಯಲ್ಲಿ ಅನುತೀರ್ಣಗೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಬಿ.ಎನ್.ರವಿಕುಮಾರ್ 7ನೇ ತರಗತಿ ವರೆಗೆ ಮಾತ್ರ ಓದಿದ್ದಾರೆ. ಬಿಜೆಪಿ ಅಭ್ಯರ್ಥಿ ಎಚ್.ಸುರೇಶ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದರೆ, ಪಕ್ಷೇತರ ಅಭ್ಯರ್ಥಿಗಳಲ್ಲಿ ಪ್ರಮುಖರಾದ ಶಾಸಕ ಎಂ.ರಾಜಣ್ಣ ಬಿ.ಎಸ್ಸಿ ಮತ್ತು ಆಂಜಿನಪ್ಪ ಅವರು ಎಂಎಸ್ಸಿ ಪದವಿ ಪಡೆದಿದ್ದಾರೆ.

‘ಹೈಟೆಕ್’ ರಾಜಕಾರಣಿಗಳೇ ಅಪಾಯಕಾರಿ

ಇವತ್ತಿನ ರಾಜಕಾರಣಿಗಳ ಕಾರ್ಯವೈಖರಿ, ಧೋರಣೆ ನೋಡಿದರೆ ಎಲ್ಲಿ ಸಲ್ಲದವರು ರಾಜಕೀಯದಲ್ಲಿ ಸಲ್ಲುತ್ತಾರೆ ಎಂಬ ಮನೋಭಾವ ಜನರಲ್ಲಿ ಬೇರೂರುತ್ತಿದೆ. ಆದ್ದರಿಂದ ರಾಜಕೀಯ ಆಡಳಿತ ವ್ಯವಸ್ಥೆಯಲ್ಲಿ ವಿದ್ಯಾವಂತರು ಇರಬೇಕು ಎಂಬ ಅಪೇಕ್ಷೆ ಹೆಚ್ಚುತ್ತಿದೆ. ದುರಂತವೆಂದರೆ ಹೆಚ್ಚೆಚ್ಚು ಓದಿಕೊಂಡವರು ‘ಹೈಟೆಕ್’ ರಾಜಕಾರಣಿಗಳಾಗಿ ಅತಿ ಹೆಚ್ಚಿನ ಅಪರಾಧ, ಕಾನೂನು ಉಲ್ಲಂಘನೆ ಕೃತ್ಯಗಳಿಗೆ ಕಾರಣರಾಗುತ್ತಿದ್ದಾರೆ
– ಪ್ರಜ್ವಲ್, ಸಾಮಾಜಿಕ ಹೋರಾಟಗಾರ

ಜನರ ನಂಬಿಕೆಗೆ ದ್ರೋಹ

ಎಲ್ಲರನ್ನೂ ಒಳಗೊಳ್ಳುವಂತಹ ಸಮಾಜದ ನಿರ್ಮಾಣ ಪ್ರಜಾಪ್ರಭುತ್ವ ಮೂಲ ಆಶಯಗಳಲ್ಲಿ ಒಂದು. ಹೀಗಾಗಿಯೇ ನಮ್ಮ ಸಂವಿಧಾನ ನಿರ್ಮಾತೃಗಳು ಚುನಾವಣಾ ವ್ಯವಸ್ಥೆಯಲ್ಲಿ ವಿದ್ಯಾರ್ಹತೆ ಅಳವಡಿಸುವ ನಿರ್ಧಾರ ತೆಗೆದುಕೊಳ್ಳಲಿಲ್ಲ. ಆದರೆ ಶಾಸನಸಭೆಗಳ ಗುಣಮಟ್ಟ ದಿನೇ ದಿನೇ ಕಡಿಮೆಯಾಗುತ್ತಿರುವುದು ನೋಡಿದಾಗ ಜನಪ್ರತಿನಿಧಿಗಳು ಎನಿಸಿಕೊಂಡವರು ಜನರ ನಂಬಿಕೆಗೆ ದ್ರೋಹ ಬಗೆಯುತ್ತಿದ್ದಾರೆ ಎನಿಸುತ್ತಿದೆ
– ಸ್ವಾತಿ, ವಾಪಸಂದ್ರ ನಿವಾಸಿ

**
ರಾಜಕಾರಣಿಗಳು ಎಷ್ಟು ಓದಿಕೊಂಡಿದ್ದಾರೆ ಎಂಬುದಕ್ಕಿಂತ ಮಾನವೀಯತೆ, ಸಾಮಾಜಿಕ ಬದ್ಧತೆ, ಪ್ರಾಮಾಣಿಕತೆ, ಸರಳತೆ ಮುಖ್ಯವಾಗಬೇಕಿದೆ
– ಅನಂತರಾಮ್, ಚಾಮರಾಜಪೇಟೆ ನಿವಾಸಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT