ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಕಪ್ ಹಾಕಿ ಟೂರ್ನಿ: ಡ್ರಾಗೆ ಸಮಾಧಾನಪಟ್ಟುಕೊಂಡ ಭಾರತ

ಮಲೇಷ್ಯಾ ಎದುರು ಮಿಂಚಿದ ವಿಷ್ಣುಕಾಂತ್, ಸುನಿಲ್, ನೀಲಂ
Last Updated 29 ಮೇ 2022, 15:33 IST
ಅಕ್ಷರ ಗಾತ್ರ

ಜಕಾರ್ತ: ಜಿದ್ದಾಜಿದ್ದಿಯ ಹಣಾಹಣಿಯಲ್ಲಿ ಭಾರತ ತಂಡ ಏಷ್ಯಾಕಪ್ ಹಾಕಿ ಟೂರ್ನಿಯ ಸೂಪರ್ –4 ಹಂತದ ಎರಡನೇ ಪಂದ್ಯದಲ್ಲಿ ಮಲೇಷ್ಯಾ ಎದುರು ಡ್ರಾಗೆ ಸಮಾಧಾನಪಟ್ಟುಕೊಂಡಿತು.

ಭಾನುವಾರ ಸಂಜೆ ನಡೆದ ಪಂದ್ಯದ ಆರಂಭದಲ್ಲಿ ಎರಡು ಗೋಲುಗಳನ್ನು ಬಿಟ್ಟುಕೊಟ್ಟ ಭಾರತ ದ್ವಿತೀಯಾರ್ಧದಲ್ಲಿ ಪುಟಿದೆದ್ದು ಮೂರು ಗೋಲು ಗಳಿಸಿತು. ಆದರೆ ಅಂತಿಮ ಹಂತದಲ್ಲಿ ಗೋಲುಬಿಟ್ಟುಕೊಟ್ಟು ಜಯದ ಅವಕಾಶವನ್ನು ಕೈಚೆಲ್ಲಿತು.

ವಿಷ್ಣುಕಾಂತ್ ಸಿಂಗ್‌ (32ನೇ ನಿಮಿಷ), ಎಸ್‌.ವಿ.ಸುನಿಲ್ (53ನೇ ನಿ) ಮತ್ತು ನೀಲಮ್ ಸಂಜೀವ್‌ ಕ್ಸೆಸ್‌ (55ನೇ ನಿ) ಭಾರತಕ್ಕಾಗಿ ಚೆಂಡನ್ನು ಗುರಿ ಮುಟ್ಟಿಸಿದರು. ರಜೀ ರಹೀಂ (12, 21, 56ನೇ ನಿ) ಗಳಿಸಿದ ಹ್ಯಾಟ್ರಿಕ್‌ ಗೋಲುಗಳು ಎದುರಾಳಿ ತಂಡದ ಕೈ ಹಿಡಿದವು.

ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ 2-1ರಲ್ಲಿ ಗೆದ್ದಿದ್ದ ಭಾರತ ದ್ವಿತೀಯಾರ್ಧದಲ್ಲಿ ಒಂದು ಗೋಲಿನ ಮುನ್ನಡೆಯೊಂದಿಗೆ ಜಯದತ್ತ ಹೆಜ್ಜೆ ಹಾಕಿತ್ತು. ಈ ಮೂಲಕ ಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ಸಾಧ್ಯತೆ ಇತ್ತು. ಆದರೆ ನಂತರ ಕೈಸುಟ್ಟುಕೊಡಿತು.

ಅರನೇ ನಿಮಿಷದಲ್ಲೇ ಮಲೇಷ್ಯಾ ಮೊದಲ ಗೋಲು ಗಳಿಸುವ ಸಾಧ್ಯತೆ ಇತ್ತು. ಆದರೆ ಮುಹಮ್ಮದ್ ಹುಸೇನ್ ಅವರ ಆಕ್ರಮಣವನ್ನು ತಡೆಯುವಲ್ಲಿ ಗೋಲ್‌ಕೀಪರ್ ಸೂರಜ್ ಕರ್ಕೇರಾ ಯಶಸ್ವಿಯಾದರು. ನಂತರ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಫೈಜಲ್ ಸಾರಿ ಅವರ ಪ್ರಯತ್ನ ಕೂಡ ವಿಫಲವಾಯಿತು. ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಮಲೇಷ್ಯಾಗೆ 12ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಮಿಂಚಿನ ವೇಗದಲ್ಲಿ ಫ್ಲಿಕ್ ಮಾಡಿದ ರಹೀಮ್ ಅವರನ್ನು ತಡೆಯಲು ಕರ್ಕೇರಾಗೆ ಸಾಧ್ಯವಾಗಲಿಲ್ಲ. 21ನೇ ನಿಮಿಷದಲ್ಲೂ ಪೆನಾಲ್ಟಿ ಕಾರ್ನರ್ ಅವಕಾಶವನ್ನು ರಹೀಂ ಗೋಲಾಗಿ ಪರಿವರ್ತಿಸಿದರು.

ಮಿಂಚಿದ ಸುನಿಲ್‌

ಭಾರತದ ಮೊದಲ ಗೋಲು ಕೂಡ ಪೆನಾಲ್ಟಿ ಕಾರ್ನರ್ ಮೂಲಕ ಬಂತು. ಮೂರನೇ ಕ್ವಾರ್ಟರ್‌ನಲ್ಲಿ ಲಭಿಸಿದ ಮತ್ತೊಂದು ಪೆನಾಲ್ಟಿ ಕಾರ್ನರ್ ಭಾರತ ಕೈಚೆಲ್ಲಿತು. ಕೊನೆಯ ಕ್ವಾರ್ಟರ್‌ನಲ್ಲೂ ಎರಡು ಪೆನಾಲ್ಟಿ ಕಾರ್ನರ್‌ಗಳು ಲಭಿಸಿದವು. 53ನೇ ನಿಮಿಷದಲ್ಲಿ ಎದುರಾಳಿಯಿಂದ ಚೆಂಡನ್ನು ಕಸಿದುಕೊಂಡು ಮುನ್ನುಗ್ಗಿದ ಪವನ್ ರಾಜ್‌ಭರ್ ಅವರಿಂದ ಪಾಸ್ ಪಡೆದ ಸುನಿಲ್ ಅತ್ಯಮೋಘವಾಗಿ ಗುರಿ ಮುಟ್ಟಿಸಿದರು. ಕೊನೆಯ ಗೋಲು ಕೂಡ ಪೆನಾಲ್ಟಿ ಕಾರ್ನರ್‌ ಮೂಲಕವೇ ಬಂತು. ಸುನಿಲ್ ಅವರ ಪುಶ್‌ನಲ್ಲಿ ಸಂಜೀವ್ ಅವರು ಸುಂದರವಾಗಿ ಚೆಂಡನ್ನು ಗುರಿಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT