ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ: ಅಸ್ಮಿತಾ, ಸಿಂಧು, ಪ್ರಣಯ್‌ ಜಯಭೇರಿ

Last Updated 13 ಜುಲೈ 2022, 13:33 IST
ಅಕ್ಷರ ಗಾತ್ರ

ಸಿಂಗಪುರ: ಭಾರತದ ಮಿಥುನ್ ಮಂಜುನಾಥ್‌ ಮತ್ತು ಅಸ್ಮಿತಾ ಚಲಿಹಾ ಸಿಂಗಪುರ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಅಚ್ಚರಿಯ ಜಯ ಸಂಪಾದಿಸಿದರು. ಇಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಪಿ.ವಿ.ಸಿಂಧು, ಎಚ್‌.ಎಸ್‌.ಪ್ರಣಯ್ ಮತ್ತು ಸೈನಾ ನೆಹ್ವಾಲ್‌ ಕೂಡ ಶುಭಾರಂಭ ಮಾಡಿದರು.

ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಮಿಥುನ್‌21-17, 15-21, 21-18ರಿಂದ ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತ, ಭಾರತದ ಕಿದಂಬಿ ಶ್ರೀಕಾಂತ್ ಅವರನ್ನು ಮಣಿಸಿದರು. ಅಸ್ಮಿತಾ21-16, 21-11ರಿಂದ ಥಾಯ್ಲೆಂಡ್‌ ಆಟಗಾರ್ತಿ, ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ ಬುಸನನ್‌ ಒಂಗ್‌ಬಮ್ರುಂಗ್‌ಪನ್ ಅವರಿಗೆ ಸೋಲುಣಿಸಿದರು.

ಶ್ರೀಕಾಂತ್ ಎದುರಿನ ಪಂದ್ಯದ ಆರಂಭದಲ್ಲಿ 6–2ರಿಂದ ಮುನ್ನಡೆ ಸಾಧಿಸಿದ ಮಿಥುನ್‌, ಅದೇ ಲಯದೊಂದಿಗೆ ಮೊದಲ ಗೇಮ್ ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿದ ಶ್ರೀಕಾಂತ್‌, ವಿರಾಮದ ವೇಳೆಗೆ 11–8ರಿಂದ ಮುಂದಿದ್ದರು. ಗೇಮ್‌ನ ಅಂತ್ಯದವರೆಗೆ ಅದೇ ಮೇಲುಗೈ ಕಾಯ್ದುಕೊಂಡರು. ನಿರ್ಣಾಯಕ ಮೂರನೇ ಗೇಮ್‌ ರಂಗೇರಿತು. ಆರಂಭದಲ್ಲಿ ಮಿಥುನ್ ಮುನ್ನಡೆ ಸಾಧಿಸಿದರೂ, ಒಂದು ಹಂತದಲ್ಲಿ ಶ್ರೀಕಾಂತ್ 16–15ಕ್ಕೆ ತಲುಪಿದ್ದರು. ಆದರೆ ಕೊನೆ ಹಂತದ ಒತ್ತಡ ಮೀರುವಲ್ಲಿ ಮಿಥುನ್ ಯಶಸ್ವಿಯಾಗಿ ಗೆಲುವಿನ ಸಂಭ್ರಮದಲ್ಲಿ ಮಿಂದರು.

ಬೆಂಗಳೂರಿನ ಪ್ರಕಾಶ್‌ ಪಡುಕೋಣೆ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಮಿಥುನ್‌, ಎರಡನೇಸುತ್ತಿನಲ್ಲಿ ಐರ್ಲೆಂಡ್‌ನ ನಹತ್‌ ಎನ್‌ಗುಯೆನ್ ಸವಾಲು ಎದುರಿಸುವರು. ಅಸ್ಮಿತಾ, ಚೀನಾದ ಹಾನ್‌ ಯು ಅವರಿಗೆ ಮುಖಾಮುಖಿಯಾಗುವರು.

ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು21-15, 21-11ರಿಂದ ಬೆಲ್ಜಿಯಂನ ಲಿಯೆನ್ ಟಾನ್ ಸವಾಲು ಮೀರಿದರೆ, ಪ್ರಣಯ್‌21-13, 21-16ರಿಂದ ಥಾಯ್ಲೆಂಡ್‌ನ ಸಿತ್ತಿಕೋಮ್‌ ತಮ್ಮಾಸಿನ್ ಅವರನ್ನು ಮಣಿಸಿದರು.

ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಕೂಡ ಮೊದಲ ತಡೆ ದಾಟುವಲ್ಲಿ ಯಶಸ್ವಿಯಾದರು. ಅವರು21-18, 21-14ರಿಂದ ಭಾರತದವರೇ ಆದ ಮಾಳವಿಕಾ ಬನ್ಸೋದ್ ವಿರುದ್ಧ ಪಾರಮ್ಯ ಮೆರೆದರು.

ಪೂಜಾ ದಂಡು– ಆರತಿ ಸಾರಾ ಸುನಿಲ್‌ ಮಹಿಳಾ ಡಬಲ್ಸ್‌ನಲ್ಲಿ ಎರಡನೇ ಸುತ್ತು ತಲುಪಿದರು. ಚೀನಾ ತೈಪೆಯ ಹು ಲಿಂಗ್‌ ಫಾಂಗ್‌ ಮತ್ತು ಲಿನ್ ಕ್ಸಿಯಾವೊ ಹಿಂದೆ ಸರಿದ ಕಾರಣ ಭಾರತದ ಜೋಡಿಗೆ ವಾಕ್‌ಓವರ್ ಲಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT