ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರಕ್ಷಣೆಗೆ ಅತ್ಯುತ್ತಮ ಸಮರ ಕಲೆ ‘ಮುಯ್‌ ಥಾಯ್‌’

Last Updated 8 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಮುಯ್‌ಥಾಯ್‌ನಲ್ಲಿ ವ್ಯಕ್ತಿಯ ಎಂಟು ಕೀಲುಗಳೇ ಆಯುಧಗಳು. ಎರಡು ಮುಷ್ಟಿ, ಎರಡು ಮೊಣ ಕೈ, ಎರಡು ಮೊಣಕಾಲು ಮತ್ತು ಎರಡು ಮುಂಗಾಲುಗಳನ್ನು ಬಳಸಿ ಎದುರಾಳಿ ಹೊಡೆತಗಳಿಗೆ ತಡೆ ಒಡ್ಡುವ, ಮಣಿಸುವ, ಆಕ್ರಮಣಕಾರಿಯಾದ ಸಮರ ಕಲೆ.ಥಾಯ್ಲೆಂಡ್‌ನ ರಾಷ್ಟ್ರೀಯ ಕ್ರೀಡೆಯಾಗಿರುವ ‘ಮುಯ್‌ ಥಾಯ್‌’ ಮೈ ಕೈ ಗಟ್ಟಿಗೊಳಿಸುತ್ತದೆ. ಅಷ್ಟೇ ಅಲ್ಲ, ಸ್ವರಕ್ಷಣೆಗೂ ಸಹಾಯಕವಾಗಿದೆ.

ಇದನ್ನು ಥಾಯ್‌ ಕಿಕ್‌ ಬಾಕ್ಸಿಂಗ್‌ ಎಂದೂ ಕರೆಯುತ್ತಾರೆ. ನಿಂತು ಹೋರಾಡುವ ಸಮರ ಕಲೆಯಾಗಿರುವ ಮುಯ್‌ ಥಾಯ್‌ನಲ್ಲಿ ತಲೆಯಿಂದ ಹಿಡಿದು ಅಂಗುಷ್ಠದವರೆಗೂ ಎಲ್ಲಿ ಬೇಕಾದರೂ ಹೊಡೆಯಬಹುದು. ನೆಲಕ್ಕೆ ಬಿದ್ದ ತಕ್ಷಣ ಆಟವನ್ನು ಮುಂದುವರಿಸಲು ಅವಕಾಶ ಇಲ್ಲ.‌

ಸ್ವರಕ್ಷಣೆಗೆ ಅತ್ಯುತ್ತಮ ಸಮರ ಕಲೆ

ಜಿಮ್‌ಗಳಲ್ಲಿ ದೇಹ ಹುರಿಗಟ್ಟಿಸಬಹುದು. ಫಿಟ್‌ ಆಗಬಹುದು. ಆದರೆ, ‌ಸ್ವರಕ್ಷಣಾ ತಂತ್ರಗಳನ್ನು ಜಿಮ್‌ ನೀಡಲಾರದು. ಅಪಾಯಕರ ಸನ್ನಿವೇಶಗಳನ್ನು ಎದುರಿಸಲುಸ್ವರಕ್ಷಣಾ ಕೌಶಲಗಳೂ ಇರಬೇಕಾಗುತ್ತದೆ. ಇಂಥ ಕೌಶಲಗಳನ್ನುಮುಯ್‌ ಥಾಯ್‌ ಕಲಿಸುತ್ತದೆ.

ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸುತ್ತದೆ: ಸಮರಕಲೆಗಳಲ್ಲಿ ದೇಹ ಮತ್ತು ಮನಸ್ಸುಗಳೆರಡೂ ಒಂದಕ್ಕೊಂದು ಹೆಗಲಾಗಿರಬೇಕು. ಇವೆರಡರ ಸಹಕಾರದಿಂದ ಹೋರಾಡಬಹುದು. ಒಮ್ಮೆ ಮೈಮರೆತರೆ ಎದುರಾಳಿಯ ಹೊಡೆತ ನಮ್ಮನ್ನು ತಲುಪಿರುತ್ತದೆ. ಸದಾ ಜಾಗರೂಕವಾಗಿರುವ ಮನಸ್ಥಿತಿಯನ್ನು ಈ ಮುಯ್‌ ಥಾಯ್‌ ನಿರ್ಮಿಸಿಕೊಡುತ್ತದೆ.

ಎಚ್ಚರ ಸ್ಥಿತಿ

ಒಂದು ಸೆಕೆಂಡ್‌ನ ಹತ್ತು ಬಾರಿ ವಿಭಾಗಿಸಿದ ಸಮಯದಲ್ಲಿ ಮುಯ್‌ ಥಾಯ್‌ನಒಂದು ಕಿಕ್‌ಅಪ್ಪಳಿಸುತ್ತದೆ. ಹೊಡೆತವು ನಮ್ಮ ಕಣ್ಣುಗಳನ್ನು ಮಿಟುಕಿಸಲು ಅವಕಾಶ ನೀಡದಷ್ಟು ವೇಗವಾಗಿರುತ್ತದೆ. ಹೀಗಿರುವಾಗ ಇಡೀ ಮೈ ಎಚ್ಚರ ಇರಬೇಕಾಗುತ್ತದೆ. ನಮ್ಮ ಮನಸ್ಸು ಕೂಡ ಹೊಡೆತಕ್ಕೆ ತಡೆಯೊಡ್ಡುತ್ತಾ, ಮತ್ತೊಂದು ಹೊಡೆತವನ್ನು ಪೋಣಿಸುವಂತೆ ಓಡುತ್ತಿರಬೇಕಾಗುತ್ತದೆ.

ತಪ್ಪಿಸಿಕೊಳ್ಳುವ ಕಲೆ

ಕ್ರಿಕೆಟ್‌ನಲ್ಲಿ ಚೆಂಡು ಬ್ಯಾಟ್ಸ್‌ಮನ್‌ ಗುರಿಯಾಗಿಸಿ ಅಪ್ಪಳಿಸುವಂತೆ ಮುಯ್‌ ಥಾಯ್‌ನಲ್ಲಿ ಹೊಡೆತಗಳು ಮಿಲಿ ಸೆಕೆಂಡ್‌ಗಳಲ್ಲಿ ಎರಗುತ್ತವೆ. ಹೀಗಾಗಿ ಅವುಗಳಿಗೆ ತಡೆಯೊಡ್ಡಬೇಕು. ಕ್ರಿಕೆಟ್‌ನಲ್ಲಿ ವೇಗವಾಗಿ ಬರುವ ಚೆಂಡಿಗೆ ಬೌಂಡರಿಗೆ ದಿಕ್ಕು ತೋರುವ ಬ್ಯಾಟ್ಸ್‌ಮನ್‌ನಂತೆಹೊಡೆತದ ಪರಿಣಾಮವನ್ನು ತಪ್ಪಿಸಲು ಮುಯ್‌ ಥಾಯ್‌ ಪಟು ನಿರಂತರ ಹೋರಾಟ ನಡೆಸಬೇಕು. ಹೊಡೆತಕ್ಕೆ ಬೇರೆ ದಿಕ್ಕನ್ನು ತೋರಿದಾಗ ಮಾತ್ರ ಆಘಾತದಿಂದ ಪಾರಾಗಬಹುದು.

ತಂತ್ರಪೂರ್ಣ ಕಲೆ

ಮುಯ್‌ ಥಾಯ್‌ನ ಒಂದು ಹೊಡೆತದಲ್ಲಿ 80ರಿಂದ 100 ಕೆ.ಜಿಯಷ್ಟು ತೂಕ ಇರುತ್ತದೆ. ಇಷ್ಟು ಕೆ.ಜಿ ತೂಕದ ಹೊಡೆತವನ್ನು ಮಿಲಿ ಗ್ರಾಂಗೆ ವರ್ಗಾಯಿಸಲು ಚಾಕಚಕ್ಯತೆ ಬೇಕಾಗುತ್ತದೆ. ಹೊಡೆತದ ಪರಿಣಾಮವನ್ನು ತಪ್ಪಿಸಲೂ ಮುಯ್‌ ಥಾಯ್‌ ತನ್ನದೇ ಆದ ತಂತ್ರಗಳನ್ನು ಹೊಂದಿದೆ.

ಧ್ಯಾನ ಕಲೆ

ಸಮರ ಕಲೆಗಳು ಮನುಷ್ಯನ ಆಕ್ರಮಣಶೀಲತೆಯನ್ನು ಹೆಚ್ಚಿಸುವುದಷ್ಟೇ ಅಲ್ಲ. ತಾಳ್ಮೆಯನ್ನೂಕಲಿಸುತ್ತವೆ. ಸಮಚಿತ್ತತೆ ಕೊಡುತ್ತದೆ. ಸಂದರ್ಭವನ್ನು ಹತೋಟಿಗೆ ತೆಗೆದುಕೊಳ್ಳುವುದನ್ನು ಕಲಿಸುತ್ತದೆ. ಜೀವನವನ್ನು ಎದುರಿಸಲು ಬೇಕಾದ ಬಲವನ್ನು ಇವು ತುಂಬಿಕೊಡುತ್ತವೆ.

ಸ್ವರಕ್ಷಣೆಗಾಗಿ ಮಾತ್ರವೇ ಬಳಸಬೇಕು

ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವವರಿಗೆ ನೀಡುವ ತರಬೇತಿಯನ್ನೇ ಫಿಟ್‌ನೆಸ್‌ಗಾಗಿ ಮುಯ್‌ ಥಾಯ್‌ ಕಲಿಯುವವರಿಗೂ ನೀಡಲಾಗುತ್ತದೆ. ಈ ಕಲೆ ಸಂಪೂರ್ಣ ಸ್ವರಕ್ಷಣೆಗಾಗಿ ಬಳಕೆಯಾಗುವಂತೆ ಎಚ್ಚರವಹಿಸಲಾಗುತ್ತದೆ. ಸಾಮಾನ್ಯರ, ಅಮಾಯಕರ ಮೇಲೆ ಪ್ರಯೋಗಿ‌ಸುವುದು ತಪ್ಪು.ಪಾರಾಗುವ ದಾರಿಯಿದ್ದಾಗ ಯಾವುದೇ ಪ್ರಾಣಿ ನಮ್ಮ ಮೇಲೆ ದಾಳಿ ಮಾಡುವುದಿಲ್ಲ. ಆದರೆ, ಎಲ್ಲ ಮಾರ್ಗಗಳನ್ನು ಮುಚ್ಚಿದ್ದಾಗ ಸ್ವರಕ್ಷಣೆಗಾಗಿ ದಾಳಿ ಮಾಡುತ್ತವೆ. ಮನುಷ್ಯನು ಹಾಗೇ ಅಪಾಯಕಾರಿ ಸಂದರ್ಭಗಳಿಂದ ಪಾರಾಗಲು ನೋಡಬೇಕು. ಮುಯ್‌ ಥಾಯ್‌ ಗೊತ್ತಿದೆ ಎಂದು ದಾಳಿ ಮಾಡಲು ಹೋಗಬಾರದು ಎನ್ನುತ್ತಾರೆ ಮೈಸೂರಿನಲ್ಲಿ 26 ವರ್ಷಗಳಿಂದ ಸಮರಕಲೆಗಳನ್ನು ಹೇಳಿಕೊಡುತ್ತಿರುವವಿಕ್ರಮ್‌.

ಮಿಶ್ರ ಸಮರ ಕಲೆಯ ಭಾಗ

ಮುಯ್‌ ಥಾಯ್‌ ಕಳೆದ ಎರಡು ದಶಕಗಳಿಂದ ಜನಪ್ರಿಯಗೊಂಡಿರುವ ಎಂಎಂಎ (ಮಿಕ್ಸ್‌ ಮಾರ್ಷಲ್‌ ಆರ್ಟ್ಸ್) ಭಾಗವೂ ಹೌದು.ಮಿಶ್ರ ಸಮರ ಕಲೆಯಲ್ಲಿ ನಿಂತು ಹೋರಾಡುವಾಗ ಇದರ ತಂತ್ರಗಳನ್ನು ಬಳಸಲಾಗುತ್ತದೆ.

ನಿರಂತರ ಅಭ್ಯಾಸ

ನುರಿತ ಮಾರ್ಷಲ್‌ ಆರ್ಟ್ಸ್‌ ಪಟು ಆಗಲು ನಿರಂತರ ಅಭ್ಯಾಸ ನಡೆಸಿರಬೇಕು. ಒಂದೇ ಮಾದರಿ ಹೊಡೆತವನ್ನು 10 ಸಾವಿರ ಬಾರಿ ಅಭ್ಯಾಸ ಮಾಡಿದ್ದರೆ, ಈ ಹೊಡೆತದ ಮಾದರಿಯನ್ನುಸೂಕ್ತ ಸಂದರ್ಭದಲ್ಲಿ ಪ್ರಯೋಗಿಸುವ ನೈಪುಣ್ಯತೆ ನಮ್ಮ ಮಿದುಳು ಮತ್ತು ಕೀಲುಗಳಿಗೆ ಬರುತ್ತದೆ. ಫಿಟ್‌ನೆಸ್‌ಗಾಗಿ ಮುಯ್‌ ಥಾಯ್‌ ಕಲಿಯುವವರು ದಿನ 60ರಿಂದ 90 ನಿಮಿಷ ಅಭ್ಯಾಸ ನಡೆಸಬೇಕು.

ಕ್ರೀಡಾ ಸ್ಫೂರ್ತಿ ಹೆಚ್ಚಿಸುತ್ತದೆ

ಆಗಂತುಕನನ್ನು, ವಿಷಮ ಸನ್ನಿವೇಶವನ್ನು ಎದುರಿಸಲು ಮಾತ್ರವೇ ಸಮರಕಲೆಗಳು ಬಳಕೆಯಾಗುವುದಿಲ್ಲ. ನಮ್ಮ ಆರೋಗ್ಯಕ್ಕಾಗಿ ಕಾಯಿಲೆ, ಆಲಸ್ಯ, ಉದಾಸೀನತೆಯನ್ನು ಕಳಚುತ್ತವೆ. ಅಲ್ಲದೇ ಎದುರಾಳಿಯನ್ನು ಗೌರವಿಸುವ ಕ್ರೀಡಾಸ್ಫೂರ್ತಿಯನ್ನೂ ನೀಡುತ್ತದೆ.

ಎಲ್ಲರೂ ಕಲಿಯಬಹುದು

4ರಿಂದ 14 ವರ್ಷದ ಮಕ್ಕಳಿಗೆ ವಿಶೇಷ ತರಗತಿಗಳು ಇರುತ್ತವೆ. ಇವರಿಗೆ ಮಾಡಿಸಬೇಕಾದ ಅಭ್ಯಾಸದ ವಿಧಾನ ಬೇರೆಯಾಗಿರುತ್ತದೆ. 14ರಿಂದ 60ರವರೆಗೆ ತರಬೇತಿ ಒಂದೇ ಕ್ರಮದಲ್ಲಿ ಇರುತ್ತದೆ. ಆದರೆ, ದೇಹದ ಸಾಮರ್ಥ್ಯಕ್ಕೆ ಅನುಗುಣವಾಗಿ ತರಬೇತಿ ನೀಡಲಾಗುತ್ತದೆ. ಇದನ್ನೇ ವೃತ್ತಿಪರವಾಗಿ ತೆಗೆದುಕೊಳ್ಳುವವರಿಗೆ ಅಭ್ಯಾಸ ಅವಧಿ ಹೆಚ್ಚಾಗಿರುತ್ತದೆ. ತಂತ್ರಗಳನ್ನು ಕಲಿಯಬೇಕೆಂದರೆ ಹೆಚ್ಚು ಅಭ್ಯಾಸ ನಡೆಸಿರಬೇಕಾಗುತ್ತದೆ.

ಮುಯ್‌ ಥಾಯ್‌, ಎಂಎಂಎ ಚಾಂಪಿಯನ್‌ಷಿಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಬಹುದು. ಒಬ್ಬ ಮುವ್‌ಥಾಯ್‌ ಅಥವಾ ಎಂಎಂಎ ಪಟುವನ್ನು ಹೇಗೇ ತಯಾರು ಮಾಡಬೇಕೋ ಹಾಗೇಯೇ ಫಿಟ್‌ನೆಸ್‌ ಕಾಯ್ದುಕೊಳ್ಳಲು ಬಂದವರಿಗೂ ತರಬೇತಿ ಇರುತ್ತದೆ. ಫಿಟ್‌ನೆಸ್‌ ಪಾಠಗಳು ಎಲ್ಲರಿಗೂ ಒಂದೇ. ಫಿಟ್‌ನೆಸ್‌ಗೆ ಕಾಯ್ದುಕೊಳ್ಳುವವರಿಗೆ ಒಂದು. ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವವರಿಗೆ ಇನ್ನೊಂದು ತರಬೇತಿ ಇರುವುದಿಲ್ಲಎನ್ನುತ್ತಾರೆ ವಿಕ್ರಮ್‌.

ಮುಯ್‌ ಥಾಯ್‌ ಹುಟ್ಟಿದ್ದು ಹೀಗೆ..

‘ಮುಯ್‌ ಥಾಯ್‌’ ಪೂರ್ವ ಹೆಸರು ಮುಯ್‌ ಬೊರನ್. ಸಿಯಾಮಿ (ಥಾಯ್ಲೆಂಡ್‌)‌ಯೋಧರುಯುದ್ಧದಲ್ಲಿ ಶಸ್ತ್ರಗಳನ್ನು ಕಳೆದುಕೊಂಡಾಗ ತಮ್ಮನ್ನು ರಕ್ಷಿಸಿಕೊಳ್ಳಲು ಈ ಕಲೆಯನ್ನು ಶೋಧಿಸಿದರು. ಇದೊಂದು ಸಮೂಹ ಸಂಶೋಧನಾ ಸಮರ ಕಲೆಯಾಗಿದೆ.

ಮುಯ್‌ ಥಾಯ್‌ ಕ್ರೀಡಾ ರೂಪ ತಾಳಲು ಬರ್ಮಾ–ಥಾಯ್ಲೆಂಡ್‌ ರಾಜಮನೆತನಗಳನಡುವೆ 17ನೇ ಶತಮಾನದಲ್ಲಿ ನಡೆದ ಯುದ್ಧ ಕಾರಣ.ನಯ್ ಖಾನಮ್‌ಟಾಮ್ ಎಂಬ ಯೋಧ ‘ಮುಯ್‌ ಬೊರನ್‌’ ನುರಿತ ಪಟುವಾಗಿದ್ದು, ಯುದ್ಧದಲ್ಲಿ ಬರ್ಮಾದ ಸೆರೆಯಾಳಾದ. ಬರ್ಮಾ ಯೋಧರು ಇವನ ‘ಮುಯ್‌ ಬೊರಾನ್’ ಕಲೆಗೆ ಬೆರಗಾಗಿ ಸ್ಪರ್ಧೆಯೊಂದನ್ನು ಏರ್ಪಡಿಸಿದರು. ಅದರಲ್ಲಿ ವಿಜಯಿಯಾದರೆ ಅವನಿಗೆ ಸ್ವಾತಂತ್ರ್ಯ ದಕ್ಕುತ್ತಿತ್ತು. ಬರ್ಮಾದ ಯೋಧರನ್ನು ಸುಲಭವಾಗಿ ಮಣಿಸಿದನಯ್ ತನ್ನ ತಾಯ್ನೆಲಕ್ಕೆ ಹಿಂದುರುಗಿದ. ಅಲ್ಲಿ ಅಭೂತಪೂರ್ವ ಸ್ವಾಗತ ಸಿಕ್ಕಿತು. ಅವನ ಹೋರಾಟ ಮಾದರಿಯೇ (ಫೈಟಿಂಗ್ ಸ್ಟೈಲ್‌) ‘ಮುಯ್‌ ಥಾಯ್‌’ ಆಯಿತು.

‘ಪೂರ್ವಗ್ರಹ ಸಲ್ಲ’

ಸಮರ ಕಲೆಗಳೆಂದರೆ ಇಟ್ಟಿಗೆ, ಹೆಂಚು, ಕಲ್ಲು ಹೊಡಿಯಬೇಕು ಎಂಬ ಪೂರ್ವಗ್ರಹಗಳು ಇವೆ. ಹೀಗಾಗಿಯೇ ಹಲವರು ಫಿಟ್‌ನೆಸ್‌ಗಾಗಿ ಸಮರಕಲೆಗಳನ್ನು ಕಲಿಯಲು ಹಿಂಜರಿಯುತ್ತಾರೆ. ಬೆಟ್ಟವನ್ನು ಪುಡಿ ಮಾಡುವಂತಹ ಮನೋಬಲವನ್ನು ಮತ್ತು ಶಕ್ತಿಯನ್ನು ಮುಯ್‌ ಥಾಯ್‌ನಂತಹ ಸಮರಕಲೆಗಳು ನೀಡುತ್ತವೆ ಎಂಬ ದೃಷ್ಟಿಯಿಂದ ನಾವು ಕಲಿಯಬೇಕಿದೆ.

ಇಟ್ಟಿಗೆ, ಕಲ್ಲು ಹೆಂಚಿಗೆ ಹೊಡೆದರೆ ಅವು ಮತ್ತೆ ನಮಗೆ ವಾಪಾಸು ಹೊಡಿಯುವುದಿಲ್ಲ. ಮನುಷ್ಯ ಮತ್ತು ಮನುಷ್ಯನು ಮಾತ್ರವೇ ಹೊಡೆಯಲು ಸಾಧ್ಯ.ಸ್ವರಕ್ಷಣೆಗಾಗಿ ಮುಯ್‌ ಥಾಯ್‌ ಅದ್ಭುತ ಸಹಾಯ ನೀಡುತ್ತದೆ. ತೂಕ ಕಡಿಮೆ ಇದ್ದವರೂ ಬಲಾಢ್ಯರನ್ನು ಸುಲಭವಾಗಿ ಮಣಿಸಬಲ್ಲರು. ಅಪಾಯಕರ ಸಂದರ್ಭಗಳಿಂದ ಸುಲಭವಾಗಿ ಪಾರಾಗುವುದನ್ನು ಮುಯ್‌ ಥಾಯ್‌ ಕಲಿಸುತ್ತದೆ ಎನ್ನುತ್ತಾರೆ ಮೈಸೂರಿನಅಕಾಡೆಮಿ ಆಫ್‌ ಮಾರ್ಷಲ್‌ ಸೈನ್ಸ್‌ನ ಕೋಚ್‌ ಎಂ.ಎನ್‌. ವಿಕ್ರಮ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT