ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋರ್ಚುಗಲ್‌ನಲ್ಲಿ ನೀರಜ್‌ ಚೋಪ್ರಾ ಸ್ಪರ್ಧೆ, ಅಭ್ಯಾಸ

Last Updated 7 ಜೂನ್ 2021, 10:57 IST
ಅಕ್ಷರ ಗಾತ್ರ

ನವದೆಹಲಿ: ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿರುವ ಭಾರತದ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಅವರು ಪೋರ್ಚುಗಲ್ ತಲುಪಿದ್ದು ಲಿಸ್ಬನ್‌ನಲ್ಲಿ ಇದೇ 10ರಂದು ನಡೆಯಲಿರುವ ಕ್ರೀಡಾಕೂಟವೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಒಂದು ವರ್ಷದ ನಂತರ ಅಂತರರಾಷ್ಟ್ರೀಯ ಸ್ಪರ್ಧಾಕಣದಲ್ಲಿ ಕಾಣಸಿಕೊಳ್ಳಲಿದ್ದಾರೆ.

ಕಳೆದ ವರ್ಷ ಜನವರಿಯಲ್ಲಿ ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ 87.86 ಮೀಟರ್ಸ್‌ ದೂರ ಎಸೆಯುವ ಮೂಲಕ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದರು. ಅರ್ಹತೆಗೆ ನಿಗದಿ ಮಾಡಿದ್ದ ದೂರ 85 ಮೀಟರ್ಸ್‌ ಆಗಿತ್ತು. ಆ ನಂತರ ಯಾವುದೇ ಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.‌

‘ಲಿಸ್ಬನ್‌ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ನಡೆಯಲಿರುವ ಸಿಟಾಡೆ ಡಿ ಲಿಸ್ಬನ್ ಕೂಟದಲ್ಲಿ ನೀರಜ್‌ ಭಾಗವಹಿಸಲಿದ್ದಾರೆ. ಜೂನ್ 22ರಂದು ಸ್ವೀಡನ್‌ನಲ್ಲಿ ನಡೆಯಲಿರುವ ಕಾರ್ಲ್‌ಸ್ಟಡ್ ಗ್ರ್ಯಾನ್‌ಪ್ರಿ ಸೇರಿದಂತೆ ಅವರಿಗೆ ಇನ್ನಷ್ಟು ಕ್ರೀಡಾಕೂಟಗಳಲ್ಲಿ ಅವಕಾಶ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು’ ಎಂದು ಅವರ ಆಪ್ತ ಮೂಲಗಳು ಸೋಮವಾರ ತಿಳಿಸಿವೆ.

‘ಅವರು ಭಾನುವಾರ ಲಿಸ್ಬನ್ ತಲುಪಿದ್ದಾರೆ. ಅಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ಅಭ್ಯಾಸವನ್ನೂ ನಡೆಸಲಿದ್ದಾರೆ. ಭಾರತದಿಂದ ತೆರಳಲು ಬಹುತೇಕ ರಾಷ್ಟ್ರಗಳಲ್ಲಿ ನಿರ್ಬಂಧ ಇರುವುದರಿಂದ ಈ ಅವಕಾಶ ಮಹತ್ವದ್ದು. ಸತತ ಪ್ರಯತ್ನದ ಫಲವಾಗಿ ನೀರಜ್‌ಗೆ ಪೋರ್ಚುಗಲ್‌ನಲ್ಲೂ ಕುಸ್ತಿಪಟು ಬಜರಂಗ್ ಪೂನಿಯಾಗೆ ರಷ್ಯಾದಲ್ಲೂ ಅಭ್ಯಾಸಕ್ಕೆ ಅವಕಾಶ ಸಿಕ್ಕಿದೆ’ ಎಂದು ಪ್ರಾಯೋಜಕರಾದ ಜೆಎಸ್‌ಡಬ್ಯು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥ್ ಜಿಂದಾಲ್ ವಿವರಿಸಿದ್ದಾರೆ.

ಅಭ್ಯಾಸದ ಕೊರತೆಯಿಂದಾಗಿ ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಲು ಸಾಧ್ಯವಿಲ್ಲ ಎಂದು ಚೋಪ್ರಾ ಕೆಲವು ವಾರಗಳ ಹಿಂದೆ ಬೇಸರ ‌ವ್ಯಕ್ತಪಡಿಸಿದ್ದರು. ಮಾರ್ಚ್‌ನಲ್ಲಿ ನಡೆದಿದ್ದ ಇಂಡಿಯನ್ ಗ್ರ್ಯಾನ್‌ ಪ್ರಿಯಲ್ಲಿ 88.07 ಮೀಟರ್ ದೂರ ಎಸೆದು ಅವರು ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದರು.

ದಕ್ಷಿಣ ಆಫ್ರಿಕಾದಲ್ಲಿ ಒಲಿಂಪಿಕ್ಸ್‌ ನಡೆದಿದ್ದ ಕೂಟದ ನಂತರ ಸ್ವಲ್ಪ ದಿನ ಟರ್ಕಿಯಲ್ಲಿ ಅಭ್ಯಾಸ ಮಾಡಿದ್ದರು. ಅಷ್ಟರಲ್ಲಿ ಕೋವಿಡ್ ಏರುಗತಿಯಲ್ಲಿ ಸಾಗಿದ್ದರಿಂದ ವಾಪಸಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT