ಮಂಗಳವಾರ, ಅಕ್ಟೋಬರ್ 19, 2021
23 °C

ಪ್ಯಾರಿಸ್ ಒಲಿಂಪಿಕ್ಸ್‌ವರೆಗೂ ಕ್ಲಾಸ್ ಬಾರ್ಟೊನೀಜ್ ಕೋಚ್ ಆಗಿರಲಿ: ನೀರಜ್ ಚೋಪ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜರ್ಮನಿಯ ಕ್ಲಾಸ್ ಬಾರ್ಟೊನೀಜ್ ಅವರನ್ನೇ 2024ರ ಒಲಿಂಪಿಕ್ ಕೂಟದವರೆಗೂ ತಮ್ಮ ಕೋಚ್ ಆಗಿ ಮುಂದುವರಿಸಬೇಕು ಎಂದು ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತ ಜಾವೇಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಹೇಳಿದ್ದಾರೆ.

‘ಕೆಲವು ಕೋಚ್‌ಗಳು ನಮ್ಮ ಅಭ್ಯಾಸ ಸಂದರ್ಭದಲ್ಲಿ ತಂತ್ರಗಳನ್ನು ಕಲಿಸಲು, ಕೋಲು ಹಿಡಿದು ಬೆನ್ನುಹತ್ತುತ್ತಾರೆ. ಆದರೆ, ಕ್ಲಾಸ್ ಅವರ ಶೈಲಿಯೇ ವಿಭಿನ್ನ. ಅವರೊಂದಿಗೆ ನನ್ನ ಹೊಂದಾಣಿಕೆ ಉತ್ತಮವಾಗಿದೆ. ಅದಕ್ಕಾಗಿಯೇ ಅವರು ಮುಂದಿನ ಒಲಿಂಪಿಕ್ ಕೂಟದವರೆಗೂ ಮುಂದುವರಿಯಬೇಕು’ ಎಂದು ಚೋಪ್ರಾ, ‘ಇಂಡಿಯಾ ಟುಡೆ ಕಾನ್‌ಕ್ಲೇವ್’ ಚರ್ಚೆ ಕಾರ್ಯಕ್ರಮದಲ್ಲಿ ಹೇಳಿದರು.

‘ಟೋಕಿಯೊ ಒಲಿಂಪಿಕ್ ಜಾವೆಲಿನ್ ಥ್ರೋ ಫೈನಲ್‌ಗೂ ಮುನ್ನ ಎರಡು–ಮೂರು ಥ್ರೋಗಳ ವಾರ್ಮ್ ಅಪ್ ಮಾತ್ರ ಮಾಡಿದ್ದೆ. ಆದರೆ, ಬಹಳಷ್ಟು ಪ್ರತಿಸ್ಪರ್ಧಿಗಳು ಎರಡು ಗಂಟೆಗಳ ಮೊದಲೇ ಬಂದು ಅಭ್ಯಾಸ ಮಾಡಿದದರು. ಸ್ಪರ್ಧೆಯ ಕಣದಲ್ಲಿ ನಾನು ಶ್ರೇಷ್ಠ ಮಟ್ಟದ ಥ್ರೋ ಹಾಕುವ ಗುರಿ ಇಟ್ಟುಕೊಂಡಿದ್ದೆ. ಅದಕ್ಕಾಗಿ ಶಕ್ತಿಯನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿತ್ತು. ಟೋಕಿಯೊದಲ್ಲಿ ಬಿಸಿಲಿನ ತಾಪವೂ ವಿಪರೀತವಾಗಿದ್ದ ಕಾರಣಕ್ಕೇ ಕೋಚ್ ನನಗೆ ಈ ಸಲಹೆ ಕೊಟ್ಟಿದ್ದರು’ ಎಂದು ಚೋಪ್ರಾ ವಿವರಿಸಿದರು.

ಸ್ಪೋರ್ಟ್ಸ್‌ ಬಯೋ ಮೆಕ್ಯಾನಿಕ್ ಪರಿಣತರೂ ಆಗಿರುವ ಕ್ಲಾಸ್ 2019ರಿಂದ ಚೋಪ್ರಾಗೆ ತರಬೇತಿ ನೀಡುತ್ತಿದ್ದಾರೆ. ವಿಶ್ವದಾಖಲೆಯ ಜಾವೆಲಿನ್ ಥ್ರೋ ಪಟು ಯುವೆ ಹಾನ್ ಅವರೂ ನೀರಜ್‌ಗೆ ಮಾರ್ಗದರ್ಶನ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು