ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ಸುತ್ತಿಗೆ ಪ್ರಣೀತ್‌, ಕಿರಣ್

ಥಾಯ್ಲೆಂಡ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿ
Last Updated 1 ಫೆಬ್ರುವರಿ 2023, 20:11 IST
ಅಕ್ಷರ ಗಾತ್ರ

ಬ್ಯಾಂಕಾಕ್‌ (ಪಿಟಿಐ): ಭಾರತದ ಬಿ.ಸಾಯಿ ಪ್ರಣೀತ್ ಮತ್ತು ಕಿರಣ್ ಜಾರ್ಜ್ ಅವರು ಥಾಯ್ಲೆಂಡ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಇಲ್ಲಿ ನಡೆಯುತ್ತಿರುವ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಸೆಣಸಾಟದಲ್ಲಿ ಬುಧವಾರ ಪ್ರಣೀತ್‌ 21-13, 21-14ರಿಂದ ಡೆನ್ಮಾರ್ಕ್‌ನ ಮ್ಯಾಡ್ಸ್ ಕ್ರಿಸ್ಟೊಫರ್ಸನ್‌ ಅವರನ್ನು ಪರಾಭವಗೊಳಿಸಿದರು. 31 ನಿಮಿಷಗಳಲ್ಲಿ ಈ ಹಣಾಹಣಿ ಮುಕ್ತಾಯವಾಯಿತು.

ಸಿಂಗಲ್ಸ್ ವಿಭಾಗದ ಮತ್ತೊಂದು ಹಣಾಹಣಿಯಲ್ಲಿ ಕಿರಣ್‌ ಕಠಿಣ ಪೈಪೋಟಿ ನೀಡಿ ಜಯಿಸಿದರು. ಭಾರತದ ಆಟಗಾರ 21-17, 19-21, 23-21ರಿಂದ ಚೀನಾ ತೈಪೆಯ ಲೀ ಚಿಯಾ ಹಾವೊ ಅವರನ್ನು ಮಣಿಸಿದರು.

ಸಮೀರ್ ವರ್ಮಾ, ಪ್ರಿಯಾಂಶು ರಾಜಾವತ್ ಮತ್ತು ಮಿಥುನ್ ಮಂಜುನಾಥ್ ಅವರು ಮೊದಲ ಸುತ್ತಿನ ಇನ್ನುಳಿದ ಸಿಂಗಲ್ಸ್ ವಿಭಾಗದ ಪಂದ್ಯಗಳಲ್ಲಿ ಸೋಲನುಭವಿಸಿದರು.

ಸಮೀರ್‌ 14-21, 16-21ರಿಂದ ಚೀನಾದ ಶಿ ಫೆಂಗ್‌ ಎದುರು, ಪ್ರಿಯಾಂಶು 21-14, 19-21, 25-27ರಿಂದ ದಕ್ಷಿಣ ಕೊರಿಯಾದ ಕ್ವಾಂಗ್‌ ಹೀ ಹಿಯೊ ವಿರುದ್ಧ, ಮಿಥುನ್‌ 18-21, 12-21ರಿಂದ ಜಪಾನ್‌ನ ಕೆಂಟಾ ನಿಶಿಮೊಟೊ ಎದುರು ನಿರಾಸೆ ಅನುಭವಿಸಿದರು.

ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಅಸ್ಮಿತಾ ಚಲಿಹಾ 21-16, 21-19ರಿಂದ ಭಾರತದವರೇ ಆದ ಅನುಪಮಾ ಉಪಾಧ್ಯಾಯ ಅವರನ್ನು ಸೋಲಿಸಿ ಮುನ್ನಡೆದರು. ಡಬಲ್ಸ್‌ನಲ್ಲಿ ಸಿಮ್ರಾನ್ ಸಿಂಘಿ– ರಿತಿಕಾ ಟಕ್ಕರ್‌ 8-21, 10-21ರಿಂದ ಚೀನಾದ ಶೆಂಗ್‌ ಶು ಮತ್ತು ಶು ಚಿಯಾನ್‌ ಜಾಂಗ್ ಎದುರು ಸೋತರು.

ಮಿಶ್ರ ಡಬಲ್ಸ್‌ನಲ್ಲಿ ರೋಹನ್ ಕಪೂರ್– ಸಿಕ್ಕಿ ರೆಡ್ಡಿ 21-11, 21-16ರಿಂದ ಕೆನಡಾದ ಟೈ ಅಲೆಕ್ಸಾಂಡರ್ ಲಿಂಡೆಮನ್‌– ಜೋಸೆಫ್‌ ವು ಎದುರು ಗೆದ್ದು ಎರಡನೇ ಸುತ್ತು ತಲು‍ಪಿದರು.

ಬಿ. ಸುಮಿತ್ ರೆಡ್ಡಿ–ಅಶ್ವಿನಿ ಪೊನ್ನಪ್ಪ ಜೋಡಿಯು 11-21, 17-21ರಿಂದ ಇಂಡೊನೇಷ್ಯಾದ ರೆಹಾನ್‌ ನೌಫಲ್‌ ಕುಶರ್ಜಂಟೊ ಮತ್ತು ಲಿಸಾ ಆಯು ಕುಸುಮಾವತಿ ಎದುರು ಸೋತಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT