ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀನ್‌ ‘ಸೂಪರ್‌’ ಆಟ

ಪ್ರೊ ಕಬಡ್ಡಿ ಲೀಗ್‌: ಫಾರ್ಚೂನ್‌ಜೈಂಟ್ಸ್‌ ಎದುರು ಗೆದ್ದ ದಬಂಗ್‌ ಡೆಲ್ಲಿ
Last Updated 15 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಪುಣೆ: ಪಾದರಸದಂತಹ ಚಲನೆ ಮತ್ತು ಚಾಕಚಕ್ಯತೆಯ ರೇಡ್‌ಗಳ ಮೂಲಕ ಮೈದಾನದಲ್ಲಿ ಮೆಕ್ಸಿಕನ್‌ ಅಲೆ ಎಬ್ಬಿಸಿದ ನವೀನ್‌ ಕುಮಾರ್‌, ದಬಂಗ್‌ ಡೆಲ್ಲಿ ತಂಡ ಖುಷಿಯ ಕಡಲಲ್ಲಿ ತೇಲುವಂತೆ ಮಾಡಿದರು.

ನವೀನ್‌ ಅವರ ‘ಸೂಪರ್‌–10’ ಸಾಧನೆಯಿಂದ ಡೆಲ್ಲಿ ತಂಡ ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಏಳನೇ ಆವೃತ್ತಿಯ 91ನೇ ಪಂದ್ಯದಲ್ಲಿ 34–30 ಪಾಯಿಂಟ್ಸ್‌ನಿಂದ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಎದುರು ಗೆದ್ದಿತು. ಈ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿತು.

ಪಿಕೆಎಲ್‌ನಲ್ಲಿ ಉಭಯ ತಂಡಗಳು ಏಳು ಸಲ ಮುಖಾಮುಖಿಯಾಗಿದ್ದವು. ಈ ಪೈಕಿ ಗುಜರಾತ್‌ ಐದರಲ್ಲಿ ಗೆದ್ದಿತ್ತು. ಈ ಹೋರಾಟದಲ್ಲೂ ಗುಜರಾತ್ ಗೆಲ್ಲಬಹುದೆಂದು ಊಹಿಸಲಾಗಿತ್ತು. ಈ ನಿರೀಕ್ಷೆಯನ್ನು ಡೆಲ್ಲಿ ತಂಡ ತಲೆಕೆಳಗಾಗಿಸಿತು.

ಎದುರಾಳಿಗಳ ತಂತ್ರವನ್ನು ಚೆನ್ನಾಗಿಯೇ ಅರಿತಿದ್ದಂತೆ ಕಂಡ ಡೆಲ್ಲಿ ತಂಡವು ಪಂದ್ಯದ ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾಯಿತು. ಜೋಗಿಂದರ್‌ ಸಿಂಗ್ ನರ್ವಾಲ್‌ ಬಳಗ ನಾಲ್ಕನೇ ನಿಮಿಷದ ವೇಳೆಗೆ 4–1 ಮುನ್ನಡೆಯನ್ನೂ ಪಡೆಯಿತು. ಬಳಿಕ ಪುಟಿದೆದ್ದ ಗುಜರಾತ್‌ 4–4ರಲ್ಲಿ ಸಮಬಲ ಮಾಡಿಕೊಂಡಿತು. ನಂತರ ಡೆಲ್ಲಿ ಮತ್ತೆ ಮೇಲುಗೈ ಸಾಧಿಸಿತು. 13ನೇ ನಿಮಿಷದಲ್ಲಿ ‘ಡೂ ಆರ್‌ ಡೈ ರೇಡ್‌’ ಮಾಡಿದ ನವೀನ್‌ ಕುಮಾರ್‌ ಎದುರಾಳಿ ಆವರಣದಲ್ಲಿದ್ದ ಮೂವರು ಆಟಗಾರರನ್ನು ಔಟ್‌ ಮಾಡಿದರು. ಅವರ ‘ಸೂಪರ್‌ ರೇಡ್‌’ನಿಂದಾಗಿ ತಂಡದ ಖಾತೆಗೆ ಐದು ಪಾಯಿಂಟ್ಸ್‌ ಸೇರ್ಪಡೆಯಾದವು.ಇದರೊಂದಿಗೆ ನವೀನ್‌, ಪಿಕೆಎಲ್‌ನಲ್ಲಿ 350 ರೇಡಿಂಗ್‌ ಪಾಯಿಂಟ್ಸ್‌ ಗಳಿಸಿದ ಶ್ರೇಯಕ್ಕೂ ಪಾತ್ರರಾದರು.

ದ್ವಿತೀಯಾರ್ಧದ ಆರಂಭದಲ್ಲಿ ಮತ್ತೊಮ್ಮೆ ಗುಜರಾತ್‌ ಆವರಣ ಖಾಲಿ ಮಾಡಿದ ಡೆಲ್ಲಿ ತಂಡ ಮುನ್ನಡೆಯನ್ನು 23–9ಕ್ಕೆ ಹೆಚ್ಚಿಸಿಕೊಂಡು ಪಂದ್ಯದ ಮೇಲಿನ ಹಿಡಿತವನ್ನು ಇನ್ನಷ್ಟು ಬಿಗಿಮಾಡಿಕೊಂಡಿತು. ಸುನಿಲ್‌ ಕುಮಾರ್‌ ಸಾರಥ್ಯದ ಗುಜರಾತ್‌, ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳಲು ಸಿದ್ಧವಿದ್ದಂತೆ ಕಾಣಲಿಲ್ಲ. 26ನೇ ನಿಮಿಷದಲ್ಲಿ ಡೆಲ್ಲಿಯನ್ನು ಆಲೌಟ್‌ ಮಾಡಿದ ಈ ತಂಡ ಹಿನ್ನಡೆಯನ್ನು 19–24ಕ್ಕೆ ತಗ್ಗಿಸಿಕೊಂಡಿತು. ನಂತರ ಎರಡೂ ತಂಡಗಳು ಪಾಯಿಂಟ್‌ ಬೇಟೆ ಮುಂದುವರಿಸಿದ್ದರಿಂದ ಪಂದ್ಯವು ರೋಚಕತೆ ಪಡೆದುಕೊಂಡಿತ್ತು. ಕೊನೆಯ ಎರಡು ನಿಮಿಷಗಳಲ್ಲಿ ಎಚ್ಚರಿಕೆಯಿಂದ ಆಡಿದ ಡೆಲ್ಲಿ, ಗೆಲುವಿನ ಮಾಲೆ ಕೊರಳಿಗೇರಿಸಿಕೊಂಡಿತು.

ಡೆಲ್ಲಿ ಆಟಗಾರರಿಗೆ ಪೆಟ್ಟು: ಪಂದ್ಯದ ವೇಳೆ ಡೆಲ್ಲಿ ತಂಡದ ಇಬ್ಬರು ಆಟಗಾರರು ಗಾಯಗೊಂಡರು. 14ನೇ ನಿಮಿಷದಲ್ಲಿ ರೇಡಿಂಗ್‌ಗೆ ಹೋದ ಮೆರಾಜ್‌ ಶೇಖ್‌ ಎದುರಾಳಿ ತಂಡದ ರಕ್ಷಣಾ ಬಲೆಯೊಳಗೆ ಬಂದಿಯಾದರು. ಈ ವೇಳೆ ಗಾಯಗೊಂಡ ಅವರನ್ನು ಸ್ಟ್ರೆಚರ್‌ ನೆರವಿನಿಂದ ಅಂಗಳದ ಹೊರಗೆ ಕರೆದೊಯ್ಯಲಾಯಿತು. 18ನೇ ನಿಮಿಷದಲ್ಲಿ ವಿನೋದ್‌ ಕುಮಾರ್‌ ಅವರನ್ನು ಟ್ಯಾಕಲ್‌ ಮಾಡುವ ವೇಳೆ ಡೆಲ್ಲಿ ತಂಡದ ಅನಿಲ್‌ ಕುಮಾರ್‌ ಹಣೆಗೆ ಬಲವಾದ ಪೆಟ್ಟು ಬಿತ್ತು.

ಪಟ್ನಾ ಜಯಭೇರಿ: ಇನ್ನೊಂದು ಪಂದ್ಯದಲ್ಲಿ ಪಟ್ನಾ ಪೈರೇಟ್ಸ್‌ 55–33ರಿಂದ ಪುಣೇರಿ ಪಲ್ಟನ್‌ ಎದುರು ಜಯಭೇರಿ ಮೊಳಗಿಸಿತು. ಪಟ್ನಾ ತಂಡದ ನಾಯಕ ಪ್ರದೀಪ್‌ ನರ್ವಾಲ್‌ ಮತ್ತೊಮ್ಮೆ ಮೋಡಿ ಮಾಡಿದರು. ಅವರು ಒಟ್ಟು 18 ಪಾಯಿಂಟ್ಸ್‌ ಗಳಿಸಿದರು.

ಇಂದಿನ ಪಂದ್ಯಗಳು

ಜೈಪುರ ಪಿಂಕ್‌ ಪ್ಯಾಂಥರ್ಸ್‌–ಯು.ಪಿ.ಯೋಧಾ

ಆರಂಭ: ರಾತ್ರಿ 7.30

ತೆಲುಗು ಟೈಟನ್ಸ್‌–ದಬಂಗ್‌ ಡೆಲ್ಲಿ

ಆರಂಭ: ರಾತ್ರಿ 8.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT