ಗುರುವಾರ , ಜೂನ್ 30, 2022
24 °C
ಬಿಂಗ್ ಸವಾಲು ಮೀರಿದ ಭಾರತದ ಆಟಗಾರ್ತಿ

ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಸೆಮಿಫೈನಲ್‌ಗೆ ಪಿ.ವಿ.ಸಿಂಧು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮನಿಲಾ, ಪಿಲಿಪ್ಪೀನ್ಸ್: ರೋಚಕ ಹಣಾಹಣಿಯಲ್ಲಿ ಎದುರಾಳಿಯನ್ನು ಮಣಿಸಿದ ಭಾರತದ ಪಿ.ವಿ.ಸಿಂಧು ಅವರು ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಇಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ ಮಹಿಳಾ ಸಿಂಗಲ್ಸ್ ವಿಭಾಗದ ಎಂಟರಘಟ್ಟದ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಸಿಂಧು ಅವರಿಗೆ 21-9, 13-21, 21-19ರಿಂದ ಚೀನಾದ್ ಹೆ ಬಿಂಗ್ ಜಿಯಾವೊ ಎದುರು ಜಯ ಒಲಿಯಿತು.

2014ರ ಗಿಮ್ಚಿಯೊನ್ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ಭಾರತದ ಆಟಗಾರ್ತಿ, ಒಂದು ತಾಸು 16 ನಿಮಿಷಗಳಲ್ಲಿ ಪಂದ್ಯ ಜಯಿಸಿ ಇಲ್ಲಿಯೂ ಪದಕ ಖಚಿತಪಡಿಸಿದ್ದಾರೆ.

ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ, 26 ವರ್ಷದ ಸಿಂಧು, ನಾಲ್ಕರ ಘಟ್ಟದ ಪಂದ್ಯದಲ್ಲಿ ಅಗ್ರಶ್ರೇಯಾಂಕದ, ಜಪಾನ್ ಆಟಗಾರ್ತಿ ಅಕಾನೆ ಯಾಮಗುಚಿ ಅವರನ್ನು ಎದುರಿಸುವರು.

ಕ್ವಾರ್ಟರ್‌ಫೈನಲ್‌ ಮೊದಲ ಗೇಮ್‌ನ ಆರಂಭದಲ್ಲಿ 11–2ರಿಂದ ಮುನ್ನಡೆ ಸಾಧಿಸಿದ ಬಳಿಕ ಸಿಂಧು ತಿರುಗಿ ನೋಡಲಿಲ್ಲ. ಅದೇ ಲಯದಲ್ಲಿ ಮುಂದುವರಿದು ಗೇಮ್ ವಶಪಡಿಸಿಕೊಂಡರು. ಎರಡನೇ ಗೇಮ್‌ನಲ್ಲಿ ಭಾರತದ ಆಟಗಾರ್ತಿ ಎಸಗಿದ ಲೋಪಗಳ ಲಾಭ ಪಡೆದ ಬಿಂಗ್‌ ತಿರುಗೇಟು ನೀಡಿದರು. ಚುರುಕಿನ ರಿಟರ್ನ್‌ಗಳ ಮೂಲಕ ಮಿಂಚಿದ ಅವರು ವಿರಾಮದ ಹೊತ್ತಿಗೆ 19–12ರಿಂದ ಮುಂದಿದ್ದರು. ಅಂತಿಮವಾಗಿ ಗೇಮ್ ಗೆದ್ದು ಬೀಗಿದರು.

ನಿರ್ಣಾಯಕ ಮತ್ತು ಮೂರನೇ ಗೇಮ್ ಇನ್ನಷ್ಟು ರಂಗೇರಿತು. ಉಭಯ ಆಟಗಾರ್ತಿಯರ ನಡುವೆ ಆರಂಭದಲ್ಲಿ ಸಮಬಲದ ಹೋರಾಟ ಕಂಡುಬಂದಿತು. ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಪಾಯಿಂಟ್ಸ್ ಕಲೆಹಾಕಿದ ಸಿಂಧು, ವಿರಾಮದ ವೇಳೆಗೆ 11–5ರಿಂದ ಮೇಲುಗೈ ಸಾಧಿಸಿದ್ದರು. ಆದರೆ ಚೇತರಿಸಿಕೊಂಡ ಬಿಂಗ್‌ ಹಿನ್ನಡೆಯನ್ನು 15–16ಕ್ಕೆ ತಗ್ಗಿಸಿದರು. ಬಳಿಕ 18–16ಕ್ಕೆ ಮುನ್ನಡೆದ ಸಿಂಧು, ಸತತ ನಾಲ್ಕು ಪಾಯಿಂಟ್ಸ್ ಬಲದಿಂದ ಗೇಮ್‌ ಹಾಗೂ ಪಂದ್ಯ ಗೆದ್ದ ಸಂಭ್ರಮದಲ್ಲಿ ಮಿಂದೆದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು