ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ಬುದ್ಧಿಮತ್ತೆ: ಪೌರಕಾರ್ಮಿಕರ ಮರಣಮಯ ಕಾಯಕದ ಕೊನೆ?

Last Updated 21 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಊರಿನ ಒಳಚರಂಡಿ ಕಟ್ಟಿದೆ. ನಮ್ಮೆಲ್ಲರ ಮಲಮೂತ್ರ, ಹೊಲಸು ನೀರಿನಿಂದ ರೊಚ್ಚಿಗೆದ್ದು ರಸ್ತೆಯಾಚೆ ಹರಿಯುತ್ತಿದೆ. ಅಪಾರ್ಟ್‌ಮೆಂಟ್‌ನ ಚರಂಡಿ ಕಟ್ಟಿ ಮನೆಗಳ ಶೌಚಾಲಯಗಳು ಬಳಸಲು ಅಸಾಧ್ಯವಾಗಿವೆ, ದೊಡ್ಡ ಹೋಟೆಲಿನ ಚರಂಡಿ, ಕೋಳಿ ಫಾರಂನ ನೆಲದಡಿಯ ಕೊಳಚೆ ನೀರು ಸಂಗ್ರಹಣಾ ತೊಟ್ಟಿ ಸ್ವಚ್ಛಗೊಳಿಸಬೇಕಾಗಿದೆ. ಯಾರು ಮಾಡಿಯಾರು? ನಮ್ಮ ದಿನಗೂಲಿ ದಲಿತ ಪೌರಕಾರ್ಮಿಕರು.

ಹೊಲಸು ನೀರಿನಿಂದ ತುಂಬಿ ತುಳುಕುವ ಚರಂಡಿಗೆ ಮೈ ಒಡ್ಡಿ ಇಳಿಯುತ್ತಾರೆ. ತಮ್ಮಲ್ಲಿರುವ ಅದೇ ಅವೈಜ್ಞಾನಿಕ ಹತಾರಗಳಿಂದ, ಬರಿ ಕೈಗಳನ್ನೇ ಬಳಸಿ ಎಲ್ಲಿ ಹಾದಿ ಕಟ್ಟಿದೆ ಎಂದು ಪರೀಕ್ಷಿಸುತ್ತಾರೆ. ತಮ್ಮ ಮೈ ಬೆವರು, ನಮ್ಮ ಮಲ ಮೂತ್ರಗಳಲ್ಲಿ ಬೆರೆತು ಹೋಗುವುದನ್ನು ಗಮನಿಸಿಯೂ ಗಮನಿಸಲಾಗದ ಅಸಹಾಯಕತೆಯಿಂದ ತೊಟ್ಟಿಯನ್ನು ಸ್ವಚ್ಛಗೊಳಿಸುತ್ತಾರೆ. ನಮ್ಮೆಲ್ಲರ ಹೊಲಸು, ಚರಂಡಿಯಲ್ಲಿ ಸುಮ್ಮನೆ ಕೂರುವುದೇನು? ಮತ್ತಷ್ಟು ಕೊಳೆತು ಅಪಾಯಕಾರಿ ವಿಷಾನಿಲಗಳ ಆಗರವೇ ಆಗಿರುತ್ತದೆ. ಒಳಚರಂಡಿ ಹೊಲಸಿಗೆ ಮೈಯೊಡ್ಡಿ ಕೆಳಗೆ ಇಳಿದಾಗ ಉಸಿರಾಡಲು ಸಿಗುವುದು ಇವೇ ವಿಷಾನಿಲ. ಆಳದ ಕೊಳವೆ ಮಾರ್ಗದ ಉದ್ದಗಲವನ್ನು ಪರಿಶೀಲಿಸುವ ಕೆಲಸದ ನಿಯತ್ತಿನ ಆ ಕ್ಷಣಾರ್ಧದಲ್ಲಿ ಉಸಿರುಗಟ್ಟಿ ಸಾವು ಕಂಡವರು ಅದೆಷ್ಟೋ.

ನಮ್ಮ ಸಂವಿಧಾನದ ಅತಿ ಮುಖ್ಯ ಅಂಶ ವ್ಯಕ್ತಿ ಘನತೆಯನ್ನು ಎತ್ತಿಹಿಡಿಯುವುದೇ ಆಗಿದೆ. ಆದ್ದರಿಂದಲೇ ಸಂವಿಧಾನದ ವಿಧಿ 17 ಅಸ್ಪೃಶ್ಯತೆಯನ್ನು ಮತ್ತು ವಿಧಿ 15 ಜಾತಿ ಆಧರಿತ ತಾರತಮ್ಯವನ್ನು ನಿರ್ಬಂಧಿಸುತ್ತದೆ. ವ್ಯಕ್ತಿ ಘನತೆ ಮೂಲಭೂತ ಮಾನವ ಹಕ್ಕುಗಳಲ್ಲಿ ಪ್ರಮುಖವಾಗಿದೆ. ಸಂವಿಧಾನದ ರಕ್ಷಣಾ ಪರಿಧಿಯೊಳಗೂ ನಮ್ಮ ದೇಶದ ಅಸ್ಪೃಶ್ಯತೆ ಇನ್ನೂ ಜೀವಂತವಾಗಿ ಉಸಿರಾಡುತ್ತಿದೆ. ಮಲ ಹೊರುವ ಮತ್ತು ಸ್ವಚ್ಛಗೊಳಿಸುವ ಪದ್ಧತಿಯೇ ಈ ಜೀವಂತಿಕೆಯ ಕುರುಹು. ನಮ್ಮ ಸಹಮಾನವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸುವ ಕ್ರೂರ ಪದ್ಧತಿ ಇದಾಗಿದೆ.

ಸರ್ಕಾರವು 1993ರ ಮಲ ಹೊರುವ ನಿಷೇಧ ಮತ್ತು ಸಮುದಾಯದ ಪುನರ್ವಸತಿ ಕಾಯ್ದೆಯನ್ನು 2013ರಲ್ಲಿ ಪುನರ್ಜೀವಗೊಳಿಸಿದರೂ ಈ ಪದ್ಧತಿ ನಮ್ಮ ದೇಶದ ಕಳಂಕವಾಗಿದೆ. 2014ರಿಂದ 2016ರೊಳಗಿನ ಅವಧಿಯಲ್ಲಿ ನಮ್ಮ ದೇಶದ ಸುಮಾರು 1,500 ಪೌರಕಾರ್ಮಿಕರು ಒಳಚರಂಡಿಯಲ್ಲಿ ಕೆಲಸ ಮಾಡುವಾಗ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮಲ ಸ್ವಚ್ಛಗೊಳಿಸುವ ಸುಮಾರು 15 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರಿರುವ ಕರ್ನಾಟಕದಲ್ಲಿ, ಕಳೆದ ಹತ್ತು ವರ್ಷಗಳಲ್ಲಿ 75 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2018ರ ಶುರುವಿನಲ್ಲೇ ಈ ಸಾವುಗಳ ಸಂಖ್ಯೆ 6 ದಾಟಿದೆ.

ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಇದೇ ರೀತಿ ಸಾವನ್ನಪ್ಪಿದ ಮೂವರು ಮಲ ಸ್ವಚ್ಛಗೊಳಿಸುವ ಪೌರಕಾರ್ಮಿಕರ ಹೆಣಗಳು ಕೇರಳದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಮನಕಲುಕಿವೆ. ಮನಸ್ಸಿನ ತಳಮಳಕ್ಕಷ್ಟೇ ಸೀಮಿತವಾಗದೆ ಒಳಚರಂಡಿಯ ಸಾವುಗಳನ್ನು ಮತ್ತು ಈ ಅನಿಷ್ಟ ಪದ್ಧತಿಯನ್ನು ಕೊನೆಗೊಳಿಸುವ ಕಡೆಗೆ ಅವರು ಕಾರ್ಯಪ್ರವೃತ್ತರಾಗಿದ್ದಾರೆ. ಈಗ ಅವರು ಒಳಚರಂಡಿಯೊಳಗೆ ಇಳಿದು ಹೊಲಸನ್ನು ಸ್ವಚ್ಛಗೊಳಿಸುವ ರೋಬೊಟನ್ನು ಸೃಷ್ಟಿ ಮಾಡಿರುವುದು ವರದಿಯಾಗಿದೆ.

ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫಿಶಿಯಲ್ ಇಂಟೆಲಿಜನ್ಸ್/ ಸಿಂತೆಟಿಕ್ ಇಂಟೆಲಿಜನ್ಸ್) ಬಳಸಿಕೊಂಡು ತಯಾರಾಗಿರುವ ಈ ರೋಬೊಟ್ ತನ್ನ ಬಾಹುಗಳನ್ನು ಕೆಳಗಿಳಿಸಿ ಒಳಚರಂಡಿಯ ಸಮಸ್ಯೆಯನ್ನು ವಿಡಿಯೊ ಸಂದೇಶದ ಮೂಲಕ ಪರದೆಯ ಮೇಲೆ ಬಿತ್ತರಿಸುತ್ತದೆ. ಒಳಚರಂಡಿಯ ಅಥವಾ ಕೊಳವೆಯ ಉದ್ದಗಲವನ್ನು ಅಳೆಯುತ್ತದೆ; ಯಾವ ಭಾಗದಲ್ಲಿ ಕೊಳಚೆ ಕಟ್ಟಿದೆ ಎಂದು ವೀಕ್ಷಿಸುತ್ತದೆ; ಕೊಳವೆ ಮಾರ್ಗಗಳನ್ನು ಕೂಡಿಸಲು ಇರುವ ತೊಡಕುಗಳಾವುವು ಎಂದು ಅಂದಾಜಿಸುತ್ತದೆ. ನಂತರ ತನ್ನ ಇತರ ಬಾಹುಗಳನ್ನು ಕೆಳಗೆ ಇಳಿಬಿಟ್ಟು ಸಮಸ್ಯೆಗೆ ತಕ್ಕುದಾದ ಕೆಲಸವನ್ನು ಪ್ರಾರಂಭಿಸುತ್ತದೆ. ಕಟ್ಟಿರುವ ಕೊಳಚೆಯನ್ನು ಸಡಿಲಿಸಿ ಮೇಲೆತ್ತಲು, ಒಳಚರಂಡಿಯ ಅಡಚಣೆಯನ್ನು ತೆಗೆಯಲು ಅನುಕೂಲವಾಗುವಂತೆ ಅದರ ಬಾಹುಗಳಿಗೆ ಸಲಕರಣೆಗಳನ್ನು ಹೊಂದಿಸಲಾಗಿದೆ. ಕೇರಳ ಸರ್ಕಾರವು ಈ ಕೃತಕ ಬುದ್ಧಿಮತ್ತೆಯುಳ್ಳ, ಮಲ ಸ್ವಚ್ಛಗೊಳಿಸುವ ರೋಬೊಟುಗಳನ್ನು ಅಳವಡಿಸಿಕೊಳ್ಳಲು ಮುಂದಾಗಿರುವುದು ಸ್ವಾಗತಾರ್ಹ.

ವಿಜ್ಞಾನ ಮತ್ತು ತಂತ್ರಜ್ಞಾನದ ಯಶಸ್ವಿ ಪ್ರಯೋಗಗಳನ್ನು ಕೂಡಲೇ ಅಳವಡಿಸಿಕೊಂಡ ಕೇರಳ ಸರ್ಕಾರವು ಒಂದು ಅಮಾನವೀಯ ಪದ್ಧತಿಯ ನಿರ್ಮೂಲನೆಗೆ ನಾಂದಿ ಹಾಡಿದೆ. 21ನೇ ಶತಮಾನದ ನಮ್ಮ ನಾಗರಿಕ ಸಮಾಜದ ಮಾನವೀಯತೆಯನ್ನು ಹಿಡಿದಿಡುವಲ್ಲಿ ವಿಜ್ಞಾನದ ಪಾತ್ರ ದೊಡ್ಡದು. ಮಾನವನ ವಿಕಾಸದ ಉತ್ತುಂಗದ ಕೊಡುಗೆ ಕೃತಕ ಬುದ್ಧಿಮತ್ತೆ ಎನ್ನಬಹುದು. ಇಂದು ನಮಗೆ ಅರಿವಿಲ್ಲದೆಯೇ, ಕೃತಕ ಬುದ್ಧಿಮತ್ತೆ ನಮ್ಮ ಜೀವನದ ಭಾಗವಾಗಿದೆ. ನಾವು ಬಳಸುವ ಎಲ್ಲಾ ಸೋಷಿಯಲ್ ಮೀಡಿಯಾಗಳು, ಸರ್ಚ್ ಎಂಜಿನ್‍ಗಳು (ಉದಾ: ಗೂಗಲ್), ಮನೆಗೆಲಸಕ್ಕೆ ಬಳಸುವ ಉಪಕರಣಗಳು, ಸ್ಮಾರ್ಟ್ ಫೋನುಗಳು, ಸಾರ್ವಜನಿಕ ಸವಲತ್ತುಗಳ ನಿರ್ವಹಣಾ ವ್ಯವಸ್ಥೆಗಳು... ಇತ್ಯಾದಿ ಕೃತಕ ಬುದ್ಧಿಮತ್ತೆಯ ಶಕ್ತಿಯ ವ್ಯಾಪ್ತಿಯ ತೆಳು ಪದರಗಳಷ್ಟೇ.

ಬುದ್ಧಿವಂತ ಜೀವಿಗಳಿಗೆ ಸಾಧ್ಯವಾಗುವ ಕಲಿಕೆ, ಆಲೋಚನಾ ಕ್ರಮ, ನೆನಪಿನ ಶಕ್ತಿ, ನಿರ್ಣಯಿಸುವ ಕೌಶಲ, ಸಮಸ್ಯೆಗಳ ಗ್ರಹಿಕೆ, ದನಿ ಮತ್ತು ಮುಖಚಹರೆಯನ್ನು ಗುರುತಿಸುವ ಶಕ್ತಿ, ಇವೆಲ್ಲವೂ ಕೃತಕ ಬುದ್ಧಿಮತ್ತೆಯುಳ್ಳ ಯಂತ್ರಕ್ಕೆ ಸಾಧ್ಯವಿದೆ. ವ್ಯಕ್ತಿಯ ಭಾವನೆಗಳನ್ನು ದನಿ ಮತ್ತು ಮುಖಚರ್ಯೆಯಲ್ಲಿ ಗುರುತಿಸುವ ಸಾಮರ್ಥ್ಯವನ್ನೂ ಈ ಯಂತ್ರಗಳು ಹೊಂದಿವೆ. ಅಷ್ಟೇ ಅಲ್ಲದೆ ತನಗೆ ಸೇರ್ಪಡೆಯಾಗುವ ಅಪಾರ ದತ್ತಾಂಶದ (ಮಾಹಿತಿ) ಸಹಾಯದಿಂದ ತನಗೆ ತಾನೆ ಬುದ್ಧಿಮತ್ತೆಯನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯವನ್ನೂ ಇವು ಪಡೆಯುತ್ತಿವೆ. ಮನುಷ್ಯನ ಗ್ರಹಿಕೆಗೆ ನಿಲುಕದಷ್ಟು ಅಪಾರ ಮೊತ್ತದ ದತ್ತಾಂಶಗಳನ್ನು ವಿಶ್ಲೇಷಿಸುವ ಸಾಮರ್ಥ್ಯ ಇರುವ ಈ ಯಂತ್ರಗಳ ಬುದ್ಧಿಮತ್ತೆ ಕೃತಕ ಬುದ್ಧಿಮತ್ತೆಯ ಕರ್ತೃಗಳಿಗೂ ನಿಲುಕದಷ್ಟು ಅಪಾರವಾಗಿದೆ. ಈ ಬುದ್ಧಿಮತ್ತೆಯ ಸಾಮರ್ಥ್ಯವನ್ನು ನಾವು ಹೇಗೆ ಉಪಯೋಗಿಸುತ್ತೇವೆ ಎಂಬುದರ ಮೇಲೆ ನಮ್ಮ ಸಮಾಜದ ಮುಂದಿನ ನಾಗರಿಕತೆ ನಿಂತಿದೆ.

ಭಾರತದಂತಹ ದೇಶಕ್ಕೆ ಕೃತಕ ಬುದ್ಧಿಮತ್ತೆಯ ಉಪಯೋಗಗಳು ಅಪಾರ. ಸಾರ್ವಜನಿಕ ಸವಲತ್ತುಗಳಾದ ಸಂಚಾರ ನಿರ್ವಹಣೆ, ವಸತಿ, ಕುಡಿಯಲು ಶುದ್ಧ ನೀರು, ಸ್ವಚ್ಚತೆ, ಕೃಷಿ, ಶಿಕ್ಷಣ, ಆರೋಗ್ಯ, ದೇಶದ ಗೂಢಚಾರಿಕೆ ಅಷ್ಟೇ ಅಲ್ಲದೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ... ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯ ವ್ಯಾಪ್ತಿಯೊಳಗೆ ಜಾಗ ಒದಗಿಸಬೇಕಾಗುವುದು ಮಾನವನ ವಿಕಾಸದ ಅನಿವಾರ್ಯವಾಗಲಿದೆ. ಮನುಷ್ಯನ ಗ್ರಹಿಕೆಗೆ ನಿಲುಕದ ಕೃತಕ ಬುದ್ಧಿಮತ್ತೆಯ ಸಾಮರ್ಥ್ಯ ಅದರ ಭವಿಷ್ಯದ ಕಾರ್ಯ ವ್ಯಾಪ್ತಿಯನ್ನು ಊಹಿಸಲು ಅಸಾಧ್ಯವಾಗಿಸಿದೆ. ಹಾಗೆಯೇ ಇದರ ದುರ್ಬಳಕೆಯ ಅವಕಾಶಗಳೂ ಅಪಾರವಾಗಿವೆ. ಕೃತಕ ಬುದ್ಧಿಮತ್ತೆಯ ಪ್ರಮುಖ ರೂವಾರಿಯಾದ ಇಲಾನ್ ಮಸ್ಕ್ ಇದರ ಜವಾಬ್ದಾರಿಯುತ ನಿರ್ವಹಣೆಯ ಲೋಪದಿಂದಾಗುವ ಅಪಾಯದ ಬಗ್ಗೆ ನಿರಂತರ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಮಾನವ ಸಮಾಜ ಕಂಡ ಮೇಧಾವಿ ವಿಜ್ಞಾನಿ ಸ್ಟೀಫನ್ ಹಾಕಿಂಗ್ಸ್ ಸಹ ಕೃತಕ ಬುದ್ಧಿಮತ್ತೆ ಮಾನವ ಸಮಾಜವನ್ನು ತೆಕ್ಕೆಗೆ ತೆಗೆದುಕೊಳ್ಳುವ ಸಾಧ್ಯತೆಯ ಬಗ್ಗೆ ನಮ್ಮನ್ನು ಎಚ್ಚರಿಸಿದ್ದಾರೆ.

ಈ ಎಚ್ಚರಿಕೆಗಳ ನಡುವೆಯೂ ಕೃತಕ ಬುದ್ಧಿಮತ್ತೆಯು ಮನುಷ್ಯ ಸಮಾಜದ, ಮನುಷ್ಯನ ಬುದ್ಧಿಮತ್ತೆಯ ಮತ್ತು ಮನುಷ್ಯ ಪ್ರಜ್ಞೆಯ ಕೂಸೇ ಆಗಲಿದೆ ಎಂಬುದನ್ನು ನಾವು ಅಲ್ಲಗಳೆಯಲಾಗದು. ನಮ್ಮ ಕೂಸು ನಮ್ಮ ಹೆಗಲೇರಿಯೇ ಕೂರಬೇಕಲ್ಲವೇ? ನಮ್ಮ ಹೆಗಲಿಲ್ಲದಿದ್ದರೆ ಅದೂ ಕುಸಿಯುತ್ತದೆ. ಮಲ ಹೊರುವ, ಸ್ವಚ್ಛಗೊಳಿಸುವಂತಹ ಅಮಾನವೀಯ ಕೆಲಸಗಳನ್ನು ನಮ್ಮ ಅಣ್ಣತಮ್ಮಂದಿರು, ಅಕ್ಕತಂಗಿಯರ ಕೈಯಿಂದ ರೋಬೊಟುಗಳಿಗೆ ವರ್ಗಾಯಿಸುವ ಅವಕಾಶ ಈ ಕೃತಕ ಬುದ್ಧಿಮತ್ತೆ ನಮಗೆ ಒದಗಿಸಿದೆ. ಮಾರಕವಾದ ಕಾಯಕದಿಂದ ವಿಮುಕ್ತರಾಗುವ ಪೌರಕಾರ್ಮಿಕರ ಜೀವನ ನಿರ್ವಹಣೆಗೆ ಪರ್ಯಾಯವನ್ನು ಒದಗಿಸುವುದು ನಾಗರಿಕ ಸರ್ಕಾರಗಳ ಜವಾಬ್ದಾರಿಯಾಗಿರುತ್ತದೆ.

ಕೃತಕ ಬುದ್ಧಿಮತ್ತೆಗೆ ಅಮಾನವೀಯ ಪದ್ಧತಿಗಳನ್ನು ನಿರ್ಮೂಲನೆ ಮಾಡುವುದಷ್ಟೇ ಅಲ್ಲದೆ ಸಮಾಜದ ಸ್ವಾಸ್ಥ್ಯ ಕಾಪಾಡುವ ಸಾಮರ್ಥ್ಯವನ್ನೂ ಕಲಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.

***

ಡಾ. ಸುಶಿ ಕಾಡನಕುಪ್ಪೆ, ಎಮ್.ಡಿ.ಎಸ್, ಪಿಎಚ್ಡಿ. ಸಹ ಪ್ರಾಧ್ಯಾಪಕಿ, ಸಾಮೂಹಿಕ ದಂತವೈದ್ಯಕೀಯ ವಿಭಾಗ, ಒಕ್ಕಲಿಗರ ಸಂಘ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ, ಬೆಂಗಳೂರು-04, ಕನ್ಸಲ್ಟೆಂಟ್: ಲೈಫ್ ಸ್ಕಿಲ್ಸ್ ಮತ್ತು ಪಿಯರ್ ಎಜುಕೇಷನ್, ರಾಜೀವ್ ಗಾಂಧಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆ¥sóï ಯ್ಯೂತ್ ಡೆವೆಲಪ್‍ಮೆಂಟ್, ಮಿನಿಸ್ಟ್ರಿ ಆ¥sóï ಸ್ಪೋರ್ಟ್ಸ್ ಅಂಡ್ ಯ್ಯೂತ್ ಅ¥sóÉೀರ್ಸ್, ಭಾರತ ಸರ್ಕಾರ, ತಮಿಳು ನಾಡು-602105.
ದೂರವಾಣಿ: 9535205012

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT