ಶುಕ್ರವಾರ, ನವೆಂಬರ್ 15, 2019
27 °C
ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಟಕಹಶಿಗೆ ಮಣಿದ ಭಾರತದ ಆಟಗಾರ್ತಿ

ಸಮೀರ್ ಜಯಬೇರಿ; ಸೈನಾಗೆ ನಿರಾಸೆ

Published:
Updated:
Prajavani

ಒಡೆನ್ಸ್‌, ಡೆನ್ಮಾರ್ಕ್‌: ಎದುರಾಳಿ ಜಪಾನ್‌ನ ಕಾಂತ ಸುನೆಯಮ ಅವರನ್ನು ಸುಲಭವಾಗಿ ಮಣಿಸಿದ ಭಾರತದ ಸಮೀರ್ ವರ್ಮಾ, ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿದರು. ಆದರೆ ಸೈನಾ ನೆಹ್ವಾಲ್ ಮೊದಲ ಪಂದ್ಯದಲ್ಲೇ ಸೋತು ಹೊರಬಿದ್ದರು.

ಬುಧವಾರ ನಡೆದ ಪಂದ್ಯಗಳಲ್ಲಿ ಸಮೀರ್ ಜಪಾನ್ ಆಟಗಾರನನ್ನು 21–11, 21–11ರಲ್ಲಿ ಮಣಿಸಿದರೆ 15–21, 21–23ರಲ್ಲಿ ಜಪಾನ್‌ನ ಸಯಾಕ ಟಕಹಶಿಗೆ ಸೈನಾ ಮಣಿದರು.

ವಿಶ್ವ ಕ್ರಮಾಂಕದಲ್ಲಿ 16ನೇ ಸ್ಥಾನದಲ್ಲಿರುವ ಸುನೆಯಮ ಮತ್ತು 17ನೇ ಸ್ಥಾನದ ಸಮೀರ್ ನಡುವಿನ ಪಂದ್ಯ ಕುತೂಹಲ ಕೆರಳಿಸಿತ್ತು. ಆದರೆ ಭಾರತದ ಆಟಗಾರ ಆರಂಭದಿಂದಲೇ ಆಧಿಪತ್ಯ ಸ್ಥಾಪಿಸಿದರು. ಮೊದಲ ನಾಲ್ಕು ಪಾಯಿಂಟ್‌ಗಳನ್ನು ತಮ್ಮದಾಗಿಸಿಕೊಂಡ ನಂತರ ಸಮೀರ್‌ ಪಾಯಿಂಟ್ ಬಿಟ್ಟುಕೊಟ್ಟರು. ನಂತರ 7–2, 9–4ರಲ್ಲಿ ಮುನ್ನಡೆದರು. 11–5ರ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಅವರು ನಂತರ ಹಿಂದಿರುಗಿ ನೋಡಲಿಲ್ಲ.

ಎರಡನೇ ಗೇಮ್‌ನ ಆರಂಭದಲ್ಲಿ ಸುನೆಯಮ ಸ್ವಲ್ಪ ಪ್ರತಿರೋಧ ಒಡ್ಡಿದರೂ ನಂತರ ಸಪ್ಪೆಯಾದರು. ಹೀಗಾಗಿ ಸಮೀರ್ ಹಾದಿ ಸುಲಭವಾಯಿತು.

ಸೈನಾಗೆ ನಿರಾಸೆ: ಮಹಿಳೆಯರ ಸಿಂಗಲ್ಸ್‌ನಲ್ಲಿ 8ನೇ ಕ್ರಮಾಂಕದ ಸೈನಾ 12ನೇ ಕ್ರಮಾಂಕದ ಟಕಹಶಿಗೆ ಉತ್ತಮ ಪ್ರತಿಸ್ಪರ್ಧೆ ಒಡ್ಡಿದರು. ಆದರೆ ಜಯ ಗಳಿಸಲು ಆಗಲಿಲ್ಲ. ಮೊದಲ ಗೇಮ್‌ನ ಆರಂಭದಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿದರೂ ನಂತರ ಸೈನಾ ಚೇತರಿಸಿಕೊಂಡರು. ಆದರೆ ಮುನ್ನಡೆ ಸಾಧಿಸಲು ಆಗಲಿಲ್ಲ. ಎರಡನೇ ಗೇಮ್‌ನಲ್ಲಿ ಭಾರಿ ಪ್ರತಿರೋಧ ಒಡ್ಡಿದ್ದರಿಂದ ಕೊನೆಯಲ್ಲಿ ಪಂದ್ಯ ರೋಚಕವಾಯಿತು. ಆದರೆ ಪಟ್ಟು ಬಿಡದ ಟಕಹಶಿ ಗೆದ್ದು ಬೀಗಿದರು.

ಪ್ರತಿಕ್ರಿಯಿಸಿ (+)