ಗುರುವಾರ , ಜೂನ್ 24, 2021
24 °C
ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿರುವ ಶೂಟರ್‌ ಯುರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ‘ಅತಿಥಿ’ಯಾಗಿ ಭಾಗಿ

ಶೂಟಿಂಗ್‌–ಶಿಕ್ಷಣ: ಮನು ಭಾಕರ್‌ಗೆ ‘ಪರೀಕ್ಷೆ’

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹೋಟೆಲ್ ಕೊಠಡಿಯಲ್ಲಿ ಕುಳಿತು ಟೋಕಿಯೊ ಒಲಿಂಪಿಕ್ಸ್‌ ಕುರಿತು ಯೋಚಿಸುತ್ತಿರುವ ಸಂದರ್ಭದಲ್ಲಿ ಭಾರತದ ಶೂಟರ್‌ ಮನು ಭಾಕರ್ ಪಿಸ್ತೂಲು ಮತ್ತು ಪೆನ್‌ ಮೂಲಕ ಮಾಡುವ ಸಾಧನೆಯ ಕುರಿತು ಕೂಡ ಚಿಂತಿಸುತ್ತಿದ್ದಾರೆ.

ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಮನು ಭಾಕರ್ ಭಾರತ ತಂಡದೊಂದಿಗೆ ಕ್ರೊಯೇಷ್ಯಾದ ರಾಜಧಾನಿ ಜಗ್ರೆಬ್‌ನಲ್ಲಿ ಅಭ್ಯಾಸಕ್ಕೆ ಸಜ್ಜಾಗುತ್ತಿದ್ದಾರೆ. ಇದೇ ವೇಳೆ ಬಿಎ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗೂ ಸಿದ್ಧರಾಗುತ್ತಿದ್ದಾರೆ. ಹೋಟೆಲ್ ಕೊಠಡಿಯಲ್ಲೇ ಕುಳಿತು ಆನ್‌ಲೈನ್ ಮೂಲಕ ಅವರು ಪರೀಕ್ಷೆ ಬರೆಯುವರು.

ದೆಹಲಿ ವಿಶ್ವವಿದ್ಯಾಲಯದ ಶ್ರೀರಾಮ್ ಮಹಿಳಾ ಕಾಲೇಜಿನ ಸಮಾಜವಿಜ್ಞಾನ ವಿದ್ಯಾರ್ಥಿನಿಯಾಗಿರುವ ಮನು ಅವರ ಪರೀಕ್ಷೆಗಳು ಇದೇ 18ರಂದು ಆರಂಭವಾಗಲಿವೆ. ಮೇ 20ರಿಂದ ಒಸಿಜೆಕ್‌ನಲ್ಲಿ ಯುರೋಪಿಯನ್ ಚಾಂಪಿಯನ್‌ಷಿಪ್ ಕೂಡ ನಡೆಯಲಿದೆ. ಭಾರತದ ಶೂಟರ್‌ಗಳು ಅದರಲ್ಲಿ ಅತಿಥಿ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಆದರೆ ಅವರು ಪಾಲ್ಗೊಳ್ಳುವ ಸ್ಪರ್ಧೆಗಳು ಇರುವ ದಿನ ಪರೀಕ್ಷೆ ಇಲ್ಲದೇ ಇರುವುದು ಅನುಕೂಲವಾಗಿದೆ. 

‘ಪರೀಕ್ಷೆ ಮತ್ತು ಶೂಟಿಂಗ್ ಸ್ಪರ್ಧೆಗಳನ್ನು ಈ ಹಿಂದೆಯೂ ಜೊತೆಯಾಗಿ ನಿಭಾಯಿಸಿದ್ದೇನೆ. ಈಗಲೂ ಅದು ಸಾಧ್ಯ. ನನಗೆ ಶೂಟಿಂಗ್ ಮತ್ತು ಶಿಕ್ಷಣ ಎರಡೂ ಮುಖ್ಯ. ಇದು ಒಲಿಂಪಿಕ್ಸ್ ನಡೆಯುವ ವರ್ಷ. ಅಲ್ಲಿ ಪದಕ ಗೆಲ್ಲಲು ಎಲ್ಲ ರೀತಿಯ ಪ್ರಯತ್ನವನ್ನೂ ಮಾಡಲಿದ್ದೇನೆ’ ಎಂದು ಕಾಮನ್ವೆಲ್ತ್‌ ಗೇಮ್ಸ್‌, ಐಎಸ್‌ಎಸ್‌ಎಫ್‌ ವಿಶ್ವಕಪ್‌ ಮತ್ತು ಯೂತ್ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದುಕೊಂಡಿರುವ ಮನು ಸುದ್ದಿಸಂಸ್ಥೆಗೆ ತಿಳಿಸಿದರು.

‘ಮನು ಓದಿನ ಬಗ್ಗೆ ತುಂಬ ಕಾಳಜಿ ವಹಿಸುತ್ತಾರೆ. ಆದರೆ ಓದು ಮತ್ತು ಶೂಟಿಂಗ್ ಸ್ಪರ್ಧೆ ಜೊತೆಜೊತೆಯಾಗಿ ಬಂದರೆ ಕ್ರೀಡೆಯ ಕಡೆಗೆ ಹೆಚ್ಚು ಗಮನ ನೀಡುತ್ತಾರೆ’ ಎನ್ನುತ್ತಾರೆ, ಮರ್ಚಂಟ್ ನೇವಿಯಲ್ಲಿ ಮುಖ್ಯ ಎಂಜಿನಿಯರ್‌ ಆಗಿರುವ ತಂದೆ ರಾಮ್ ಕಿಶನ್ ಭಾಕರ್. 

ಶೂಟಿಂಗ್ ಪರಿಕರಗಳೊಂದಿಗೆ ಪುಸ್ತಕಗಳನ್ನು ತೆಗೆದುಕೊಂಡು ಹೋಗಿರುವ ಮನು ಭಾಕರ್ ಪರೀಕ್ಷೆ ಬರೆದು ಉತ್ತರ ಪತ್ರಿಕೆಗಳನ್ನು ಮೊಬೈಲ್ ಸ್ಕ್ಯಾನರ್ ಮೂಲಕ ಸ್ಕ್ಯಾನ್ ಮಾಡಿ ಕಳುಹಿಸುವರು. 19 ವರ್ಷದ ಮನು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 25 ಮೀಟರ್ ಪಿಸ್ತೂಲು ಮತ್ತು 10 ಮೀಟರ್‌ ಏರ್ ಪಿಸ್ತೂಲು ವಿಭಾಗದಲ್ಲಿ ಸ್ಪರ್ಧಿಸುವರು. ರಾಹಿ ಸರ್ನೊಬತ್ ಮತ್ತು ಯಶಸ್ವಿನಿ ಸಿಂಗ್ ದೇಸ್ವಾಲ್ ಕೂಡ ಮನು ಜೊತೆ ಕಣಕ್ಕೆ ಇಳಿಯಲಿದ್ದಾರೆ. 10 ಮೀಟರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಸೌರಭ್ ಚೌಧರಿ ಜೊತೆಗೂಡಿ ಮನು ಸ್ಪರ್ಧಿಸಲಿದ್ದಾರೆ. 

ಯುರೋಪಿಯನ್ ಚಾಂಪಿಯನ್‌ಷಿಪ್‌ ನಂತರ ಭಾರತದ ಶೂಟರ್‌ಗಳು ಜೂನ್ 22ರಿಂದ ಜುಲೈ ಮೂರರ ವರೆಗೆ ನಡೆಯಲಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು