ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಅಮಿತ್‌ ಕೈತಪ್ಪಿದ ಚಿನ್ನ

ಬೆಳ್ಳಿಯ ಪದಕ ಗೆದ್ದು ದಾಖಲೆ ಬರೆದ ಭಾರತದ ಬಾಕ್ಸರ್‌
Last Updated 21 ಸೆಪ್ಟೆಂಬರ್ 2019, 19:44 IST
ಅಕ್ಷರ ಗಾತ್ರ

ಏಕ್ತರಿನ್‌ಬರ್ಗ್‌, ರಷ್ಯಾ: ಅಮಿತ್‌ ಪಂಘಲ್ ಅವರು ವಿಶ್ವ ಚಾಂಪಿಯನ್‌ಷಿಪ್‌ನ ವಿಜಯ ವೇದಿಕೆಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡುವುದನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದ ಭಾರತದ ಬಾಕ್ಸಿಂಗ್‌ ಪ್ರಿಯರಿಗೆ ನಿರಾಸೆ ಕಾಡಿತು.

ಶನಿವಾರ 52 ಕೆ.ಜಿ.ವಿಭಾಗದಲ್ಲಿ ರಿಂಗ್‌ಗೆ ಇಳಿದಿದ್ದ ಅಮಿತ್‌, ಫೈನಲ್‌ನಲ್ಲಿ ಸೋತರು. ಹೀಗಿದ್ದರೂ ಇತಿಹಾಸದ ಪುಟಗಳಲ್ಲಿ ಅವರ ಹೆಸರು ಸುವರ್ಣಾಕ್ಷರಗಳಲ್ಲಿ ಅಚ್ಚಾಯಿತು. ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಬೆಳ್ಳಿಯ ಪದಕ ಗೆದ್ದ ದೇಶದ ಮೊದಲ ಬಾಕ್ಸರ್‌ ಎಂಬ ಹಿರಿಮೆಗೆ ಅವರು ಭಾಜನರಾದರು.

ಈ ಹಿಂದೆ ವಿಜೇಂದರ್‌ ಸಿಂಗ್‌ (2009), ವಿಕಾಸ್‌ ಕೃಷ್ಣನ್‌ (2011), ಶಿವ ಥಾಪಾ (2015) ಮತ್ತು ಗೌರವ್‌ ಬಿಧುರಿ (2017) ಅವರು ಕಂಚಿನ ಪದಕ ಗಳಿಸಿದ್ದರು. ಶುಕ್ರವಾರ ಮನೀಷ್‌ ಕೌಶಿಕ್‌ ಕಂಚಿನ ಪದಕ ಪಡೆದಿದ್ದರು.

ಚಿನ್ನದ ಪದಕದ ಪೈಪೋಟಿಯಲ್ಲಿ ಅಮಿತ್‌ 0–5 ಪಾಯಿಂಟ್ಸ್‌ನಿಂದ ಉಜ್ಬೇಕಿಸ್ತಾನದ ಶಕೋಬಿದಿನ್‌ ಜೊಯಿರೊವ್‌ ಎದುರು ಶರಣಾದರು.

ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಜೊಯಿರೊವ್‌ ಮೊದಲ ಸುತ್ತಿನ ಶುರುವಿನಿಂದಲೇ ಭಾರತದ ಬಾಕ್ಸರ್‌ ಮೇಲೆ ಪ್ರಹಾರ ನಡೆಸಿದರು. ಎದುರಾಳಿಯ ಆಕ್ರಮಣಕಾರಿ ನಡೆಯಿಂದ ಕೊಂಚ ಗಲಿಬಿಲಿಗೊಂಡಂತೆ ಕಂಡ ಅಮಿತ್‌, ರಕ್ಷಣೆಗೆ ಒತ್ತು ನೀಡಿದರು.

ಮೊದಲ ಸುತ್ತಿನ ಹೋರಾಟ ಮುಗಿಯಲು ಕೆಲ ಸೆಕೆಂಡುಗಳು ಬಾಕಿ ಇದ್ದಾಗ ಜೊಯಿರೊವ್‌ ಅವರು ಭಾರತದ ಬಾಕ್ಸರ್‌ನ ಎಡ ದವಡೆಗೆ ಬಲವಾಗಿ ಪಂಚ್‌ ಮಾಡಿದರು. ಇದರಿಂದ ಅಮಿತ್‌ ತಬ್ಬಿಬ್ಬಾದರು.

ಎರಡನೇ ಸುತ್ತಿನಲ್ಲಿ ಅಮಿತ್‌ ಅವರ ಆಟ ಕಳೆಗಟ್ಟಿತು. ಆರಂಭದಿಂದಲೇ ಎದುರಾಳಿಯ ಮುಖ ಮತ್ತು ತಲೆಗೆ ಪಂಚ್‌ ಮಾಡಲು ಮುಂದಾದ ಅವರು ನಂತರ ರಕ್ಷಣಾತ್ಮಕ ಆಟದ ಮೊರೆ ಹೋದರು. ಈ ಸುತ್ತಿನ ಕೊನೆಯಲ್ಲಿ ಜೊಯಿರೊವ್‌ ಮತ್ತೊಮ್ಮೆ ಅಮಿತ್‌ ಅವರ ಮುಖಕ್ಕೆ ನಿಖರವಾಗಿ ಪಂಚ್‌ ಮಾಡಿ ಪಾಯಿಂಟ್‌ ಗಳಿಸಿದರು.

ಅಂತಿಮ ಸುತ್ತಿನಲ್ಲಿ ಅಮಿತ್‌ ಎದುರಾಳಿಯ ತಂತ್ರಗಳಿಗೆ ಪ್ರತಿ ತಂತ್ರ ಹೆಣೆದರು. ಹೀಗಿದ್ದರೂ ಭಾರತದ ಬಾಕ್ಸರ್‌ಗೆ ಪಾಯಿಂಟ್‌ ಖಾತೆ ತೆರೆಯಲು ಆಗಲಿಲ್ಲ.

ಚಾಂಪಿಯನ್‌ಷಿಪ್‌ವೊಂದರಲ್ಲಿ ಭಾರತ ತಂಡ ಎರಡು ಪದಕಗಳನ್ನು ಜಯಿಸಿದ್ದು ಇದೇ ಮೊದಲು. ಇದು ತಂಡದ ಶ್ರೇಷ್ಠ ಸಾಧನೆಯಾಗಿದೆ.

‘ನಾವು ಬಾಕ್ಸರ್‌ಗಳಿಗೆ ಅತ್ಯಾಧುನಿಕ ಮೂಲ ಸೌಕರ್ಯಗಳನ್ನು ಒದಗಿಸುವ ಜೊತೆಗೆ ವಿದೇಶಗಳಲ್ಲಿ ವಿಶೇಷ ತರಬೇತಿ ಪಡೆಯುವ ವ್ಯವಸ್ಥೆ ಮಾಡಿದ್ದೆವು. ಹೀಗಾಗಿ ನಮ್ಮವರು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಲು ಸಾಧ್ಯವಾಗುತ್ತಿದೆ. ಮುಂದೆಯೂ ನಾವು ಬಾಕ್ಸರ್‌ಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ’ ಎಂದು ಭಾರತ ಬಾಕ್ಸಿಂಗ್‌ ಫೆಡರೇಷನ್‌ (ಬಿಎಫ್‌ಐ) ಅಧ್ಯಕ್ಷ ಅಜಯ್‌ ಸಿಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT