ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸಾತ್ವಿಕ್–ಚಿರಾಗ್ ಜೋಡಿಗೆ ನಿರಾಶೆ

ಸಂಚಿಯಾನ್: ಭಾರತದ ಕಿದಂಬಿ ಶ್ರೀಕಾಂತ್ ಮತ್ತು ಪಿ.ವಿ.ಸಿಂಧು ಅವರು ಕೊರಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಸಿಂಧು ಥಾಯ್ಲೆಂಡ್‌ನ ಬುಸನಾನ್ ಒಂಗ್‌ಬಂಪ್ರುನ್‌ಫನ್ ಎದುರು 21-10, 21-16ರಲ್ಲಿ ಜಯ ಗಳಿಸಿದರು. ಬುಸನಾನ್ ವಿರುದ್ಧ ಸಿಂಧು ಅವರ 17ನೇ ಜಯ ಇದಾಗಿದೆ. ಎರಡನೇ ಶ್ರೇಯಾಂಕದ ಕೊರಿಯಾ ಆಟಗಾರ್ತಿ ಆ್ಯನ್ ಸೆಯಂಗ್ ಸೆಮಿಫೈನಲ್‌ನಲ್ಲಿ ಸಿಂಧು ಅವರಿಗೆ ಸವಾಲೊಡ್ಡಲಿದ್ದಾರೆ.
ಪುರುಷರ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯ ಭಾರಿ ಕುತೂಹಲ ಕೆರಳಿಸಿತ್ತು. ವಿಶ್ವ ಕ್ರಮಾಂಕದಲ್ಲಿ ಈ ಹಿಂದೆ ಅಗ್ರ ಸ್ಥಾನದಲ್ಲಿದ್ದ ಉಭಯ ಆಟಗಾರರು ನಾಲ್ಕರ ಘಟ್ಟದ ಮೇಲೆ ಕಣ್ಣಿಟ್ಟು ಜಿದ್ದಾಜಿದ್ದಿಯಿಂದ ಕಾದಾಡಿದರು. ಆದರೆ ಶ್ರಿಕಾಂತ್ ಅವರ ಚುರುಕಿನ ಆಟಕ್ಕೆ ಉತ್ತರ ನೀಡುವಲ್ಲಿ ಸ್ಥಳೀಯ ಆಟಗಾರ ಸೋನ್ ವ್ಯಾನ್ ಹೊ ವಿಫಲರಾದರು. ಶ್ರೀಕಾಂತ್ 21-12, 18-21, 21-12ರಲ್ಲಿ ಜಯ ಸಾಧಿಸಿದರು.
ಹಿಂದಿನ ಮೂರು ಪಂದ್ಯಗಳಲ್ಲಿ ಕೊರಿಯಾ ಆಟಗಾರನಿಗೆ ಮಣಿದಿದ್ದ ಶ್ರೀಕಾಂತ್ ಇಲ್ಲಿ ಸೇಡು ತೀರಿಸಿಕೊಂಡರು. 5ನೇ ಶ್ರೇಯಾಂಕದ ಶ್ರೀಕಾಂತ್ ಸೆಮಿಫೈನಲ್‌ನಲ್ಲಿ 3ನೇ ಶ್ರೇಯಾಂಕದ ಇಂಡೊನೇಷ್ಯಾ ಆಟಗಾರ ಜೊನಾಥನ್ ಕ್ರಿಸ್ಟಿ ವಿರುದ್ಧ ಸೆಣಸುವರು.
ಸಾತ್ವಿಕ್–ಚಿರಾಗ್ ಜೋಡಿಗೆ ಸೋಲು
ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲವಾಯಿತು. ಕೊರಿಯಾದ ಕಾಂಗ್ ಮಿನ್ಯುಕ್ ಮತ್ತು ಸಿಯೊ ಸ್ಯುಂಗೆ ಎದುರು ಭಾರತದ ಆಟಗಾರರು 20-22, 21-18 20-22ರಲ್ಲಿ ಸೋತರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.