ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌: ಶ್ರೀಕಾಂತ್‌ ಶುಭಾರಂಭ

Last Updated 18 ಅಕ್ಟೋಬರ್ 2022, 14:05 IST
ಅಕ್ಷರ ಗಾತ್ರ

ಒಡೆನ್ಸ್‌, ಡೆನ್ಮಾರ್ಕ್‌: ಭಾರತದ ಕಿದಂಬಿ ಶ್ರೀಕಾಂತ್‌, ಡೆನ್ಮಾರ್ಕ್‌ ಓಪನ್‌ ಸೂಪರ್‌–750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು 17-21, 21-14, 21-12 ರಲ್ಲಿ ಹಾಂಕಾಂಗ್‌ನ ಎಂಗ್ ಕಾ ಲಾಂಗ್‌ ಆ್ಯಂಗಸ್ ಅವರನ್ನು ಮಣಿಸಿದರು.

ಐದು ವರ್ಷಗಳ ಹಿಂದೆ ಇಲ್ಲಿ ಪ್ರಶಸ್ತಿ ಜಯಿಸಿದ್ದ ಶ್ರೀಕಾಂತ್, ವಿಶ್ವದ 14ನೇ ರ್‍ಯಾಂಕ್‌ನ ಆಟಗಾರನನ್ನು ಮಣಿಸಲು 56 ನಿಮಿಷಗಳನ್ನು ತೆಗೆದುಕೊಂಡರು. ಈ ಪಂದ್ಯಕ್ಕೂ ಮುನ್ನ ಉಭಯ ಆಟಗಾರರು ಆರು ಪಂದ್ಯಗಳನ್ನು ಆಡಿದ್ದು, 3–3 ರಲ್ಲಿ ಸಮಬಲ ಸಾಧಿಸಿದ್ದರು.

ಮೊದಲ ಗೇಮ್‌ನಲ್ಲಿ ಸೋತರೂ ತಿರುಗೇಟು ನೀಡಿದ ಶ್ರೀಕಾಂತ್‌, ಗೆಲುವು ದಕ್ಕಿಸಿಕೊಂಡರು.‌ ಎರಡನೇ ಗೇಮ್‌ನಲ್ಲಿ ಶಿಸ್ತಿನ ಆಟವಾಡಿದ ಅವರು 6–3 ರಲ್ಲಿ ಮುನ್ನಡೆ ಸಾಧಿಸಿದರು. ತಿರುಗೇಟು ನೀಡಿದ ಆ್ಯಂಗಸ್‌ 10–8 ರಲ್ಲಿ ಮೇಲುಗೈ ಪಡೆದರು. ಮತ್ತೆ ಲಯ ಕಂಡುಕೊಂಡ ಭಾರತದ ಆಟಗಾರ ಚಾಣಾಕ್ಷ ಹೊಡೆತಗಳ ಮೂಲಕ ಮೇಲಿಂದ ಮೇಲೆ ಪಾಯಿಂಟ್‌ ಕಲೆಹಾಕಿ 16–10 ರಲ್ಲಿ ಮುನ್ನಡೆ ಸಾಧಿಸಿದರು. ಆ ಬಳಿಕ ಹೆಚ್ಚಿನ ಒತ್ತಡಕ್ಕೆ ಒಳಗಾಗದೆ ಗೇಮ್‌ ಗೆದ್ದರು.

ನಿರ್ಣಾಯಕ ಗೇಮ್‌ನಲ್ಲಿ ಶ್ರೀಕಾಂತ್‌ ಆಟಕ್ಕೆ ಎದುರಾಳಿ ತಬ್ಬಿಬ್ಬಾದರು. 11–4 ರಲ್ಲಿ ಮುನ್ನಡೆ ಸಾಧಿಸಿದ ಅವರು ಕೊನೆಯವರೆಗೂ ಮುನ್ನಡೆ ಕಾಪಾಡಿಕೊಂಡು ಪಂದ್ಯ ಜಯಿಸಿದರು. ಎರಡನೇ ಸುತ್ತಿನಲ್ಲಿ ಅವರು 2021ರ ಚಾಂಪಿಯನ್‌ ಸಿಂಗಪುರದ ಲೊ ಕೀನ್‌ ಯೆವ್‌ ಅವರನ್ನು ಎದುರಿಸುವರು.

ತ್ರಿಶಾ– ಗಾಯತ್ರಿಗೆ ಗೆಲುವು: ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಕಣದಲ್ಲಿರುವ ತ್ರಿಶಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್‌ 21–15, 21–15 ರಲ್ಲಿ ಆತಿಥೇಯ ದೇಶದ ಅಲೆಕ್ಸಾಂಡ್ರಾ ಬೋಯೆ– ಅಮೇಲಿ ಮೆಗ್‌ಲುಂಗ್‌ ಅವರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದರು.

ಭಾರತದ ಲಕ್ಷ್ಯ ಸೇನ್‌, ಎಚ್.ಎಸ್‌.ಪ್ರಣಯ್‌ ಮತ್ತು ಸೈನಾ ನೆಹ್ವಾಲ್‌ ಅವರು ಬುಧವಾರ ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT