ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಿ ಆಟಗಾರರ ಹಣಾಹಣಿ

ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ ‘ಎ’ ಡಿವಿಷನ್ ಟೂರ್ನಿ: ಸುನಿಲ್‌, ಉತ್ತಪ್ಪ, ರಘುನಾಥ್‌ ಮೇಲೆ ಭರವಸೆ
Last Updated 30 ಜನವರಿ 2019, 20:00 IST
ಅಕ್ಷರ ಗಾತ್ರ

ಗ್ವಾಲಿಯರ್‌: ಎಸ್‌.ವಿ.ಸುನಿಲ್. ರೂಪಿಂದರ್‌ ಪಾಲ್ ಸಿಂಗ್ ಮತ್ತು ರಮನ್‌ದೀಪ್ ಸಿಂಗ್ ಮುಂತಾದ ಹಿರಿಯರು ಕಣಕ್ಕೆ ಇಳಿಯುವ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನ ‘ಎ’ ಡಿವಿಷನ್ ಟೂರ್ನಿಗೆ ಗರುವಾರ ಚಾಲನೆ ಸಿಗಲಿದೆ.

ರಾಷ್ಟ್ರೀಯ ತಂಡದಲ್ಲಿ ಆಡುವ ಪ್ರಮುಖರು ಟೂರ್ನಿಯಲ್ಲಿ ಕಣಕ್ಕೆ ಇಳಿಯುವ ಕಾರಣ ರೋಚಕ ಹಣಾಹಣಿಯನ್ನು ನಿರೀಕ್ಷಿಸಲಾಗಿದೆ. ಪಂದ್ಯಗಳು 11 ದಿನ ನಡೆಯಲಿವೆ.

ಕಳೆದ ವರ್ಷ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸಂದರ್ಭದಲ್ಲಿ ಸ್ಟ್ರೈಕರ್ ರಮಣ್‌ದೀಪ್‌ ಗಾಯಗೊಂಡಿದ್ದರು. ಆರು ತಿಂಗಳ ನಂತರ ಅವರು ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಹಾಲಿ ಚಾಂಪಿಯನ್‌ ಹಾಕಿ ಪಂಜಾಬ್‌ ತಂಡದ ಪರ ಆಡಲಿರುವ ಅವರ ಜೊತೆ ರೂಪಿಂದರ್ ಪಾಲ್‌, ಆಕಾಶ್‌ದೀಪ್‌ ಮುಂತಾದವರು ಇದ್ದಾರೆ.

ಮೊಣಕಾಲಿನ ನೋವಿನಿಂದ ಬಳಲಿದ್ದ ಫಾರ್ವರ್ಡ್ ಆಟಗಾರ ಎಸ್‌.ವಿ.ಸುನಿಲ್‌ ಕಳೆದ ವರ್ಷದ ಕೊನೆಯಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಆಡಿರಲಿಲ್ಲ. ಕರ್ನಾಟಕ ತಂಡವನ್ನು ಅವರು ಮುನ್ನಡೆಸಲಿದ್ದು ಉಪನಾಯಕ ಎಸ್‌.ಕೆ.ಉತ್ತಪ್ಪ, ವಿ.ಆರ್.ರಘುನಾಥ್‌, ಮಣಿಕಾಂತ್ ಬಿಜವಾಡ ಅವರ ಬಲವಿದೆ. ಗೋಲ್ ಕೀಪರ್ ಜೆ.ಚೇತನ್‌ ಮೇಲೆ ತಂಡ ಭರವಸೆ ಇರಿಸಿದೆ.

ಬಲಿಷ್ಠ ಪೆಟ್ರೋಲಿಯಂ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್‌ ತಂಡವು ವರುಣ್ ಕುಮಾರ್, ಕೊಥಾಜಿತ್‌ ಸಿಂಗ್‌, ಲಲಿತ್ ಕುಮಾರ್ ಉಪಾಧ್ಯಾಯ, ಹಾರ್ದಿಕ್ ಸಿಂಗ್‌, ಗುರ್ಜಂತ್ ಸಿಂಗ್‌, ಮನದೀಪ್ ಸಿಂಗ್‌ ಮತ್ತು ಬೀರೇಂದ್ರ ಲಾಕ್ರಾ ಅವರನ್ನು ಒಳಗೊಂಡಿದೆ. ಈ ತಂಡ ಕಳೆದ ಬಾರಿ ರನ್ನರ್ ಅಪ್ ಆಗಿತ್ತು. ರೈಲ್ವೆ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್‌ ತಂಡದಲ್ಲಿ ನೀಲಕಂಠ ಶರ್ಮಾ, ನಾಯಕ ಚಿಂಗ್ಲೆನ್ಸಾನ ಸಿಂಗ್‌ ಹಾಗೂ ದಿಲ್‌ಪ್ರೀತ್ ಸಿಂಗ್‌ ಮಿಂಚುವ ಭರವಸೆ ಇದೆ.

ಒಡಿಶಾ ತಂಡದ ಪರ ದಿಪ್ಸನ್ ಟರ್ಕಿ, ನೀಲಂ ಸಂಜೀಪ್‌ ಕ್ಸೆಸ್‌ ಮತ್ತು ಶಿಲಾನಂದ ಲಾಕ್ರ ಕಣಕ್ಕೆ ಇಳಿಯಲಿದ್ದು ಪಂಜಾಬ್ ನ್ಯಾಷನಲ್ ಬ್ಯಾಂಕ್ ತಂಡದ ಪರ ಯುವ ಆಟಗಾರ ಮನದೀಪ್ ಮೋರ್‌ ಆಡಲಿದ್ದಾರೆ. ಸುಲ್ತಾನ್ ಆಫ್ ಜೋಹರ್ ಕಪ್‌ನಲ್ಲಿ ಮಿಂಚಿದ ಅವರ ಮೇಲೆ ಹಾಕಿ ಪ್ರಿಯರು ದೃಷ್ಟಿ ನೆಟ್ಟಿದ್ದಾರೆ.

ಐದು ತಂಡಗಳ ನಾಲ್ಕು ಗುಂಪು:ತಲಾ ಐದು ತಂಡಗಳ ನಾಲ್ಕು ಗುಂಪುಗಳು ಟೂರ್ನಿಯಲ್ಲಿದ್ದು ಗುಂಪು ಹಂತದಲ್ಲಿ ಪ್ರತಿ ತಂಡಗಳು ಒಂದೊಂದು ಬಾರಿ ಮುಖಾಮುಖಿ ಆಗಲಿವೆ. ಪ್ರತಿ ಗುಂಪಿನಲ್ಲಿ ಅಗ್ರ ಸ್ಥಾನ ಗಳಿಸುವ ಎರಡು ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ.

ಗುರುವಾರ ಬೆಳಿಗ್ಗೆ 7.30ಕ್ಕೆ ಹಾಕಿ ಪಂಜಾಬ್‌ ಮತ್ತು ಮುಂಬೈ ಹಾಕಿ ಸಂಘದ ನಡುವಿನ ಪಂದ್ಯದೊಂದಿಗೆ ಟೂರ್ನಿ ಆರಂಭವಾಗಲಿದೆ.

*
ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ತೋರುವ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ಪರಿಗಣಿಸಲಾಗುವುದು. ಆದ್ದರಿಂದ ಜಿದ್ದಾಜಿದ್ದಿಯ ಪೈಪೋಟಿ ನಿರೀಕ್ಷಿಸಲಾಗಿದೆ.
-ಡೇವಿಡ್ ಜಾನ್‌, ಹೈ ಪರ್ಫಾರ್ಮೆನ್ಸ್ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT