ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರಿಯನ್‌ ಗ್ರ್ಯಾನ್‌ ಪ್ರಿಯಲ್ಲಿ ವಾಲ್ಟೆರಿ ಚಾಂಪಿಯನ್‌

Last Updated 6 ಜುಲೈ 2020, 14:14 IST
ಅಕ್ಷರ ಗಾತ್ರ

ಸ್ಪಿಲ್‌ಬರ್ಗ್‌: ವಿಶ್ವ ಚಾಂಪಿಯನ್ ಲೂಯಿಸ್‌ ಹ್ಯಾಮಿಲ್ಟನ್‌ ಅವರನ್ನು ಹಿಂದಿಕ್ಕಿದ ವಾಲ್ಟೆರಿ ಬೊಟಾಸ್ ಅವರು ಫಾರ್ಮುಲಾ ಒನ್ ಋತುವಿನ ಮೊದಲ ರೇಸ್‌ ಆಸ್ಟ್ರಿಯನ್ ಗ್ರ್ಯಾನ್‌ ಪ್ರಿಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ. ಭಾನುವಾರ ರಾತ್ರಿ ನಡೆದ ಫೈನಲ್‌ ರೇಸ್‌ನಲ್ಲಿ ಹ್ಯಾಮಿಲ್ಟನ್‌ ನಾಲ್ಕನೇ ಸ್ಥಾನ ಗಳಿಸಿದರು.

ಮರ್ಸಿಡೀಸ್‌ ತಂಡವನ್ನು ಪ್ರತಿನಿಧಿಸುವ ಫಿನ್‌ಲೆಂಡ್‌ನ ಬೊಟಾಸ್‌ ಅವರಿಗೆ ಇದು ವೃತ್ತಿಜೀವನದ ಎಂಟನೇ ಫಾರ್ಮುಲಾ ಒನ್‌ ಪ್ರಶಸ್ತಿ.

ತಮ್ಮ ಕಾರಿನಿಂದ ಇನ್ನೊಂದು ಕಾರಿಗೆ ಢಿಕ್ಕಿ ಹೊಡೆಸಿದ ತಪ್ಪಿಗೆ ಮರ್ಸಿಡೀಸ್‌ ತಂಡದ ಹ್ಯಾಮಿಲ್ಟನ್‌ ಅವರಿಗೆ ಐದು ಸೆಕೆಂಡ್‌ಗಳ ಪೆನಾಲ್ಟಿ ವಿಧಿಸಲಾಯಿತು. ಹೀಗಾಗಿ ರೇಸ್ಅನ್ನು ಎರಡನೇ ಸ್ಥಾನದಲ್ಲಿ ಕೊನೆಗೊಳಿಸಿದ್ದರೂ ಅವರಿಗೆ ನಾಲ್ಕನೇ ಸ್ಥಾನ ನೀಡಲಾಯಿತು.

ಫೆರಾರಿ ತಂಡದ ಚಾರ್ಲ್ಸ್‌ ಲೆಕ್ಲೆರ್‌‌ ಎರಡನೇ ಸ್ಥಾನ ಗಳಿಸಿದರೆ, ಮೂರನೇ ಸ್ಥಾನವು ಮೆಕ್‌ ಲಾರೆನ್‌ ಕಾರು ಚಾಲಕ ಲ್ಯಾಂಡೊ ನಾರಿಸ್‌ ಅವರ ಪಾಲಾಯಿತು.

ಟ್ರೋಫಿ ಸ್ವೀಕರಿಸಿದ ಬೊಟಾಸ್‌ ಅವರು ವರ್ಣಭೇದ ನೀತಿಯ ವಿರುದ್ಧ ಮೊಣಕಾಲೂರಿ ನಿಂತು ಪ್ರತಿಭಟನೆ ದಾಖಲಿಸಿದರು. ರೇಸ್‌ನಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ಚಾಲಕರು ‘ವರ್ಣಭೇದ ಕೊನೆಗೊಳಿಸಿ (ಎಂಡ್‌ ರೇಸಿಸಂ)’ ಎಂಬ ಬರಹವಿದ್ದ ಟಿ–ಶರ್ಟ್‌ ಪ್ರದರ್ಶಿಸಿದರು.

ರೇಸ್‌ ಆರಂಭಕ್ಕೂ ಮುನ್ನ ಎಲ್ಲ ಚಾಲಕರು ’ರೇಸಿಸಂ ಕೊನೆಗೊಳಿಸಿ’ ಎಂದು ಟಿ–ಶರ್ಟ್‌ ಧರಿಸಿದ್ದರು. ಆದರೆ ಆರು ಚಾಲಕರು ಮೊಣಕಾಲೂರಿ ಪ್ರತಿಭಟಿಸಲಿಲ್ಲ. ಫಾರ್ಮುಲಾ ಒನ್‌ ಕ್ರೀಡೆಯಲ್ಲಿರುವ ಕಪ್ಪು ಜನಾಂಗದ ಏಕೈಕ ಚಾಲಕ ಹ್ಯಾಮಿಲ್ಟನ್‌ ಅವರು, ಮುಂಭಾಗದಲ್ಲಿ ‘ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌’ ಹಾಗೂ ಹಿಂಬದಿಯಲ್ಲಿ ‘ಎಂಡ್‌ ರೇಸಿಸಂ’ ಎಂದು ಬರೆದಿದ್ದ ಟಿ–ಶರ್ಟ್‌ ಧರಿಸಿ ಗಮನ ಸೆಳೆದರು.

ಚಾಲಕರ ರಕ್ಷಣೆಗಾಗಿ ಇದ್ದ ಕಾರೊಂದರಿಂದ ರೇಸ್‌ಗೆ ಮೂರು ಬಾರಿ ತಡೆ ಉಂಟಾಯಿತು. 20ರ ಪೈಕಿ ಒಂಬತ್ತು ಮಂದಿ ಚಾಲಕರು ರೇಸ್‌ ತ್ಯಜಿಸಬೇಕಾಯಿತು. ಇದರಲ್ಲಿ ರೆಡ್‌ ಬುಲ್ಸ್‌‌ ತಂಡದ ಮ್ಯಾಕ್ಸ್‌ ವರ್ಸ್ಟಾಪನ್‌‌‌ ಹಾಗೂ ಅಲೆಕ್ಸಾಂಡರ್‌ ಅಲ್ಬನ್‌ ಅವರೂ ಸೇರಿದ್ದರು. ಫೈನಲ್‌ ಗೆರೆ ತಲುಪಲು ಮೂರು ಸುತ್ತುಗಳು ಬಾಕಿಯಿರುವಂತೆ ಹ್ಯಾಮಿಲ್ಟನ್‌ ಅವರನ್ನು ಹಿಂದಿಕ್ಕುವ ಭರದಲ್ಲಿಅಲೆಕ್ಸಾಂಡರ್‌ ಅಲ್ಬನ್ ಅವರ ಕಾರು ಟ್ರ್ಯಾಕ್‌ನಿಂದ ಆಚೆ ಹಾರಿಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT