ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌ ಚಾಂಪಿಯನ್‌ಷಿಪ್: ಫ್ರಾನ್ಸ್‌ ವಿರುದ್ಧ ಗೆಲುವು, ಸೆಮಿಫೈನಲ್‌ಗೆ ಭಾರತ

Last Updated 24 ನವೆಂಬರ್ 2022, 10:28 IST
ಅಕ್ಷರ ಗಾತ್ರ

ಜೆರುಸಲೆಂ: ಭಾರತ ತಂಡದವರು ಫಿಡೆ ವಿಶ್ವ ತಂಡ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಟೈ ಬ್ರೇಕರ್‌ನಲ್ಲಿ ಫ್ರಾನ್ಸ್‌ ತಂಡವನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದರು.

ಗುರುವಾರ ನಡೆದ ಕ್ವಾರ್ಟರ್‌ಫೈನಲ್‌ ಎರಡು ಸೆಟ್‌ಗಳ ಪಂದ್ಯಗಳ ಬಳಿಕ ಸಮಬಲದಲ್ಲಿ ಕೊನೆಗೊಂಡಿತು. ಇದರಿಂದ ವಿಜೇತರನ್ನು ನಿರ್ಣಯಿಸಲು ಟೈಬ್ರೇಕರ್‌ನ ಮೊರೆ ಹೋಗಲಾಯಿತು. ಬ್ಲಿಟ್ಜ್‌ ಟೈಬ್ರೇಕರ್‌ನಲ್ಲಿ ಭಾರತ 2.5– 1.5 ಪಾಯಿಂಟ್ಸ್‌ಗಳಿಂದ ಗೆದ್ದಿತು.

ನಾಲ್ಕು ಪಂದ್ಯಗಳನ್ನೊಂಡ ಟೈಬ್ರೇಕರ್‌ನ ಮೊದಲ ಗೇಮ್‌ನಲ್ಲಿ ವಿದಿತ್‌ ಗುಜರಾತಿ ಅವರು ಫ್ರಾನ್ಸ್‌ನ ಮ್ಯಾಕ್ಸಿಮ್‌ ವಾಶಿರ್‌ ಲಗ್ರಾವ್ ಜತೆ 45 ನಡೆಗಳಲ್ಲಿ ಡ್ರಾ ಮಾಡಿಕೊಂಡರು. ಅನುಭವಿ ಸ್ಪರ್ಧಿ ಕೆ.ಶಶಿಕಿರಣ್‌ 55 ನಡೆಗಳಲ್ಲಿ ಮ್ಯಾಕ್ಸಿಮ್‌ ಲಗಾರ್ಡ್‌ ಎದುರು ಸೋತರು. ಇದರಿಂದ ಫ್ರಾನ್ಸ್‌ 1.5–0.5 ಮುನ್ನಡೆ ಪಡೆಯಿತು.

ಆದರೆ ನಿಹಾಲ್‌ ಸರಿನ್‌ ಮತ್ತು ಎಸ್‌.ಎಲ್‌.ನಾರಾಯಣನ್‌ ಅವರು ಕ್ರಮವಾಗಿ ಜೂಲ್ಸ್‌ ಮೊಸಾರ್ಡ್‌ ಹಾಗೂ ಲಾರೆಂಟ್‌ ಫ್ರೆಸಿನೆಟ್‌ ಅವರನ್ನು ಮಣಿಸಿ ಭಾರತದ ರೋಚಕ ಗೆಲುವಿಗೆ ಕಾರಣರಾದರು. ಸೆಮಿಫೈನಲ್‌ನಲ್ಲಿ ಭಾರತ ತಂಡ, ಉಜ್ಬೆಕಿಸ್ತಾನದ ಸವಾಲು ಎದುರಿಸಲಿದೆ.

ಇದಕ್ಕೂ ಮುನ್ನ ನಡೆದಿದ್ದ ಎರಡು ಸೆಟ್‌ಗಳ ‍ಪಂದ್ಯದ ಮೊದಲ ಸೆಟ್‌ನಲ್ಲಿ ಭಾರತ 3–1 ರಲ್ಲಿ ಫ್ರಾನ್ಸ್‌ ತಂಡವನ್ನು ಮಣಿಸಿತ್ತು. ಆದರೆ ಎರಡನೇ ಸೆಟ್‌ಅನ್ನು ಇದೇ ಅಂತರದಿಂದ ಗೆದ್ದ ಫ್ರಾನ್ಸ್‌ ಪಂದ್ಯವನ್ನು ಟೈಬ್ರೇಕರ್‌ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿತ್ತು.

ಇನ್ನೊಂದು ಸೆಮಿಫೈನಲ್‌ನಲ್ಲಿ ಸ್ಪೇನ್‌– ಚೀನಾ ಎದುರಾಗಲಿವೆ. ಈ ತಂಡಗಳು ಕ್ವಾರ್ಟರ್‌ ಫೈನಲ್‌ನಲ್ಲಿ ಕ್ರಮವಾಗಿ ಅಜರ್‌ಬೈಜಾನ್ ಹಾಗೂ ಪೋಲೆಂಡ್‌ ವಿರುದ್ಧ ಗೆದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT