ಟೆನಿಸ್‌ನಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿದ ಬೋಪಣ್ಣ, ಅಂಕಿತಾ

7
ಏಷ್ಯನ್ ಕ್ರೀಡಾಕೂಟ

ಟೆನಿಸ್‌ನಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿದ ಬೋಪಣ್ಣ, ಅಂಕಿತಾ

Published:
Updated:

ಪಾಲೆಂಬಂಗ್‌: ಡಬಲ್ಸ್‌ ವಿಭಾಗದ ಅಗ್ರ ಶ್ರೇಯಾಂಕಿತ ರೋಹನ್‌ ಬೋಪಣ್ಣ–ದಿವಿಜ್ ಶರಣ್ ಜೋಡಿ ಮತ್ತು ಸಿಂಗಲ್ಸ್ ವಿಭಾಗದ ಆಟಗಾರ್ತಿ ಅಂಕಿತ ರೈನಾ ಅವರು ಟೆನಿಸ್‌ನಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿದರು.

ಬೋಪಣ್ಣ–ದಿವಿಜ್ ಜೋಡಿ ಮತ್ತು ಅಂಕಿತ ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಗೆದ್ದು ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದರು.

ವಿಶ್ವ ಕ್ರಮಾಂಕದಲ್ಲಿ 189ನೇ ಸ್ಥಾನದಲ್ಲಿರುವ ಅಂಕಿತ ಹಾಂಕಾಂಗ್‌ನ ಯೂಡಿಸ್ ಚಾಂಗ್ ಅವರನ್ನು 6–4, 6–1ರಿಂದ ಮಣಿಸಿದರು. ಸೆಮಿಫೈನಲ್‌ನಲ್ಲಿ ಸೋತರೂ ಅವರು ಕಂಚಿನ ಪದಕ ಗಳಿಸಲಿದ್ದಾರೆ.

ಮಹಿಳಾ ಸಿಂಗಲ್ಸ್‌ನಲ್ಲಿ ಭಾರತ ಈ ವರೆಗೆ ಎರಡು ಪದಕಗಳನ್ನು ಮಾತ್ರ ಗಳಿಸಿದೆ. 2006 ಮತ್ತು 2010ರಲ್ಲಿ ಸಾನಿಯಾ ಮಿರ್ಜಾ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದರು.

ಮೊದಲ ಸೆಟ್‌ನಲ್ಲಿ 1–4 ಗೇಮ್‌ಗಳ ಹಿನ್ನಡೆ ಅನುಭವಿಸಿದ್ದ ಅಂಕಿತ ನಂತರ ಚೇತರಿಸಿಕೊಂಡು ಎದುರಾಳಿಯನ್ನು ದಂಗುಬಡಿಸಿದರು. 54 ನಿಮಿಷಗಳ ಹೋರಾಟ ಕಂಡ ಮೊದಲ ಸೆಟ್‌ನಲ್ಲಿ ಕೊನೆಯ ವರೆಗೆ ಪ್ರತಿರೋಧ ತೋರಿದ ಹಾಂಕಾಂಗ್‌ನ ಆಟಗಾರ್ತಿ ಎರಡನೇ ಸೆಟ್‌ನಲ್ಲಿ ಕೇವಲ 27 ನಿಮಿಷಗಳಲ್ಲಿ ಮಂಡಿಯೂರಿದರು.

ಜೊತೆಯಾಗಿ ಹೆಚ್ಚು ಪಂದ್ಯಗಳನ್ನು ಆಡಿದ ಅನುಭವ ಇಲ್ಲದ ಬೋಪಣ್ಣ ಮತ್ತು ದಿವಿಜ್ ಶರಣ್‌ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾ ತೈಪೆಯ ಯಾಂಗ್ ಸೀ ಮತ್ತು ಯಾಂಗ್‌ ಸಂಗ್‌ ಹುವಾ ಎದುರು 6–3, 5–7, 10–1ರಿಂದ ಗೆದ್ದರು.

ರಾಮ್‌ಕುಮಾರ್‌ಗೆ ನಿರಾಸೆ

ಪುರುಷರ ಸಿಂಗಲ್ಸ್‌ನಲ್ಲಿ ಎರಡನೇ ಶ್ರೇಯಾಂಕ ಹೊಂದಿದ್ದ ರಾಮ್‌ಕುಮಾರ್ ರಾಮನಾಥನ್‌ ಪ್ರೀ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಉಜ್ಬೆಕಿಸ್ತಾನದ ಜುರಾಬೆಕ್‌ ಕರಿಮೊವ್‌ ಎದುರು 3–6, 6–4, 3–6ರಿಂದ ಸೋತು ನಿರಾಸೆಗೊಂಡರು.

ಪ್ರಜ್ಞೇಶ್‌ ಗುಣೇಶ್ವರನ್‌ ವಿಯೆಟ್ನಾಮ್‌ನ ಲೀ ಹ್ಯಾಂಗ್ ನಾಮ್ ಅವರನ್ನು 6–3, 5–7, 6–4ರಿಂದ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !