ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಫೆಡರರ್‌ ‘ಶತಕ’ ಸಾಧನೆ

ರಫೆಲ್‌ ನಡಾಲ್‌, ಶರಪೋವಾ ಜಯಭೇರಿ
Last Updated 18 ಜನವರಿ 2019, 16:12 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಮೂವತ್ತೇಳರ ಹರೆಯದಲ್ಲೂ ಮಿಂಚಿನ ಸಾಮರ್ಥ್ಯ ತೋರುತ್ತಿರುವ ರೋಜರ್‌ ಫೆಡರರ್‌, ಈ ಋತುವಿನ ಮೊದಲ ಗ್ರ್ಯಾನ್‌ಸ್ಲಾಮ್‌, ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ನಾಲ್ಕನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಸ್ವಿಟ್ಜರ್‌ಲೆಂಡ್‌ನ ರೋಜರ್‌, ಶುಕ್ರವಾರ ರಾಡ್‌ ಲೇವರ್‌ ಅರೆನಾದಲ್ಲಿ 100ನೇ ಪಂದ್ಯ ಆಡಿದ ಸಾಧನೆ ಮಾಡಿದ್ದಾರೆ.

ಮೂರನೇ ಸುತ್ತಿನ ಹಣಾಹಣಿಯಲ್ಲಿ 6–2, 7–5, 6–2 ನೇರ ಸೆಟ್‌ಗಳಿಂದ ಅಮೆರಿಕದ ಟೇಲರ್‌ ಫ್ರಿಟ್ಜ್‌ ಅವರನ್ನು ಮಣಿಸಿ, ‘ಶತಕ’ದ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ. ಈ ಜಯದೊಂದಿಗೆ ಗ್ರ್ಯಾನ್‌ಸ್ಲಾಮ್‌ನಲ್ಲಿ 63ನೇ ಬಾರಿ ನಾಲ್ಕನೇ ಸುತ್ತು ಪ್ರವೇಶಿಸಿದ ದಾಖಲೆಯನ್ನೂ ನಿರ್ಮಿಸಿದ್ದಾರೆ.

ಆಸ್ಟ್ರೇಲಿಯಾ ಓಪನ್‌ನಲ್ಲಿ ಏಳನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ರೋಜರ್‌, ಹದಿನಾರರ ಹಂತದ ಹಣಾಹಣಿಯಲ್ಲಿ ಸ್ಟೆಫಾನೊ ಸಿಟ್ಸಿಪಸ್‌ ಎದುರು ಹೋರಾಡಲಿದ್ದಾರೆ.

ಮೂರನೇ ಸುತ್ತಿನ ಇನ್ನೊಂದು ಹೋರಾಟದಲ್ಲಿ 14ನೇ ಶ್ರೇಯಾಂಕದ ಆಟಗಾರ ಸ್ಟೆಫಾನೊ 6–3, 3–6, 7–6, 6–4ರಲ್ಲಿ ನಿಕೊಲಸ್‌ ಬಸಿಲಸ್ವಿಲಿ ಎದುರು ವಿಜಯಿಯಾದರು.

ಗ್ರ್ಯಾನ್‌ಸ್ಲಾಮ್‌ನಲ್ಲಿ 20 ಪ್ರಶಸ್ತಿಗಳನ್ನು ಗೆದ್ದ ಹೆಗ್ಗಳಿಕೆ ಹೊಂದಿರುವ ಫೆಡರರ್‌, 21 ವರ್ಷ ವಯಸ್ಸಿನ ಫ್ರಿಟ್ಜ್‌ ಎದುರಿನ ಹಣಾಹಣಿಯ ಮೊದಲ ಸೆಟ್‌ನಲ್ಲಿ ನಿರಾಯಾಸವಾಗಿ ಗೆದ್ದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 50ನೇ ಸ್ಥಾನದಲ್ಲಿರುವ ಫ್ರಿಟ್ಜ್‌ ಎರಡನೇ ಸೆಟ್‌ನಲ್ಲಿ ಫೆಡರರ್‌ಗೆ ಪ್ರಬಲ ಪೈಪೋಟಿ ಒಡ್ಡಿದರು. ಹೀಗಾಗಿ 5–5 ಸಮಬಲ ಕಂಡುಬಂತು. ಈ ಹಂತದಲ್ಲಿ ತಮ್ಮ ಸರ್ವ್ ಉಳಿಸಿಕೊಂಡ ಸ್ವಿಟ್ಜರ್‌ಲೆಂಡ್‌ನ ಆಟಗಾರ, ಮರು ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದು ಸಂಭ್ರಮಿಸಿದರು.

ಮೂರನೇ ಸೆಟ್‌ನಲ್ಲೂ ಪ್ರಾಬಲ್ಯ ಮೆರೆದ ಫೆಡರರ್‌ ಏಕಪಕ್ಷೀಯವಾಗಿ ಪಂದ್ಯ ಗೆದ್ದರು.

ನಡಾಲ್‌ಗೆ ಸುಲಭ ಜಯ: ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ರಫೆಲ್‌ ನಡಾಲ್‌ ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿದರು.

ಮೂರನೇ ಸುತ್ತಿನ ಹಣಾಹಣಿಯಲ್ಲಿ ಸ್ಪೇನ್‌ನ ನಡಾಲ್‌ 6–1, 6–2, 6–4ರಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್‌ ಡಿ ಮಿನೌರ್‌ ಅವರನ್ನು ಮಣಿಸಿದರು.

ಇತರ ಪಂದ್ಯಗಳಲ್ಲಿ ಥಾಮಸ್‌ ಬರ್ಡಿಕ್‌ 5–7, 6–3, 7–5, 6–4ರಲ್ಲಿ ಡೀಗೊ ಸ್ವಾರ್ಟ್ಜ್‌ಮನ್‌ ಎದುರೂ, ಗ್ರಿಗರ್‌ ಡಿಮಿಟ್ರೋವ್‌ 7–6, 6–4, 6–4ರಲ್ಲಿ ಥಾಮಸ್‌ ಫಾಬಿಯಾನೊ ಮೇಲೂ, ಫ್ರಾನ್ಸೆಸ್‌ ತಿಯಾಫೊ 6–7, 6–3, 4–6, 6–4, 6–3ರಲ್ಲಿ ಆ್ಯಂಡ್ರೆಸ್‌ ಸೆಪ್ಪಿ ವಿರುದ್ಧವೂ, ರಾಬರ್ಟೊ ಬಟಿಸ್ಟಾ 6–4, 7–5, 6–4ರಲ್ಲಿ ಕರೆನ್‌ ಕಚಾನೊವ್‌ ಮೇಲೂ ಗೆದ್ದರು.

ಮರಿಯಾ ಮಿಂಚು: ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿರುವ ರಷ್ಯಾದ ಮರಿಯಾ ಶರಪೋವಾ ಮೂರನೇ ಸುತ್ತಿನಲ್ಲಿ ಮಿಂಚಿದರು.

30ನೇ ಶ್ರೇಯಾಂಕದ ಆಟಗಾರ್ತಿ ಶರಪೋವಾ 6–4, 4–6, 6–3ರಲ್ಲಿ ಡೆನ್ಮಾರ್ಕ್‌ನ ಆಟಗಾರ್ತಿ, ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಹೊಂದಿದ್ದ ಕ್ಯಾರೋಲಿನ್‌ ವೋಜ್ನಿಯಾಕಿಗೆ ಆಘಾತ ನೀಡಿದರು.

ಇತರ ಪಂದ್ಯಗಳಲ್ಲಿ ಆ್ಯಷ್ಲೆಗ್‌ ಬಾರ್ಟಿ 7–5, 6–1ರಲ್ಲಿ ಮರಿಯಾ ಸಕ್ಕಾರಿ ಎದುರೂ, ಅಮಂಡಾ ಅನಿಸಿಮೋವಾ 6–3, 6–2ರಲ್ಲಿ ಆರ್ಯನಾ ಸಬಲೆಂಕಾ ವಿರುದ್ಧವೂ, ಅನಸ್ತೇಸಿಯಾ ಪವಲ್ಯೂಚೆಂಕೋವಾ 6–0, 6–3ರಲ್ಲಿ ಅಲಿಯಾಕ್ಸಾಂಡ್ರ ಸಸಾನೊವಿಚ್‌ ಮೇಲೂ, ಸ್ಲೋನ್‌ ಸ್ಟೀಫನ್ಸ್‌ 7–6, 7–6ರಲ್ಲಿ ಪೆಟ್ರಾ ಮಾರ್ಟಿಕ್‌ ಎದುರೂ, ಪೆಟ್ರಾ ಕ್ವಿಟೋವಾ 6–1, 6–4ರಲ್ಲಿ ಬೆಲಿಂದಾ ಬೆನ್‌ಸಿಕ್‌ ಮೇಲೂ, ಡೇನಿಯೆಲ್‌ ಕಾಲಿನ್ಸ್‌ 6–3, 6–2ರಲ್ಲಿ ಕ್ಯಾರೋಲಿನಾ ಗಾರ್ಸಿಯಾ ವಿರುದ್ಧವೂ ವಿಜಯಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT