ಯಾರಾಗುವರು ಈ ಬಾರಿಯ ಚಾಂಪಿಯನ್

ಬುಧವಾರ, ಜೂನ್ 19, 2019
26 °C

ಯಾರಾಗುವರು ಈ ಬಾರಿಯ ಚಾಂಪಿಯನ್

Published:
Updated:
Prajavani

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಗೆ ಶತಮಾನಗಳ ಇತಿಹಾಸವಿದೆ. 128 ವರ್ಷಗಳ ಹಿಂದೆ (1891) ಶುರುವಾದ ಈ ಟೂರ್ನಿ ಭವ್ಯ ಪರಂಪರೆಯನ್ನೂ ಹೊಂದಿದೆ. ಕೆಂಪು ಮಣ್ಣಿನ ಅಂಗಣದಲ್ಲಿ (ಕ್ಲೇ ಕೋರ್ಟ್‌) ನಡೆಯುವ ಏಕೈಕ ಗ್ರ್ಯಾನ್‌ಸ್ಲಾಮ್‌ ಎಂಬ ಹಿರಿಮೆ ಇದರದ್ದಾಗಿದೆ.

ಶುರುವಿನಲ್ಲಿ ಫ್ರೆಂಚ್‌ ಕ್ಲಬ್‌ನ ಸದಸ್ಯರಿಗಷ್ಟೇ ಸೀಮಿತವಾಗಿದ್ದ ಈ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದ ಹಿರಿಮೆ ಪ್ಯಾರಿಸ್‌ನ ಬ್ರಿಟನ್‌ ಎಚ್‌.ಬ್ರಿಗ್ಸ್‌ ಅವರದ್ದು.

1987ರಲ್ಲಿ ಮೊದಲ ಸಲ ಮಹಿಳಾ ಸಿಂಗಲ್ಸ್‌ ವಿಭಾಗದ ಪಂದ್ಯಗಳು ಆಯೋಜನೆಯಾಗಿದ್ದವು. ನಂತರ ಮಿಶ್ರ ಡಬಲ್ಸ್‌ (1902) ಮತ್ತು ಮಹಿಳಾ ಡಬಲ್ಸ್‌ (1907) ವಿಭಾಗಗಳಲ್ಲಿ ಪಂದ್ಯಗಳು ನಡೆದಿದ್ದವು. 1925ರಲ್ಲಿ ಟೂರ್ನಿಗೆ ವೃತ್ತಿಪರತೆಯ ಸ್ಪರ್ಶ ನೀಡಲಾಯಿತು. ಘಟಾನುಘಟಿ ಆಟಗಾರರು ಅಖಾಡಕ್ಕೆ ಇಳಿದ ಬಳಿಕ ‘ರೋಲ್ಯಾಂಡ್‌ ಗ್ಯಾರೋಸ್‌’ನ ರಂಗು ಹೆಚ್ಚಿತು. 122 ಆವೃತ್ತಿಗಳು ಯಶಸ್ವಿಯಾಗಿ ನಡೆದಿದ್ದು ಈಗ ಪ್ಯಾರಿಸ್‌ನಲ್ಲಿ ಮತ್ತೆ ಟೆನಿಸ್‌ ಹಬ್ಬದ ಸಡಗರ ಶುರುವಾಗಿದೆ.

ಈ ಬಾರಿ ‘ಕ್ಲೇ ಕಿಂಗ್‌’ ಯಾರಾಗಲಿದ್ದಾರೆ ಎಂಬ ಚರ್ಚೆಯೂ ಜೋರಾಗಿದೆ. ಸ್ಪೇನ್‌ನ ರಫೆಲ್‌ ನಡಾಲ್‌ ಟೂರ್ನಿಯ ಯಶಸ್ವಿ ಆಟಗಾರ ಎನಿಸಿದ್ದಾರೆ. ಸರ್ಬಿಯಾದ ನೊವಾಕ್‌ ಜೊಕೊವಿಚ್‌, ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಅವರತ್ತಲೂ ಅಭಿಮಾನಿಗಳ ಚಿತ್ತ ನೆಟ್ಟಿದೆ.

ಹಾಲಿ ಚಾಂಪಿಯನ್‌ ಸಿಮೊನಾ ಹಲೆಪ್‌, ಅಮೆರಿಕದ ಸಹೋದರಿಯರಾದ ಸೆರೆನಾ ಮತ್ತು ವೀನಸ್‌ ವಿಲಿಯಮ್ಸ್‌, ಗಾರ್ಬೈನ್‌ ಮುಗುರುಜಾ ಹೀಗೆ ಅನೇಕ ತಾರೆಯರೂ ಪ್ರಜ್ವಲಿಸಲು ಸಜ್ಜಾಗಿದ್ದಾರೆ.  

***

ಅತಿ ಹೆಚ್ಚು ಪ್ರಶಸ್ತಿ ಗೆದ್ದವರು

ಮ್ಯಾಕ್ಸ್‌ ಡೆಕುಗಿಸ್‌ (1925ರ ಪೂರ್ವದಲ್ಲಿ)

ಒಟ್ಟು ಪ್ರಶಸ್ತಿ: 29‌

ಪುರುಷರ ಸಿಂಗಲ್ಸ್‌: 8

ಡಬಲ್ಸ್‌: 14

ಮಿಶ್ರ ಡಬಲ್ಸ್‌: 7

**

ಸುಜಾನೆ ಲೆಂಗ್ಲೆನ್‌ (1967ರ ವರೆಗೆ)

ಒಟ್ಟು ಪ್ರಶಸ್ತಿ: 15

ಮಹಿಳಾ ಸಿಂಗಲ್ಸ್‌: 6

ಡಬಲ್ಸ್‌: 2

ಮಿಶ್ರ ಡಬಲ್ಸ್‌: 7

***

ಮಾರ್ಟಿನ ನವ್ರಟಿಲೋವಾ (1967ರ ನಂತರ)

ಒಟ್ಟು ಪ್ರಶಸ್ತಿ: 11

ಮಹಿಳಾ ಸಿಂಗಲ್ಸ್: 2

ಡಬಲ್ಸ್‌: 7

ಮಿಶ್ರ ಡಬಲ್ಸ್‌: 2

*******

ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲಾಗದ ಪ್ರಮುಖರು

ಪೀಟ್‌ ಸಾಂಪ್ರಸ್‌, ಜಾನ್‌ ಮೆಕೆನ್ರೊ, ಫ್ರಾಂಕ್‌ ಸೆಡ್ಜ್‌ಮನ್‌, ಜಾನ್‌ ನ್ಯೂಕಾಂಬ್‌, ವೀನಸ್‌ ವಿಲಿಯಮ್ಸ್‌, ಸ್ಟೆಫಾನ್‌ ಎಡ್‌ಬರ್ಗ್‌, ಬೊರಿಸ್‌ ಬೆಕರ್‌, ಜಿಮ್ಮಿ ಕಾನರ್ಸ್‌, ಲೂಯಿಸ್‌ ಬ್ರೊಗ್‌ ಮತ್ತು ವರ್ಜಿನಿಯಾ ವೇಡ್‌.

ರಫೆಲ್‌ ನಡಾಲ್‌

‘ಕಿಂಗ್‌ ಆಫ್‌ ಕ್ಲೇ’ ಎಂದೇ ಪ್ರಸಿದ್ಧರಾಗಿರುವ ನಡಾಲ್‌, ಫ್ರೆಂಚ್‌ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದ ಹಿರಿಮೆ ಹೊಂದಿದ್ದಾರೆ. ಈಗಾಗಲೇ 11 ಪ್ರಶಸ್ತಿಗಳನ್ನು ಜಯಿಸಿರುವ ಅವರು ಮತ್ತೊಂದು ಕಿರೀಟದತ್ತ ಚಿತ್ತ ನೆಟ್ಟಿದ್ದಾರೆ. ಫ್ರೆಂಚ್‌ ಓಪನ್‌ನಲ್ಲಿ ಸತತ ಐದು ಪ್ರಶಸ್ತಿ ಗೆದ್ದ ದಾಖಲೆಯೂ ನಡಾಲ್‌ ಹೆಸರಿನಲ್ಲಿದೆ. ಸದ್ಯ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಫ್ರೆಂಚ್‌ ಓಪನ್‌ನಲ್ಲಿ ನಡಾಲ್‌ ಪ್ರಶಸ್ತಿ ಗೆದ್ದ ವರ್ಷ: 2005, 2006, 2007, 2008, 2010, 2011, 2012, 2013, 2014, 2017, 2018.

***

ರೋಜರ್‌ ಫೆಡರರ್‌

21ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಫೆಡರರ್‌, ಫ್ರೆಂಚ್‌ ಓಪನ್‌ನಲ್ಲಿ ಚಾಂಪಿಯನ್‌ ಆಗುವತ್ತ ಚಿತ್ತ ನೆಟ್ಟಿದ್ದಾರೆ.

37ರ ‘ಚಿರ ಯುವಕ’ ಫೆಡರರ್‌, ಈ ವರ್ಷ ದುಬೈ ಟೆನಿಸ್‌ ಚಾಂಪಿಯನ್‌ಷಿಪ್‌ ಮತ್ತು ಮಿಯಾಮಿ ಓಪನ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಮಾಸ್ಟರ್ಸ್‌ ಟೂರ್ನಿಯಲ್ಲಿ 101 ಪ್ರಶಸ್ತಿಗಳನ್ನು ಗೆದ್ದ ದಾಖಲೆ ನಿರ್ಮಿಸಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಅವರು ಹೋದ ವಾರ ನಡೆದಿದ್ದ ಇಟಾಲಿಯನ್‌ ಓಪನ್‌ನಲ್ಲೂ ಅವರು ಮಿಂಚಿದ್ದರು.

***

ಡಾಮಿನಿಕ್‌ ಥೀಮ್‌

ಆಸ್ಟ್ರಿಯಾದ ಯುವ ಆಟಗಾರ ಡಾಮಿನ್‌ ಥೀಮ್‌ ಕೂಡಾ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ.

ಹೋದ ವರ್ಷ ರನ್ನರ್‌ ಅಪ್‌ ಸಾಧನೆ ಮಾಡಿ ಗಮನ ಸೆಳೆದಿದ್ದ ಅವರು ಹಿಂದಿನ ಹಲವು ಟೂರ್ನಿಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಈ ವರ್ಷ ಇಂಡಿಯಾನ ವೆಲ್ಸ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ ಅವರು ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿದ್ದಾರೆ.

***

ಅಲೆಕ್ಸಾಂಡರ್‌ ಜ್ವೆರೆವ್‌

ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌, ಟೆನಿಸ್‌ ಲೋಕದ ಮುಂದಿನ ಸೂಪರ್‌ ಸ್ಟಾರ್‌ ಎಂದೇ ಬಿಂಬಿತವಾಗಿದ್ದಾರೆ.

ಹೋದ ವರ್ಷ ಲಂಡನ್‌ನಲ್ಲಿ ನಡೆದಿದ್ದ ಎಟಿಪಿ ಟೂರ್‌ ಫೈನಲ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದ ಜ್ವೆರೆವ್‌, ಹೋದ ವರ್ಷ ಫ್ರೆಂಚ್‌ ಓ‍ಪನ್‌ನಲ್ಲಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ್ದರು. ಪ್ರಸ್ತುತ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅವರು ಐದನೇ ಸ್ಥಾನದಲ್ಲಿದ್ದಾರೆ. ಈ ವರ್ಷ ನಡೆದಿದ್ದ ಮೆಕ್ಸಿನ್‌ ಓಪನ್‌ನಲ್ಲಿ ರನ್ನರ್‌ ಅಪ್‌ ಆಗಿದ್ದ ಅವರು ಮ್ಯಾಡ್ರಿಡ್‌ ಓಪನ್‌ನಲ್ಲಿ ಎಂಟರ ಘಟ್ಟ ಪ್ರವೇಶಿಸಿದ್ದರು.

****

ನೊವಾಕ್‌ ಜೊಕೊವಿಚ್‌

ನೊವಾಕ್‌ ಜೊಕೊವಿಚ್‌ ಅವರು ವಿಶ್ವದ ಅಗ್ರಮಾನ್ಯ ಆಟಗಾರ. 2016ರ ಫ್ರೆಂಚ್‌ ಓಪನ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದ ‘ಜೊಕೊ’, ರಫೆಲ್ ನಡಾಲ್‌ ಅವರ ಪ್ರಶಸ್ತಿ ಗೆಲುವಿನ ಓಟಕ್ಕೆ ಈ ಸಲ ತಡೆಯೊಡ್ಡಬಲ್ಲ ಸಮರ್ಥ ಆಟಗಾರ ಎನಿಸಿದ್ದಾರೆ.

ಈ ವರ್ಷ ಆಸ್ಟ್ರೇಲಿಯಾ ಓಪನ್‌ನಲ್ಲಿ ಪ್ರಶಸ್ತಿ ಗೆದ್ದು ದಾಖಲೆ ನಿರ್ಮಿಸಿದ್ದ ನೊವಾಕ್‌, ವಿಶ್ವ ರ‍್ಯಾಂಕಿಂಗ್‌ನಲ್ಲಿ ಸತತ 250 ವಾರಗಳ ಕಾಲ ಅಗ್ರಸ್ಥಾನ ಕಾಪಾಡಿಕೊಂಡ ಹಿರಿಮೆಯನ್ನೂ ಹೊಂದಿದ್ದಾರೆ.

******

ಸಿಮೊನಾ ಹಲೆಪ್‌

ರುಮೇನಿಯಾದ ಆಟಗಾರ್ತಿ ಸಿಮೊನಾ ಹಲೆಪ್‌, ಫ್ರೆಂಚ್‌ ಓಪನ್‌ನಲ್ಲಿ ಮೂರು ಸಲ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದ್ದಾರೆ. ಹೋದ ವರ್ಷ ಪ್ರಶಸ್ತಿ ಗೆದ್ದಿದ್ದ ಅವರು ಈ ಸಲವೂ ಟ್ರೋಫಿಗೆ ಮುತ್ತಿಕ್ಕುವ ಕನಸಿನಲ್ಲಿದ್ದಾರೆ.

‘ಕ್ಲೇ ಕೋರ್ಟ್‌’ನಲ್ಲಿ ಈಗಾಗಲೇ ಹಲವು ಪ್ರಶಸ್ತಿಗಳನ್ನು ಜಯಿಸಿರುವ ಹಲೆಪ್‌, ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.

**

ಪೆಟ್ರಾ ಕ್ವಿಟೋವಾ

ಜೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ ಮೇಲೂ ಎಲ್ಲರ ಕಣ್ಣು ನೆಟ್ಟಿದೆ.

ವಿಂಬಲ್ಡನ್‌ನಲ್ಲಿ ಎರಡು ಪ್ರಶಸ್ತಿಗಳನ್ನು ಜಯಿಸಿದ ಹಿರಿಮೆ ಹೊಂದಿರುವ ಪೆಟ್ರಾ, ಈ ಸಲದ ಆಸ್ಟ್ರೇಲಿಯಾ ಓಪನ್‌ನಲ್ಲಿ ಫೈನಲ್‌ ತಲುಪಿದ್ದರು. ಮ್ಯಾಡ್ರಿಡ್‌ ಓಪನ್‌ನಲ್ಲಿ ಮೂರು ‍ಪ್ರಶಸ್ತಿ ಗೆದ್ದ ಹಿರಿಮೆಯೂ ಅವರದ್ದಾಗಿದೆ.

**

ನವೊಮಿ ಒಸಾಕ

ಆಸ್ಟ್ರೇಲಿಯಾ ಓಪನ್‌ನಲ್ಲಿ ಪ್ರಶಸ್ತಿ ಗೆದ್ದು ಟೆನಿಸ್‌ ಲೋಕದ ಗಮನ ಸೆಳೆದಿದ್ದ ನವೊಮಿ ಒಸಾಕ ಕೂಡಾ ಫ್ರೆಂಚ್‌ ಓಪನ್‌ ‍ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ.

21 ವರ್ಷದ ಈ ಆಟಗಾರ್ತಿಯು ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !