ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್‌ | ಇಗಾ ಶ್ವಾಂಟೆಕ್‌ಗೆ ಆಘಾತ; ಸೋಲಿನೊಡನೆ ಅಗ್ರ ಪಟ್ಟಕ್ಕೆ ಚ್ಯುತಿ

Published 4 ಸೆಪ್ಟೆಂಬರ್ 2023, 20:15 IST
Last Updated 4 ಸೆಪ್ಟೆಂಬರ್ 2023, 20:15 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಹಾಲಿ ಚಾಂಪಿಯನ್ ಪಟ್ಟ ಹಾಗೂ ಕಳೆದ ಆರು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಮೂರರಲ್ಲಿ ಗೆದ್ದು ಇಲ್ಲಿಗೆ ಬಂದಿದ್ದ ಇಗಾ ಶ್ವಾಂಟೆಕ್ ಅವರಿಗೆ ಇದ್ಯಾವುದೂ ನೆರವಿಗೆ ಬರಲಿಲ್ಲ. ಆರ್ಥರ್‌ ಆ್ಯಷ್‌ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಅಮೆರಿಕ ಓಪನ್‌ ಮಹಿಳಾ ಸಿಂಗಲ್ಸ್‌ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಶ್ವಾಂಟೆಕ್‌, 20ನೇ ಶ್ರೇಯಾಂಕದ ಯೆಲೆನಾ ಒಸ್ಟಪೆಂಕೊ ಅವರಿಗೆ ಮಣಿದರು. ಜೊತೆಗೆ ಅಗ್ರಕ್ರಮಾಂಕದ ಆಟಗಾರ್ತಿಯ ಪಟ್ಟವನ್ನೂ ಕಳೆದುಕೊಂಡರು.

2017ರ ಫ್ರೆಂಚ್‌ ಓಪನ್ ಚಾಂಪಿಯನ್‌ ಒಸ್ಟಪೆಂಕೊ 3–6, 6–3, 6–1 ರಿಂದ ಅಗ್ರ ಶ್ರೇಯಾಂಕದ ಶ್ವಾಂಟೆಕ್ ಅವರನ್ನು ಸೋಲಿಸಿದರು. ಲಾತ್ವಿಯಾ ಆಟಗಾರ್ತಿಯ ಶಕ್ತಿಶಾಲಿ ಆಟದ ಶೈಲಿಯೆದುರು ಶ್ವಾಂಟೆಕ್‌ ಅವರ ಲಯ ಪೂರ್ಣವಾಗಿ ತಪ್ಪಿಹೋಯಿತು.

ಈ ಸೋಲಿನೊಡನೆ 22 ವರ್ಷದ ಶ್ವಾಂಟೆಕ್‌ ಅವರ 75 ವಾರಗಳ ಅಗ್ರಪಟ್ಟವೂ ಅಂತ್ಯಗೊಂಡಿತು. ಮುಂದಿನ ವಾರ ಪ್ರಕಟವಾಗಲಿರುವ ರ‍್ಯಾಂಕಿಂಗ್‌ನಲ್ಲಿ ಬೆಲಾರಸ್‌ನ ಅರಿನಾ ಸಬಲೆಂಕಾ ಅವರು ಮೊದಲ ಬಾರಿ ಅಗ್ರಸ್ಥಾನಕ್ಕೆ ಏರಲಿದ್ದಾರೆ.

ಈ ಸೋಲು ಪೋಲೆಂಡ್‌ ಆಟಗಾರ್ತಿಯನ್ನು ದಿಗಿಲುಗೊಳಿಸಿದ್ದು ಅವರ ಮಾತಿನಲ್ಲಿ ವ್ಯಕ್ತವಾಯಿತು. ‘ನನ್ನ ಆಟದ ಮಟ್ಟ ಇಷ್ಟೊಂದು ಕುಸಿದಿದ್ದು ಆಶ್ಚರ್ಯ ಮೂಡಿಸಿತು. ಆರಂಭದಲ್ಲಿ ಆಟ ಕಳಪೆಯಾಗಿದ್ದರೆ, ನಂತರ ಹೊಂದಿಕೊಂಡು ಸುಧಾರಿಸಿಕೊಳ್ಳುತ್ತಿದ್ದೆ ಅಥವಾ ಪರಿಹಾರ ಕಂಡುಕೊಳ್ಳುತ್ತಿದ್ದೆ. ಆದರೆ ಇಂದಿನ ಆಟ ಸಂಪೂರ್ಣ ಉಲ್ಟಾ ಆಗಿತ್ತು’ ಎಂದ ಶ್ವಾಂಟೆಕ್‌, ‘ನನ್ನ ಆಟ ಏಕೆ ಹೀಗಾಯಿತೆಂದು ತಿಳಿಯಲೇ ಇಲ್ಲ. ನನಗೆ ಹಿಡಿತವೇ ಸಿಗಲಿಲ್ಲ’ ಎಂದು ಅಲವತ್ತುಕೊಂಡರು.

26 ವರ್ಷದ ಒಸ್ಟಪೆಂಕೊ ಹೇಳಿಕೆ ಭಿನ್ನವಾಗಿತ್ತು. ‘ಆಕೆ (ಶ್ವಾಂಟೆಕ್‌) ಪ್ರಬಲ ಹೊಡೆತಗಳ ಆಟಗಾರ್ತಿಯರೆದುರು ಆಡಲು ಇಷ್ಟಪಡುವುದಿಲ್ಲ. ಅವರು ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ನಾನು ವೇಗವಾಗಿ, ಆಕ್ರಮಣಕಾರಿಯಾಗಿ ಮತ್ತು ಪ್ರಬಲ ಹೊಡೆತಗಳನ್ನು ಅಟ್ಟುವಾಗ ಅವರು ಪರದಾಡುತ್ತಿದ್ದರು’ ಎಂದು ವಿಶ್ಲೇಷಿಸಿದರು. ಅವರ ಆಟದಲ್ಲಿ 31 ಗೆಲುವಿನ (ವಿನ್ನರ್) ಹೊಡೆತಗಳಿದ್ದರೆ, ಶ್ವಾಂಟೆಕ್ ಆಟದಲ್ಲಿ ಇದ್ದುದು 18 ಮಾತ್ರ.

20ನೇ ಶ್ರೇಯಾಂಕದ ಒಸ್ಟಪೆಂಕೊ ಕ್ವಾರ್ಟರ್‌ ಫೈನಲ್‌ನಲ್ಲಿ 19 ವರ್ಷದ ಕೊಕೊ ಗಾಫ್‌ ಅವರನ್ನು ಎದುರಿಸಲಿದ್ದಾರೆ. ಆತಿಥೇಯ ಅಮೆರಿಕದ ಗಾಫ್‌ 6–3, 3–6, 6–1 ರಿಂದ ಕರೋಲಿನ್‌ ವೊಜ್ನಿಯಾಕಿ ಅವರ ಓಟಕ್ಕೆ ತಡೆಹಾಕಿದರು.

ಎಂಟರ ಘಟ್ಟಕ್ಕೆ ಅಮೆರಿಕದ ಮೂವರು: 2005ರ ನಂತರ ಮೊದಲ ಬಾರಿ ಅಮೆರಿಕದ ಮೂವರು ಆಟಗಾರರು ಪುರುಷರ ಸಿಂಗಲ್ಸ್‌ನಲ್ಲಿ ಅಂತಿಮ ಎಂಟರ ಘಟ್ಟದಲ್ಲಿ ಸ್ಥಾನ ಪಡೆದಿದ್ದಾರೆ. ಟೇಲರ್‌ ಫ್ರಿಟ್ಜ್‌, ಫ್ರಾನ್ಸೆಸ್‌ ಟಿಫೊ ಮತ್ತು ಬೆನ್ ಶೆಲ್ಟನ್ ಅವರು ನಾಲ್ಕನೇ ಸುತ್ತಿನ ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ. ಇವರಲ್ಲಿ ಒಬ್ಬರು ಸೆಮಿಫೈನಲ್‌ ತಲುಪುವುದೂ ಖಚಿತವಾಗಿದೆ.

ಟಿಫೊ, ವೆಲ್ಡ್‌ಕಾರ್ಡ್‌ ಪಡೆದಿದ್ದ ಆಸ್ಟ್ರೇಲಿಯಾದ ರಿಂಕಿ ಹಿಜಿಕಾಟಾ ಅವರನ್ನು 6–4, 6–1, 6–4 ರಿಂದ ಹಿಮ್ಮೆಟ್ಟಿಸಿದರು. ಅವರ ಕ್ವಾರ್ಟರ್‌ಫೈನಲ್ ಎದುರಾಳಿ ಶೆಲ್ಟನ್‌ 6–4, 6–3, 4–6, 6–4 ರಿಂದ ಸ್ವದೇಶದ ಟಾಮಿ ಪಾಲ್ ಅವರಿಗೆ ಸೋಲುಣಿಸಿದರು.

ಜೊಕೊ ಮುನ್ನಡೆ: ಇಲ್ಲಿ ನಾಲ್ಕನೇ ಬಾರಿ ಪ್ರಶಸ್ತಿಗೆ ಗೆಲ್ಲುವ ಯತ್ನದಲ್ಲಿರುವ ಸರ್ಬಿಯಾ ಆಟಗಾರ ನೊವಾಕ್ ಜೊಕೊವಿಚ್ 6–2, 7–5, 6–4 ರಿಂದ ಬೊರ್ನಾ ಗೋಜೊ ಅವರಿಗೆ ಸೋಲುಣಿಸಿದರು. ಜೊಕೊ ಇಲ್ಲಿ ಪ್ರಶಸ್ತಿ ಗೆದ್ದಲ್ಲಿ ಆಸ್ಟ್ರೇಲಿಯಾದ ಆಟಗಾರ್ತಿ ಮಾರ್ಗರೇಟ್ ಕೋರ್ಟ್‌ ಅವರ 24 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ದಾಖಲೆ ಸರಿಟ್ಟಿದಂತಾಗಲಿದೆ.

ಕ್ವಾರ್ಟರ್‌ ಫೈನಲ್‌ಗೆ ಬೋಪಣ್ಣ–ಎಬ್ಡೆನ್‌

ಆರನೇ ಶ್ರೇಯಾಂಕದ ಭಾರತ– ಆಸ್ಟ್ರೇಲಿಯಾ ಜೋಡಿಯಾದ ರೋಹನ್‌ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್‌ ಅವರು ಪುರುಷರ ಡಬಲ್ಸ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಇವರಿಬ್ಬರು 6–4, 6–7 (5), 7–6 (10–6) ರಿಂದ ಬ್ರಿಟನ್‌ನ ಜೂಲಿಯನ್ ಕ್ಯಾಶ್– ಹೆನ್ರಿ ಪ್ಯಾಟನ್ ಅವರನ್ನು ಸೋಲಿಸಿದರು. ಮೂರು ಸೆಟ್‌ಗಳ ಈ ಪಂದ್ಯ 2 ಗಂಟೆ 22 ನಿಮಿಷಗಳ ಕಾಲ ನಡೆಯಿತು.

ಆದರೆ ಮಿಕ್ಸೆಡ್ ಡಬಲ್ಸ್‌ನಲ್ಲಿ ಬೋಪಣ್ಣ ಸವಾಲು ಅಂತ್ಯಗೊಂಡಿತು. ಬೋಪಣ್ಣ– ಅಲ್ಡಿಲಾ ಸಟ್ಜಿಯಾಡಿ ಜೋಡಿ ಎರಡನೇ ಸುತ್ತಿನಲ್ಲಿ 2–6, 5–7 ರಿಂದ ಅಮೆರಿಕದ ಬೆನ್‌ ಶೆಲ್ಡನ್‌ – ಟೇಲರ್‌ ಟ್ರಾನ್ಸೆಂಡ್‌ ಜೋಡಿಯೆದರು ಸೋಲನ್ನು ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT