ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈ ಚತುರನ ಟೆನಿಸ್‌ ‘ಪ್ರಜ್ಞೆ’

Last Updated 18 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಹೋದ ವಾರ ಉದ್ಯಾನನಗರಿಯಲ್ಲಿ ನಡೆದ ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿನ ಪಂದ್ಯ ಅಭಿಮಾನಿಗಳನ್ನು ಪುಳಕಿತಗೊಳಿಸಿತ್ತು.

ಇನ್ನೇನು ಸೋತೆ ಬಿಟ್ಟೆ ಎನ್ನುವ ಸಂದಿಗ್ಧತೆಯಲ್ಲೂ ಕಿಂಚಿತ್ತೂ ವಿಶ್ವಾಸ ಕಳೆದುಕೊಳ್ಳದೆ ಕೆಚ್ಚೆದೆಯಿಂದ ಹೋರಾಡಿದ್ದ ಚೆನ್ನೈನ ಟೆನಿಸ್‌ ಚತುರ ಪ್ರಜ್ಞೇಶ್‌ ಗುಣೇಶ್ವರನ್‌,ಜರ್ಮನಿಯ ಸೆಬಾಸ್ಟಿಯನ್‌ ಫ್ಯಾನ್ಸೆಲೋವ್‌ ಎದುರು ಗೆದ್ದು ಬೀಗಿದ್ದರು. ಆಪ್ತ ವಲಯದಲ್ಲಿ ‘ಕಮ್‌ಬ್ಯಾಕ್‌ ಕಿಂಗ್‌’ ಎಂದೇ ಗುರುತಿಸಿಕೊಂಡಿರುವ ಪ್ರಜ್ಞೇಶ್‌, ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡು ಸಂಭ್ರಮಿಸಿದ್ದರು.

ಇದರೊಂದಿಗೆ ಎಟಿಪಿ ಚಾಲೆಂಜರ್‌ ಟೂರ್ನಿಯಲ್ಲಿ ಎರಡನೇ ಪ್ರಶಸ್ತಿ ಜಯಿಸಿದ ಹಿರಿಮೆಗೂ ಭಾಜನರಾಗಿದ್ದರು. ಐಟಿಎಫ್‌ ಟೂರ್ನಿಯಲ್ಲಿ ಎಂಟು ಟ್ರೋಫಿಗಳನ್ನು ಗೆದ್ದು ಸಾಮರ್ಥ್ಯವನ್ನು ಜಗಜ್ಜಾಹೀರುಗೊಳಿಸಿರುವ ಪ್ರಜ್ಞೇಶ್‌, ಈ ವರ್ಷ ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ದಿದ್ದರು. ಈ ಸಾಧನೆ ಮಾಡಿದ ಭಾರತದ ಆರನೇ ಆಟಗಾರ ಎಂಬ ಹಿರಿಮೆ ಹೊಂದಿರುವ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

ಈ ವರ್ಷದ ಏಪ್ರಿಲ್‌ನಲ್ಲಿ ನಡೆದಿದ್ದ ಡೇವಿಸ್ ಕಪ್‌ ವಿಶ್ವ ಗುಂಪಿನ ‘ಪ್ಲೇ ಆಫ್‌’ ಪಂದ್ಯದಲ್ಲಿ ಭಾರತ ತಂಡ ಚೀನಾ ಎದುರು ಗೆಲ್ಲುವಲ್ಲಿ ನಿಮ್ಮ ಪಾತ್ರ ಮಹತ್ವದ್ದಾಗಿತ್ತು. ಆ ಸಾಧನೆಯ ಬಗ್ಗೆ ಹೇಳಿ?

ಯೂಕಿ ಭಾಂಬ್ರಿ ಗಾಯಗೊಂಡಿದ್ದ ಕಾರಣ ಚೀನಾ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ದೃಢವಾಗಿ ನಿಶ್ಚಯಿಸಿದ್ದೆ. ಪಂದ್ಯ 2–2ರಲ್ಲಿ ಸಮಬಲವಾಗಿತ್ತು. ನಿರ್ಣಾಯಕ ಎನಿಸಿದ್ದ ಸಿಂಗಲ್ಸ್‌ ಹೋರಾಟದಲ್ಲಿ ಯಿಬಿಂಗ್‌ ವು ಅವರನ್ನು ಮಣಿಸುವ ಸವಾಲು ಎದುರಿಗಿತ್ತು.

ಅಪಾರ ನಿರೀಕ್ಷೆಗಳೊಂದಿಗೆ ಅಂಗಳಕ್ಕಿಳಿದಿದ್ದರಿಂದ ಸಹಜವಾಗಿಯೇ ಒತ್ತಡಕ್ಕೊಳಗಾಗಿದ್ದೆ. ಹೀಗಿದ್ದರೂ ಯಾವ ಹಂತದಲ್ಲೂ ಎದೆಗುಂದದೆ ದಿಟ್ಟ ಆಟ ಆಡಿದೆ. ಹೀಗಾಗಿ ನೇರ ಸೆಟ್‌ಗಳಿಂದ ಎದುರಾಳಿಯನ್ನು ಸೋಲಿಸಲು ಸಾಧ್ಯವಾಯಿತು. ಪಂದ್ಯದ ಬಳಿಕ ಲಿಯಾಂಡರ್‌ ಪೇಸ್‌, ರೋಹನ್‌ ಬೋಪಣ್ಣ ಸೇರಿದಂತೆ ತಂಡದಲ್ಲಿದ್ದ ಇತರ ಆಟಗಾರರು ಮತ್ತು ಆಟವಾಡದ ನಾಯಕ ಮಹೇಶ್‌ ಭೂಪತಿ ಅವರು ಓಡಿಬಂದು ನನ್ನನ್ನು ಎತ್ತಿಕೊಂಡು ಖುಷಿ ಪಟ್ಟಿದ್ದರು. ಅದು ಜೀವನದ ಅವಿಸ್ಮರಣೀಯ ಕ್ಷಣಗಳಲ್ಲೊಂದು.

ಈಗಾಗಲೇ ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳ ಅರ್ಹತಾ ಹಂತದಲ್ಲಿ ಆಡಿದ್ದೀರಿ. ಮುಂದಿನ ಗುರಿ?

ಗ್ರ್ಯಾನ್‌ಸ್ಲಾನ್‌ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಬೇಕೆಂಬುದು ಜೀವನದ ಬಹುಮುಖ್ಯ ಗುರಿ. ಆ ಕನಸಿನ ಬೆನ್ನೇರಿ ಹೊರಟಿದ್ದೇನೆ. ಹೋದ ವರ್ಷ ಅಮೆರಿಕ ಓಪನ್‌ ಟೂರ್ನಿಯ ಅರ್ಹತಾ ಹಂತದ ಮೊದಲ ಸುತ್ತಿನಲ್ಲಿ ಸೋತಿದ್ದೆ. ಈ ವರ್ಷ ನಡೆದಿದ್ದ ವಿಂಬಲ್ಡನ್‌ ಟೂರ್ನಿಯಲ್ಲೂ ಮೊದಲ ಸುತ್ತಿನಲ್ಲಿ ಪರಾಭವಗೊಂಡಿದ್ದೆ. ಹೀಗಿದ್ದರೂ ಎದೆಗುಂದಲಿಲ್ಲ. ಫ್ರೆಂಚ್‌ ಓಪನ್‌ ಟೂರ್ನಿಯ ಅರ್ಹತಾ ಹಂತದಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದರಿಂದ ಮನೋಬಲ ಹೆಚ್ಚಿದೆ. ಮುಂದಿನ ವರ್ಷ ಮುಖ್ಯ ಸುತ್ತಿಗೆ ಅರ್ಹತೆ ಗಳಿಸಬೇಕೆಂಬ ಗುರಿ ಇಟ್ಟುಕೊಂಡಿದ್ದು ಆ ನಿಟ್ಟಿನಲ್ಲಿ ಕಠಿಣ ತಾಲೀಮು ನಡೆಸುತ್ತಿದ್ದೇನೆ.

ಜರ್ಮನಿಯಲ್ಲಿ ನಡೆದಿದ್ದ ಮರ್ಸಿಡೀಸ್‌ ಕಪ್‌ ಟೂರ್ನಿಯಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 23ನೇ ಸ್ಥಾನದಲ್ಲಿದ್ದ ಡೆನಿಶ್‌ ಶಪೊವಲೋವ್‌ ಅವರನ್ನು ಮಣಿಸಲು ಸಾಧ್ಯವಾಗಿದ್ದು ಹೇಗೆ?

ಎಟಿಪಿ ವಿಶ್ವ ಟೂರ್‌ನ ಮುಖ್ಯ ಸುತ್ತಿನಲ್ಲಿ ಆಡಿದ ಮೊದಲ ಪಂದ್ಯ ಅದಾಗಿತ್ತು. ಶಪೊವಲೋವ್‌ ಬಲಿಷ್ಠ ಆಟಗಾರ ಎಂಬ ಅರಿವು ಇತ್ತು. ಹೀಗಿದ್ದರೂ ಆ ಹೋರಾಟದಲ್ಲಿ ಯಾವುದೇ ಒತ್ತಡ ಇಲ್ಲದೆಯೇ ಆಡಿದ್ದೆ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡಿದ್ದರಿಂದ ಎದುರಾಳಿಯನ್ನು ಕಟ್ಟಿಹಾಕಲು ಸಾಧ್ಯವಾಗಿತ್ತು. ಆ ಗೆಲುವು ಸ್ಮರಣೀಯವಾದುದು.

ಈ ವರ್ಷ ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ್ದೀರಿ. ಇದರ ಬಗ್ಗೆ ಹೇಳಿ?

ಏಷ್ಯನ್‌ ಕ್ರೀಡಾಕೂಟದಲ್ಲಿ ಆಡಿದ್ದು ವಿಶೇಷ ಅನುಭವ. ಅಲ್ಲಿ ಏಷ್ಯಾದ ಬಲಿಷ್ಠ ಆಟಗಾರರು ಭಾಗವಹಿಸುತ್ತಾರೆ. ಅವರ ಸವಾಲುಗಳನ್ನು ಮೀರಿ ದೇಶಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದೇನೆ. ಈ ಸಾಧನೆ ಹೆಮ್ಮೆಯಿಂದ ಬೀಗುವಂತೆ ಮಾಡಿದೆ.

ಈ ಋತು ನಿಮ್ಮ ಪಾಲಿಗೆ ಹೆಚ್ಚು ಆಶಾದಾಯಕವಾಗಿತ್ತಲ್ಲವೇ?

ಹೌದು. ಈ ವರ್ಷ ಆಡಿದ ಎಲ್ಲಾ ಟೂರ್ನಿಗಳಲ್ಲೂ ಗುಣಮಟ್ಟದ ಸಾಮರ್ಥ್ಯ ತೋರಿದ್ದೇನೆ. ಕೆಲ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದೇನೆ. ಯಶಸ್ಸಿನ ಈ ಪಯಣವನ್ನು ಹೀಗೆ ಮುಂದುವರಿಸಿಕೊಂಡು ಹೋಗುವ ಸವಾಲು ಎದುರಿಗಿದೆ.

ಗಾಯದ ಸಮಸ್ಯೆಯಿಂದ ಸಾಧನೆಗೆ ಹಿನ್ನಡೆಯಾಗಿಲ್ಲವೇ?

ಗಾಯದ ಸಮಸ್ಯೆಯಿಂದಾಗಿಯೇ ಹಲವರು ನಿರೀಕ್ಷೆಗಿಂತಲೂ ಮೊದಲೇ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ. ಗಂಭೀರ ಸ್ವರೂಪದ ಗಾಯಗಳಾದಾಗ ತಿಂಗಳುಗಟ್ಟಲೆ ಅಂಗಳದಿಂದ ದೂರ ಉಳಿಯಬೇಕಾಗುತ್ತದೆ. ಅದರಿಂದ ಗುಣಮುಖವಾದ ನಂತರ ಮತ್ತೆ ಲಯ ಕಂಡುಕೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತದೆ. ನಾನು ಹಲವು ಬಾರಿ ಗಾಯಗೊಂಡಿದ್ದೇನೆ. ಅದರಿಂದ ಶೀಘ್ರವೇ ಗುಣಮುಖವಾಗಿ ಮತ್ತೆ ಉತ್ತಮ ಸಾಮರ್ಥ್ಯ ತೋರಲು ಸಾಧ್ಯವಾಗಿದೆ. ಇದು ಖುಷಿಯ ವಿಷಯ.

ಯೂರೋ‍‍ಪ್‌ನ ‘ಕ್ಲೇ ಕೋರ್ಟ್‌’ಗಳಲ್ಲಿ ನೀವು ಅಪೂರ್ವ ಆಟ ಆಡುತ್ತಾ ಬಂದಿದ್ದೀರಿ. ಈ ಯಶಸ್ಸಿನ ಹಿಂದಿನ ಗುಟ್ಟೇನು?

16 ವರ್ಷದವನಾಗಿದ್ದಾಗ ಸ್ಪೇನ್‌ನಲ್ಲಿ ತರಬೇತಿ ಪಡೆದಿದ್ದೆ. ಅಲ್ಲಿ ‘ಕ್ಲೇ ಕೋರ್ಟ್‌’ನಲ್ಲಿ ನಿರಂತರವಾಗಿ ಅಭ್ಯಾಸ ನಡೆಸುತ್ತಿದ್ದೆ. ಹೀಗಾಗಿ ಗಟ್ಟಿ ಮಣ್ಣಿನಂಕಣದಲ್ಲಿ ಉತ್ತಮ ಆಟ ಆಡಲು ಸಾಧ್ಯವಾಗುತ್ತಿದೆ.

ನೀವು ಟೆನಿಸ್‌ ಅಂಗಳಕ್ಕೆ ಕಾಲಿಟ್ಟಿದ್ದು ಹೇಗೆ?

ಅಜ್ಜನಿಗೆ ಕ್ರೀಡೆಯ ಬಗ್ಗೆ ವಿಶೇಷ ಆಸಕ್ತಿ ಇತ್ತು. ನನ್ನ ಸೋದರ ಸಂಬಂಧಿಯೊಬ್ಬರು ಟೆನಿಸ್‌ ಆಡುತ್ತಿದ್ದರು. ಅವರ ಆಟವನ್ನು ನೋಡುತ್ತಾ ನನ್ನಲ್ಲೂ ಆಸಕ್ತಿ ಬೆಳೆಯಿತು. ಎಳವೆಯಲ್ಲಿ ಸಣ್ಣ ಕೋರ್ಟ್‌ಗಳಲ್ಲಿ ತಾಲೀಮು ನಡೆಸುತ್ತಿದ್ದೆ. ಎಂಟನೇ ವಯಸ್ಸಿನಿಂದ ಟೂರ್ನಿಗಳಲ್ಲಿ ಆಡಲು ಶುರುಮಾಡಿದೆ. ಪ್ರಶಸ್ತಿಗಳನ್ನು ಗೆಲ್ಲುತ್ತಾ ಹೋದಂತೆ ಆಸಕ್ತಿ ಇಮ್ಮಡಿಸಿತು. ಕ್ರಮೇಣ ಹೊಸ ಕೌಶಲಗಳನ್ನು ಕಲಿತು ಅವುಗಳನ್ನು ಮೈಗೂಡಿಸಿಕೊಳ್ಳಲು ಮುಂದಾದೆ. ಜರ್ಮನಿಯಲ್ಲಿ ಪಡೆದ ವಿಶೇಷ ತರಬೇತಿ ಸಾಮರ್ಥ್ಯ ಹೆಚ್ಚುವಂತೆ ಮಾಡಿತು. ಜೊತೆಗೆ ಎಟಿಪಿ ಮತ್ತು ಐಟಿಎಫ್‌ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಲು ನೆರವಾಯಿತು.

ಎಟಿಪಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಸದ್ಯ 144ನೇ ಸ್ಥಾನದಲ್ಲಿದ್ದೀರಿ. ಇದನ್ನು ಉತ್ತಮ ಪಡಿಸಿಕೊಳ್ಳುವ ಆಲೋಚನೆ ಇದೆಯೇ?

ಖಂಡಿತವಾಗಿಯೂ. ಈ ಋತುವಿನಲ್ಲಿ ಇನ್ನೂ ಕೆಲ ಟೂರ್ನಿಗಳನ್ನು ಆಡಬೇಕಿದೆ. ಅವುಗಳಲ್ಲಿ ಪ್ರಶಸ್ತಿ ಜಯಿಸಿದರೆ ವರ್ಷಾಂತ್ಯದಲ್ಲಿ ಅಗ್ರ 100ರೊಳಗೆ ಸ್ಥಾನ ಗಳಿಸಬಹುದು. ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸುತ್ತೇನೆ.

ಭಾರತದಲ್ಲಿ ಟೆನಿಸ್‌ ಆಟಕ್ಕೆ ಸೂಕ್ತ ಮನ್ನಣೆ ಸಿಗುತ್ತಿದೆಯೇ?

ಆರಂಭದ ದಿನಗಳಿಗೆ ಹೋಲಿಸಿದರೆ ಈಗ ನಮ್ಮಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಬೇರುಮಟ್ಟದಿಂದಲೇ ಕ್ರೀಡೆಯನ್ನು ಬಲಪಡಿಸಲು ಸಾಕಷ್ಟು ಯೋಜನೆಗಳನ್ನು ರೂಪಿಸಿ ಅವುಗಳನ್ನು ಅನುಷ್ಠಾನಗೊಳಿಸುತ್ತಿದೆ. ಎಳವೆಯಲ್ಲಿಯೇ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅದಕ್ಕೆ ಸಾಣೆ ಹಿಡಿಯುವ ಕೆಲಸ ಆಗುತ್ತಿದೆ. ಇತರ ದೇಶಗಳಂತೆ ನಮ್ಮಲ್ಲೂ ಈಗ ಅತ್ಯಾಧುನಿಕ ಮೂಲ ಸೌಕರ್ಯಗಳು ಸಿಗುತ್ತಿವೆ.

ಪ್ರಮುಖ ನಗರಗಳಲ್ಲಿ ಗುಣಮಟ್ಟದ ಕೋರ್ಟ್‌ಗಳನ್ನು ನಿರ್ಮಿಸಿ ಯುವ ಆಟಗಾರರ ತರಬೇತಿಗೆ ಅನುವು ಮಾಡಿಕೊಡಲಾಗುತ್ತಿದೆ. ಇದು ಹೀಗೆ ಮುಂದುವರಿಯಬೇಕು. ಆಗ ಮಾತ್ರ ಭಾರತವೂ ಟೆನಿಸ್‌ ಕ್ರೀಡೆಯ ಶಕ್ತಿಕೇಂದ್ರಗಳಲ್ಲಿ ಒಂದಾಗಿ ಗುರುತಿಸಿಕೊಳ್ಳಲು ಸಾಧ್ಯ.

* ನಿಮ್ಮ ನೆಚ್ಚಿನ ಆಟಗಾರ?

ವಿಶ್ವ ಶ್ರೇಷ್ಠರೆನಿಸಿರುವ ಎಲ್ಲಾ ಆಟಗಾರರು ನನಗೆ ಇಷ್ಟ. ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌, ಸ್ಪೇನ್‌ನ ರಫೆಲ್‌ ನಡಾಲ್‌, ಸರ್ಬಿಯಾದ ನೊವಾಕ್‌ ಜೊಕೊವಿಚ್‌, ಬ್ರಿಟನ್‌ನ ಆ್ಯಂಡಿ ಮರ‍್ರೆ ಹೀಗೆ ಎಲ್ಲರ ಆಟವನ್ನೂ ನೋಡಿ ಖುಷಿಪಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT