ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಭಾರಂಭ ಮಾಡಿದ ಒಸಾಕ

ಮ್ಯಾಡ್ರಿಡ್‌ ಓಪನ್‌ ಟೆನಿಸ್‌ ಟೂರ್ನಿ: ಕಿರ್ಗಿಯೊಸ್‌ಗೆ ನಿರಾಸೆ
Last Updated 5 ಮೇ 2019, 16:23 IST
ಅಕ್ಷರ ಗಾತ್ರ

ಮ್ಯಾಡ್ರಿಡ್‌ : ಗುಣಮಟ್ಟದ ಆಟ ಆಡಿದ ಜಪಾನ್‌ನ ನವೊಮಿ ಒಸಾಕ, ಮ್ಯಾಡ್ರಿಡ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಪೈಪೋಟಿಯಲ್ಲಿ ಒಸಾಕ 6–2, 7–6 ನೇರ ಸೆಟ್‌ಗಳಿಂದ ಸ್ಲೊವೇಕಿಯಾದ ಡೊಮಿನಿಕಾ ಸಿಬುಲ್ಕೋವಾ ಅವರನ್ನು ಸೋಲಿಸಿದರು.

ಈ ಹೋರಾಟ ಒಂದು ಗಂಟೆ 55 ನಿಮಿಷ ನಡೆಯಿತು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಒಸಾಕ, ಈ ಹಣಾಹಣಿಯಲ್ಲಿ ಒಟ್ಟು 43 ವಿನ್ನರ್‌ಗಳನ್ನು ಸಿಡಿಸಿದರು. ಸಿಬುಲ್ಕೋವಾ 23 ವಿನ್ನರ್‌ ಸಿಡಿಸಲಷ್ಟೇ ಶಕ್ತರಾದರು. ಸ್ಲೊವೇಕಿಯಾದ ಆಟಗಾರ್ತಿ ಹಲವು ಡಬಲ್‌ ಫಾಲ್ಟ್‌ಗಳನ್ನೂ ಎಸಗಿದರು.

ಮೊದಲ ಸೆಟ್‌ನ ಶುರುವಿನಲ್ಲಿ ಉಭಯ ಆಟಗಾರ್ತಿಯರು ತುರುಸಿನ ಪೈಪೋಟಿ ನಡೆಸಿದರು. ಮೂರನೇ ಗೇಮ್‌ನಲ್ಲಿ ಸರ್ವ್‌ ಕಳೆದುಕೊಂಡು ಒಸಾಕ ನಂತರ ಪುಟಿದೆದ್ದರು. ಜಪಾನ್‌ನ ಆಟಗಾರ್ತಿ ಬ್ಯಾಕ್‌ಹ್ಯಾಂಡ್‌ ಮತ್ತು ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ಆರಂಭಿಕ ನಿರಾಸೆಯಿಂದ ಸಿಬುಲ್ಕೋವಾ ಎದೆಗುಂದಲಿಲ್ಲ. ಎರಡನೇ ಗೇಮ್‌ನಲ್ಲಿ ಅವರು ಮಿಂಚಿನ ಸಾಮರ್ಥ್ಯ ತೋರಿದರು. ಒಮ್ಮೆ ಎದುರಾಳಿಯ ಸರ್ವ್‌ ಮುರಿದ ಸ್ಲೊವೇಕಿಯಾದ ಆಟಗಾರ್ತಿ 4–3ರಿಂದ ಮುನ್ನಡೆ ಗಳಿಸಿದರು. ಈ ಹಂತದಲ್ಲಿ ಅಗ್ರಶ್ರೇಯಾಂಕಿತ ಆಟಗಾರ್ತಿ ಒಸಾಕ ತಿರುಗೇಟು ನೀಡಿದರು. ಎಂಟನೇ ಗೇಮ್‌ನಲ್ಲಿ ಸಿಬುಲ್ಕೋವಾ ಡಬಲ್‌ ಫಾಲ್ಟ್‌ ಎಸಗಿದರು. ಹೀಗಾಗಿ 4–4 ಸಮಬಲ ಕಂಡುಬಂತು. ನಂತರದ ನಾಲ್ಕು ಗೇಮ್‌ಗಳಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು.

‘ಟೈ ಬ್ರೇಕರ್‌’ನಲ್ಲೂ ಮೋಡಿ ಮಾಡಿದ ಜಪಾನ್‌ನ ಆಟಗಾರ್ತಿ ಪಂದ್ಯ ಗೆದ್ದು ಸಂಭ್ರಮಿಸಿದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಸ್ವಿಟ್ಜರ್‌ಲೆಂಡ್‌ನ ಬೆಲಿಂದಾ ಬೆನ್‌ಸಿಕ್‌ 6–4, 6–3ರಲ್ಲಿ ಅಲಿಸನ್‌ ವ್ಯಾನ್‌ ಉಯತ್‌ವಾಂಕ್‌ ಎದುರೂ, ಸ್ಲೊವೇಕಿಯಾದ ವಿಕ್ಟೋರಿಯಾ ಕುಜಮೋವಾ 7–5, 6–4ರಲ್ಲಿ ಜರ್ಮನಿಯ ಜೂಲಿಯಾ ಜಾರ್ಜಸ್‌ ಮೇಲೂ, ಚೀನಾದ ಸೈಸೈ ಜೆಂಗ್‌ 7–5, 7–6ರಲ್ಲಿ ಯಫಾನ್‌ ವಾಂಗ್ ವಿರುದ್ಧವೂ, ಕ್ರೊವೇಷ್ಯಾದ ಡೊನಾ ವೆಕಿಕ್‌ 7–5, 6–4ರಲ್ಲಿ ಚೀನಾದ ಕ್ವಿಯಾಂಗ್‌ ವಾಂಗ್‌ ಮೇಲೂ ಗೆದ್ದರು.

ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಪೈಪೋಟಿಯಲ್ಲಿ ಆಸ್ಟ್ರೇಲಿಯಾದ ನಿಕ್‌ ಕಿರ್ಗಿಯೊಸ್‌ ನಿರಾಸೆ ಕಂಡರು.

ಜರ್ಮನಿಯ ಜಾನ್‌ ಲೆನ್ನಾರ್ಡ್‌ ಸ್ಟ್ರಫ್‌ 7–6, 6–4 ನೇರ ಸೆಟ್‌ಗಳಿಂದ ಕಿರ್ಗಿಯೊಸ್‌ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT