ಶನಿವಾರ, ಜೂನ್ 25, 2022
25 °C
ರಷ್ಯಾದ ಡೇನಿಯಲ್‌ ಮೆಡ್ವೆಡೆವ್ ಮುನ್ನಡೆ

ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿ: ಶಪೊವಲೊವ್‌ಗೆ ರ‍್ಯೂನ್ ಆಘಾತ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ರಷ್ಯಾದ ಡೇನಿಯಲ್ ಮೆಡ್ವೆಡೆವ್‌ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಡೆನ್ಮಾರ್ಕ್‌ನ ಯುವ ಆಟಗಾರ ಹೋಲ್ಗರ್‌ ರ‍್ಯೂನ್‌ ಕೆನಡಾದ ಡೆನಿಸ್‌ ಶಪವಲೊವ್‌ಗೆ ಆಘಾತ ನೀಡಿ ಅಚ್ಚರಿ ಮೂಡಿಸಿದರು.

ಹರ್ನಿಯಾ ಚಿಕಿತ್ಸೆಗೆ ಒಳಗಾದ ಬಳಿಕ ಕೆಂಪುಮಣ್ಣಿನ ಅಂಗಣದಲ್ಲಿ ತಮ್ಮ ಎರಡನೇ ‍ಪಂದ್ಯವಾಡಿದ ಮೆಡ್ವೆಡೆವ್‌, ಮೊದಲ ಸುತ್ತಿನಲ್ಲಿ 6-2, 6-2, 6-2ರಿಂದ ಅರ್ಜೆಂಟೀನಾದ ಫಕುಂದೊ ಬ್ಯಾಗ್ನಿಸ್ ಅವರನ್ನು ಪರಾಭವಗೊಳಿಸಿದರು. 103ನೇ ರ‍್ಯಾಂಕಿನ ಆಟಗಾರನ ಎದುರು ಎಂಟು ಬ್ರೇಕ್ ಪಾಯಿಂಟ್‌ ಗಳಿಸಿದರು.

19 ವರ್ಷದ ರ‍್ಯೂನ್‌ 14ನೇ ಶ್ರೇಯಾಂಕದ ಕೆನಡಾ ಆಟಗಾರನನ್ನು 6-3, 6-1, 7-6 (7/4)ರಿಂದ ಮಣಿಸಿ ಎರಡನೇ ಸುತ್ತಿಗೆ ಕಾಲಿಟ್ಟರು. 2019ರಲ್ಲಿ ಇಲ್ಲಿ ಬಾಲಕರ ವಿಭಾಗದಲ್ಲಿ ರ‍್ಯೂನ್‌ ಚಾಂಪಿಯನ್ ಆಗಿದ್ದರು. 2021ರ ಋತುವಿನ ಆರಂಭದಲ್ಲಿ ಅಗ್ರ 400ರ ರ‍್ಯಾಂಕಿಂಗ್‌ನಲ್ಲಿಯೂ ಇಲ್ಲದ ಡೆನ್ಮಾರ್ಕ್‌ ಆಟಗಾರ ಸದ್ಯ ಭಾರೀ ಪ್ರಗತಿ ಸಾಧಿಸಿದ್ದು, 40ನೇ ಸ್ಥಾನದಲ್ಲಿದ್ದಾರೆ.

ರ‍್ಯೂನ್ ಎದುರಿನ ಪಂದ್ಯದಲ್ಲಿ ಶಪವಲೊವ್‌ 53 ಲೋಪಗಳನ್ನು ಎಸಗಿದರು.

ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ಕಜಕಿಸ್ತಾನದ ಅಲೆಕ್ಸಾಂಡರ್‌ ಬಬ್ಲಿಕ್‌ 6-2, 6-4, 6-4ರಿಂದ ಫ್ರಾನ್ಸ್‌ನ ಅರ್ಥರ್‌ ರಿಂಡರ್‌ಕ್ನೆಚ್‌ ಎದುರು, ಸರ್ಬಿಯಾದ ಲಾಸ್ಲೊ ಡಿಜೆರ್‌ 6-4, 6-4, 6-4ರಿಂದ ಲಿಥುವೇನಿಯಾದ ರಿಕಾರ್ಡಸ್‌ ಬೆರೆಂಕಿಸ್‌ ವಿರುದ್ಧ ಜಯ ಸಾಧಿಸಿದರು.

ಮಹಿಳಾ ಸಿಂಗಲ್ಸ್ ವಿಭಾಗದ ಪಂದ್ಯಗಳಲ್ಲಿ ಫ್ರಾನ್ಸ್‌ನ ಅಲಿಜ್ ಕಾರ್ನೆಟ್‌ 6-2, 6-0ರಿಂದ ಜಪಾನ್‌ನ ಮಿಸಾಕಿ ಡೋಯಿ ಎದುರು, ಲಾತ್ವಿಯಾದ ಎಲೆನಾ ಒಸ್ಟಾಂಪೆಕೊ 6-1, 6-4ರಿಂದ ಇಟಲಿಯ ಲೂಸಿಯಾ ಬ್ರೊಂಜೆಟ್ಟಿ ಎದುರು ಜಯ ಗಳಿಸಿ ಎರಡನೇ ಸುತ್ತಿಗೆ ಮುನ್ನಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು