ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್‌ ಟೆನಿಸ್ ಟೂರ್ನಿ: ಸೆಮಿಫೈನಲ್‌ಗೆ ತತಿಯಾನ ಮರಿಯಾ

ನಾಲ್ಕರ ಘಟ್ಟಕ್ಕೆ ಸಾನಿಯಾ ಜೋಡಿ
Last Updated 5 ಜುಲೈ 2022, 15:56 IST
ಅಕ್ಷರ ಗಾತ್ರ

ವಿಂಬಲ್ಡನ್‌: ಮೊದಲ ಸೆಟ್‌ ಸೋತರೂ ಮರುಹೋರಾಟ ನಡೆಸಿದ ಜರ್ಮನಿಯ ತತಿಯಾನ ಮರಿಯಾ, ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದರು.

ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಅವರು 4-6, 6-2, 7-5 ರಲ್ಲಿ ತಮ್ಮದೇ ದೇಶದ ಯೂಲ್ ನೀಮಯೆರ್ ವಿರುದ್ಧ ಗೆದ್ದರು.

ಸೆಮಿಗೆ ಸಾನಿಯಾ–ಪಾವಿಚ್‌: ಸಾನಿಯಾ ಮಿರ್ಜಾ ಮತ್ತು ಕ್ರೊಯೇಷ್ಯದ ಮಾಟೆ ಪಾವಿಚ್ ಜೋಡಿ ಮಿಶ್ರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪ್ರವೇಶಿಸಿತು.

ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತ– ಕ್ರೊಯೇಷ್ಯದ ಜೋಡಿ 6–4, 3–6, 7–5 ರಲ್ಲಿ ಕೆನಡದ ಗ್ಯಾಬ್ರಿಯೆಲಾ ದಬ್ರೊವ್‌ಸ್ಕಿ ಮತ್ತು ಆಸ್ಟ್ರೇಲಿಯಾದ ಜಾನ್‌ ಪಿಯರ್ಸ್‌ ವಿರುದ್ಧ ಪ್ರಯಾಸದ ಗೆಲುವು ಪಡೆಯಿತು.

ಸಾನಿಯಾ–ಪಾವಿಚ್‌ ಜೋಡಿ ಸೆಮಿಫೈನಲ್‌ನಲ್ಲಿ ರೋಬರ್ಟ್‌ ಫರಾ ಮತ್ತು ಯೆಲೆನಾ ಒಸ್ಟಪೆಂಕೊ ಅವರನ್ನು ಎದುರಿಸಲಿದೆ.

ವಿಂಬಲ್ಡನ್ ಟೂರ್ನಿಯ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಸಾನಿಯಾ ಅವರ ಉತ್ತಮ ಸಾಧನೆ ಇದಾಗಿದೆ. 2011, 2013 ಮತ್ತು 2015 ರಲ್ಲಿ ಅವರು ಇಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದರು.

ಕ್ವಾರ್ಟರ್‌ಫೈನಲ್‌ಗೆ ನಡಾಲ್‌: ಸ್ಪೇನ್‌ನ ರಫೆಲ್‌ ನಡಾಲ್‌ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಅವರು 6-4, 6-2, 7-6 (8/6) ರಲ್ಲಿ ನೆದರ್ಲೆಂಡ್ಸ್‌ನ ಬೊಟಿಕ್‌ ವಾನ್‌ ಡೆ ಜಾಂಡ್‌ಹುಪ್ ಎದುರು ಜಯ ಸಾಧಿಸಿದರು.

2008 ಮತ್ತು 2010 ರಲ್ಲಿ ಪ್ರಶಸ್ತಿ ಜಯಿಸಿರುವ ನಡಾಲ್‌, ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ ಎಂಟನೇ ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು.

36 ವರ್ಷದ ನಡಾಲ್‌ ಬುಧವಾರ ನಡೆಯುವ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 11ನೇ ಶ್ರೇಯಾಂಕದ ಆಟಗಾರ ಅಮೆರಿಕದ ಟೇಲರ್ ಫ್ರಿಟ್ಜ್‌ ಅವರ ಸವಾಲು ಎದುರಿಸುವರು. ಫ್ರಿಟ್ಜ್‌ 6–3, 6–1, 6–4 ರಲ್ಲಿ ಆಸ್ಟ್ರೇಲಿಯಾದ ಜೇಸನ್‌ ಕುಬ್ಲೆರ್‌ ಅವರನ್ನು ಮಣಿಸಿದರು.

ಎಂಟರಘಟ್ಟಕ್ಕೆ ಹಲೆಪ್, ರಿಬಾಕಿನ: ರೊಮೇನಿಯದ ಸಿಮೊನಾ ಹಲೆಪ್‌ ಮತ್ತು ಕಜಕಸ್ತಾನದ ಎಲೆನಾ ರಿಬಾಕಿನ ಅವರು ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಸೋಮವಾರ ನಡೆದ ಪ್ರೀಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 16ನೇ ಶ್ರೇಯಾಂಕದ ಹಲೆಪ್ 6–1, 6–2 ರಲ್ಲಿ ಸ್ಪೇನ್‌ನ ಪೌಲಾ ಬಡೊಸಾ ಅವರನ್ನು ಮಣಿಸಿದರು. ರಿಬಾಕಿನ ಅವರು 7–5, 6–3 ರಲ್ಲಿ ಕ್ರೊಯೇಷ್ಯದ ಪೆಟ್ರಾ ಮಾರ್ಟಿಚ್‌ ವಿರುದ್ಧ ಗೆದ್ದರು.

ಆಸ್ಟ್ರೇಲಿಯಾದ ಅಯ್ಲಾ ಟೊಮ್ಲಾನೊವಿಚ್ 4-6, 6-4, 6-3 ರಲ್ಲಿ ಅಲೈಜ್‌ ಕಾರ್ನೆಟ್ ವಿರುದ್ಧ; ಅಮೆರಿಕದ ಅಮಂಡಾ ಅನಿಸಿಮೊವಾ 6–2, 6–3 ರಲ್ಲಿ ಫ್ರಾನ್ಸ್‌ನ ಹಾರ್ಮನಿ ಟಾನ್‌ ಎದುರು ಜಯ ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT