ಸೋಮವಾರ, ಡಿಸೆಂಬರ್ 9, 2019
17 °C
ಅಲೆಕ್ಸಾಂಡರ್‌ ಜ್ವೆರೆವ್‌ ಮುನ್ನಡೆ

ಎಟಿಪಿ ಫೈನಲ್ಸ್: ಮೊದಲ ಸುತ್ತಿನಲ್ಲೇ ನಡಾಲ್‌ ಪರಾಭವ

Published:
Updated:

ಲಂಡನ್‌: ವಿಶ್ವದ ಮೊದಲ ರ‍್ಯಾಂಕಿನ ಆಟಗಾರ ರಫೆಲ್‌ ನಡಾಲ್‌ ಎಟಿಪಿ ಫೈನಲ್ಸ್‌ ಟೂರ್ನಿಯಲ್ಲಿ ಆಘಾತ ಅನುಭವಿಸಿದ್ದಾರೆ. ಸೋಮವಾರ ಮೊದಲ ಸುತ್ತಿನ ಹಣಾಹಣಿಯಲ್ಲಿ ಅವರು ಹಾಲಿ ಚಾಂಪಿಯನ್‌ ಅಲೆಕ್ಸಾಂಡರ್‌ ಜ್ವೆರೆವ್‌ ಎದುರು 2–6, 4–6 ಸೆಟ್‌ಗಳಿಂದ ಸೋತರು. ಜ್ವೆರೆವ್‌ ಎದುರು ನಡಾಲ್‌ ಅವರಿಗೆ ಇದು ವೃತ್ತಿಜೀವನದಲ್ಲಿ ಮೊದಲ ಪರಾಭವ.

ವರ್ಷಾಂತ್ಯದಲ್ಲಿ ನಂ.1 ಸ್ಥಾನ ಉಳಿಸಿಕೊಳ್ಳುವ ವಿಶ್ವಾಸದಲ್ಲಿರುವ ನಡಾಲ್‌, ಎಟಿಪಿ ಫೈನಲ್ಸ್‌ ಪ್ರಶಸ್ತಿಯನ್ನು ಮೊದಲ ಬಾರಿ ಗೆಲ್ಲುವ ಛಲದೊಂದಿಗೆ ಕಣಕ್ಕಿಳಿದಿದ್ದರು. ಆದರೆ ಯಶಸ್ಸು ದಕ್ಕಲಿಲ್ಲ. ಮೊದಲ ಸೆಟ್‌ನ ಐದನೇ ಗೇಮ್‌ನಲ್ಲಿ ಜ್ವೆರೆವ್‌, ನಡಾಲ್‌ ಅವರ ಸರ್ವ್‌ ಮುರಿದು ಮುನ್ನುಗ್ಗಿದರು. ಮತ್ತೆರಡು ಗೇಮ್‌ಗಳಲ್ಲೂ ಇದು ಪುನರಾವರ್ತಿಸಿತು.

33 ವರ್ಷದ ಸ್ಪೇನ್‌ ಆಟಗಾರ ನಡಾಲ್‌, ಎರಡನೇ ಸೆಟ್‌ನ ಆರಂಭದಲ್ಲಿ ಮತ್ತೊಮ್ಮೆ ಸರ್ವ್‌ ಕೈಚೆಲ್ಲಿದರು. ಬಳಿಕ ಜರ್ಮನಿಯ ಯುವ ಆಟಗಾರ, ನಡಾಲ್‌ ಅವರಿಗೆ ಚೇತರಿಸಿಕೊಳ್ಳುವ ಯಾವುದೇ ಅವಕಾಶ ನೀಡಲಿಲ್ಲ.

ಇಲ್ಲಿನ ಓ2 ಅರೆನಾದಲ್ಲಿ 22 ವರ್ಷದ ಜ್ವೆರೆವ್‌, ಸತತ ಪಂದ್ಯಗಳಲ್ಲಿ ಪ್ರಮುಖ ಆಟಗಾರರಾದ ಫೆಡರರ್‌, ಜೊಕೊವಿಚ್‌ ಹಾಗೂ ನಡಾಲ್‌ ಅವರನ್ನು ಸೋಲಿಸಿದಂತಾಗಿದೆ. ಹೋದ ವರ್ಷ ಪ್ರಶಸ್ತಿ ಗೆದ್ದ ಸಂದರ್ಭದಲ್ಲಿ ಜ್ವೆರೆವ್‌ ಅವರು ಫೆಡರರ್‌, ಜೊಕೊವಿಚ್‌ ಅವರನ್ನು ಪರಾಭವಗೊಳಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು