ಗುರುವಾರ , ಜನವರಿ 23, 2020
21 °C

ಟೆನಿಸ್‌: ಪ್ರಜ್ಞೇಶ್‌ ಸವಾಲು ಅಂತ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೆಂಡಿಗೊ, ಆಸ್ಟ್ರೇಲಿಯಾ: ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಅವರು ಬೆಂಡಿಗೊ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ಎರಡನೇ ಸುತ್ತಿನಲ್ಲೇ ಮುಗ್ಗರಿಸಿದ್ದಾರೆ.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಹಣಾಹಣಿಯಲ್ಲಿ ಪ್ರಜ್ಞೇಶ್‌ 4–6, 6–7 ನೇರ ಸೆಟ್‌ಗಳಿಂದ ಜಪಾನ್‌ನ ಟಾರೊ ಡೇನಿಯಲ್‌ ಎದುರು ನಿರಾಸೆ ಕಂಡರು. ಈ ಹೋರಾಟ 1 ಗಂಟೆ 30 ನಿಮಿಷ ನಡೆಯಿತು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 122ನೇ ಸ್ಥಾನ ಹೊಂದಿರುವ ಭಾರತದ ಆಟಗಾರ, ಎದುರಾಳಿಯ ಸರ್ವ್‌ ಮುರಿಯಲು ಲಭಿಸಿದ್ದ ಐದು ಅವಕಾಶಗಳನ್ನು ಕೈಚೆಲ್ಲಿದರು.

ಮೊದಲ ಸೆಟ್‌ನಲ್ಲಿ ಉಭಯ ಆಟಗಾರರು ಜಿದ್ದಾಜಿದ್ದಿನಿಂದ ಸೆಣಸಿದರು. ಹೀಗಾಗಿ 4–4 ಸಮಬಲ ಕಂಡುಬಂತು. ವಿಶ್ವ ರ‍್ಯಾಂಕಿಂಗ್‌ನಲ್ಲಿ 106ನೇ ಸ್ಥಾನದಲ್ಲಿರುವ ಟಾರೊ, ನಂತರದ ಎರಡು ಗೇಮ್‌ಗಳಲ್ಲೂ ಗುಣಮಟ್ಟದ ಆಟ ಆಡಿ ಸೆಟ್‌ ಗೆದ್ದರು.

ಎರಡನೇ ಸೆಟ್‌ನಲ್ಲೂ ಉಭಯ ಆಟಗಾರರು ತುರುಸಿನ ಪೈಪೋಟಿ ನಡೆಸಿದರು. ‘ಟೈ ಬ್ರೇಕರ್‌’ನಲ್ಲಿ ತಪ್ಪುಗಳನ್ನು ಮಾಡಿದ ಪ್ರಜ್ಞೇಶ್‌ ಸೋಲಿನ ಸುಳಿಗೆ ಸಿಲುಕಿದರು.

‘ಪಂದ್ಯದಲ್ಲಿ ನನ್ನಿಂದ ಹಲವು ತಪ್ಪುಗಳಾದವು. ಎದುರಾಳಿಯ ಸರ್ವ್‌ ಮುರಿಯುವ ಅವಕಾಶಗಳನ್ನೂ ಕೈಚೆಲ್ಲಿದೆ. ಹೀಗಾಗಿ ಪರಾಭವಗೊಂಡೆ. ಈ ನಿರಾಸೆಯನ್ನು ಮರೆತು ಮುಂದಿನ ಟೂರ್ನಿಗಳಲ್ಲಿ ಉತ್ತಮ ಆಟ ಆಡಲು ಪ್ರಯತ್ನಿಸುತ್ತೇನೆ’ ಎಂದು ಪಂದ್ಯದ ಬಳಿಕ ಪ್ರಜ್ಞೇಶ್‌ ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು