ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ಓಪನ್‌ ಐಟಿಎಫ್‌ ಟೆನಿಸ್‌ ಟೂರ್ನಿ: ಸೆಮಿಗೆ ರಾಮಕುಮಾರ್

Published 1 ಡಿಸೆಂಬರ್ 2023, 22:59 IST
Last Updated 1 ಡಿಸೆಂಬರ್ 2023, 22:59 IST
ಅಕ್ಷರ ಗಾತ್ರ

ಕಲಬುರಗಿ: ಭರ್ಜರಿ ಏಳು ಏಸ್‌ಗಳನ್ನು ಸಿಡಿಸಿದ ಭಾರತದ ರಾಮಕುಮಾರ್ ರಾಮನಾಥನ್ ಅವರು ಕಲಬುರಗಿ ಓಪನ್ ಐಟಿಎಫ್‌ ಪುರುಷರ ಟೆನಿಸ್‌ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದರು.

ಇಲ್ಲಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಅವರಿಗೆ 7–5, 6–0ಯಿಂದ ಸ್ವದೇಶದ ಮನೀಷ್‌ ಸುರೇಶ್ ಕುಮಾರ್ ವಿರುದ್ಧ ಗೆಲುವು ಒಲಿಯಿತು.

ಸೆಮಿಫೈನಲ್‌ಗೆ ಕಾಲಿಟ್ಟಿರುವ ರಾಮನಾಥನ್‌ ಅವರಿಗೆ ಶನಿವಾರ ಜಪಾನ್‌ನ ರಿಯೊತಾರೊ ತಗುಚಿ ಸವಾಲು ಎದುರಾಗಿದೆ. ಎಂಟರಘಟ್ಟದ ಮತ್ತೊಂದು ಸೆಣಸಾಟದಲ್ಲಿ ತಗುಚಿ 6–3, 6–2ರಿಂದ ಭಾರತದ ಆರ್ಯನ್ ಶಾ ಅವರನ್ನು ಪರಾಭವಗೊಳಿಸಿದರು.

ತಮಿಳುನಾಡಿನ ಆಟಗಾರರಾದ ರಾಮನಾಥನ್ ಮತ್ತು ಮನೀಷ್‌ ಆಟ ಶುಕ್ರವಾರ ಕುತೂಹಲದ ಕೇಂದ್ರಬಿಂದುವಾಗಿತ್ತು. ಆಕರ್ಷಕ ಬ್ಯಾಕ್‌ಹ್ಯಾಂಡ್‌ ಹೊಡೆತಗಳಿಂದ ಗಮನಸೆಳೆದ ಮನೀಷ್‌ ಮೊದಲ ಗೇಮ್‌ ಜಯಿಸಿದರು. ತೀವ್ರ ಹಣಾಹಣಿ ನಡೆದ ಎರಡನೇ ಗೇಮ್‌ ರಾಮ್‌ಕುಮಾರ್ ಪಾಲಾಯಿತು.

ಬಳಿಕ ಸಮಬಲದ ಪೈಪೋಟಿ ನಡೆಸಿದ ಇಬ್ಬರೂ ಎರಡೆರಡು ಗೇಮ್‌ ಜಯಿಸಿದಾಗ ಮೊದಲ ಸೆಟ್‌ನ ಸ್ಕೋರ್ 3–3ಕ್ಕೆ ತಲುಪಿತು.

ಕಾರ್ನರ್‌ಗಳತ್ತ ಬಿರುಸಿನಿಂದ ಚೆಂಡು ದಾಟಿಸಿದ ಮನೀಷ್‌, ರಾಮನಾಥನ್ ಅವರನ್ನು ಜಾಣ್ಮೆಯಿಂದ ವಂಚಿಸಿದರು. ರಾಮನಾಥನ್‌ ಅವರ ಸರ್ವ್‌ ಬ್ರೇಕ್‌ ಮಾಡಿ ಸತತ ಎರಡು ಗೇಮ್‌ ಗೆದ್ದು 5–3ರ ಮುನ್ನಡೆ ಗಳಿಸಿದರು. ಆದರೆ, ಬಳಿಕದ ಸಂಪೂರ್ಣ ಆಟ ರಾಮ್‌ಕುಮಾರ್ ಅವರದಾಯಿತು.

11ನೇ ಗೇಮ್‌ನಲ್ಲಿ ಮನೀಷ್‌ ಅವರ ಸರ್ವ್‌ ಬ್ರೇಕ್ ಮಾಡಿದರು. 12ನೇ ಗೇಮ್‌ ಕೈವಶ ಮಾಡಿಕೊಂಡು ಸೆಟ್‌ ತಮ್ಮದಾಗಿಸಿದರು.

ಎರಡನೇ ಸೆಟ್‌ನಲ್ಲಿ ಮನೀಷ್‌ ತೀರಾ ಮಂಕಾದರು. ಒಂದೂ ಗೇಮ್‌ ಗೆಲ್ಲಲಾಗದೇ ಪಂದ್ಯ ಕೈಚೆಲ್ಲಿದರು.

ಸಿಂಗಲ್ಸ್ ವಿಭಾಗದ ಇನ್ನುಳಿದ ಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ಭಾರತದ ರಿಷಭ್ ಅಗರವಾಲ್‌ 0–6, 4–6ರಿಂದ ಜಪಾನ್‌ನ ರೂಕಿ ಮತ್ಸುದಾ ಎದುರು ಎಡವಿದರೆ, ಆಸ್ಟ್ರಿಯಾದ ಡೇವಿಡ್‌ ಪಿಚ್ಲರ್ 6–2, 6–0ಯಿಂದ ಜಪಾನ್‌ನ ಸಿಯೆಟಾ ವಾಟನಬೆ ಎದುರು ಗೆದ್ದು ನಾಲ್ಕರ ಘಟ್ಟ ತಲುಪಿದರು.

ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐಟಿಎಫ್‌ ಪುರುಷರ ಟೆನಿಸ್‌ ಟೂರ್ನಿಯ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಆಟಗಾರ ರಾಮಕುಮಾರ್ ರಾಮನಾಥನ್ ಆಟದ ಭಂಗಿ‌

ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐಟಿಎಫ್‌ ಪುರುಷರ ಟೆನಿಸ್‌ ಟೂರ್ನಿಯ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಆಟಗಾರ ರಾಮಕುಮಾರ್ ರಾಮನಾಥನ್ ಆಟದ ಭಂಗಿ‌

–ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌

ಕರ್ನಾಟಕದ ಸವಾಲು ಅಂತ್ಯ

ಡಬಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಕರ್ನಾಟಕದ ಆದಿಲ್‌ ಕಲ್ಯಾಣಪುರ ಅವರ ಜೋಡಿ ಸೋಲುವುದರೊಂದಿಗೆ ಟೂರ್ನಿಯಲ್ಲಿ ರಾಜ್ಯದ ಆಟಗಾರರ ಅಭಿಯಾನ ಕೊನೆಗೊಂಡಿತು.  ಆದಿಲ್–ಸಿದ್ಧಾರ್ಥ್ ರಾವತ್‌ 3–6 2–6ರಿಂದ ಭಾರತದ ನಿತಿನ್‌ ಕುಮಾರ್ ಸಿನ್ಹಾ– ಆಸ್ಟ್ರಿಯಾದ ಡೇವಿಡ್‌ ಪಿಚ್ಲರ್ ಎದುರು ಮುಗ್ಗರಿಸಿದರು.

ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಜಪಾನ್‌ನ ತಗುಚಿ–ಮತ್ಸುದಾ 7–6 (4) 6–2ರಿಂದ ಭಾರತದ ಭರತ್ ನಿಶೋಕ್ ಕುಮಾರನ್‌– ರಿಷಭ್ ಅಗರವಾಲ್‌ ಎದುರು ಟೈಬ್ರೇಕರ್‌ನಲ್ಲಿ ಗೆದ್ದು ಪ್ರಶಸ್ತಿ ಸುತ್ತು ತಲುಪಿದರು. ಡಬಲ್ಸ್ ವಿಭಾಗದ ಫೈನಲ್‌ ಶನಿವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT