ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ ಓಪನ್ ಟೆನಿಸ್‌: ಕೊಕೊ ಗಾಫ್‌ಗೆ ನವಾರೊ ಆಘಾತ

Published 3 ಸೆಪ್ಟೆಂಬರ್ 2024, 4:57 IST
Last Updated 3 ಸೆಪ್ಟೆಂಬರ್ 2024, 4:57 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಹಾಲಿ ಚಾಂಪಿಯನ್ ಕೊಕೊ ಗಾಫ್‌ ಅವರು ಈ ಬಾರಿಯ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ನಿರ್ಗಮಿಸಿದ ಸೂಪರ್‌ ಸ್ಟಾರ್‌ಗಳ ಪಟ್ಟಿಯಲ್ಲಿ ಸೇರಿಕೊಂಡರು. ಹಲವು ತಪ್ಪುಗಳನ್ನು ಮಾಡಿದ ಅಮೆರಿಕದ ಆಟಗಾರ್ತಿ, ಸ್ವದೇಶದ ಎಮ್ಮಾ ನವಾರೊ ಅವರಿಗೆ ಮಣಿದರು. ಇನ್ನೊಂದೆಡೆ ಚೀನಾದ ಝೆಂಗ್‌ ಕ್ವಿನ್ವೆನ್ ಅವರು ಸೋಮವಾರ ಬೆಳಗಿನ ಜಾವ 2.15 ನಿಮಿಷಕ್ಕೆ ಪಂದ್ಯ ಮುಗಿಸಿದ್ದು ದಾಖಲೆಯಾಯಿತು.

ಸೂಪರ್‌ಸ್ಟಾರ್‌ಗಳಾದ ಕಾರ್ಲೊಸ್‌ ಅಲ್ಕರಾಜ್ ಮತ್ತು ನೊವಾಕ್ ಜೊಕೊವಿಚ್‌ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಈ ಮೊದಲೇ ಹೊರಬಿದಿದ್ದಾರೆ.

ಗಾಫ್ ನಿರ್ಗಮನ ಅಮೆರಿಕಕ್ಕೆ ನಿರಾಸೆ ಮೂಡಿಸಿದೆ. ಆದರೆ ಫ್ರಾನ್ಸಿಸ್‌ ಟಿಯಾಫೊ ಮತ್ತು ಟೇಲರ್‌ ಫ್ರಿಟ್ಜ್‌ ಪುರುಷರ ಸಿಂಗಲ್ಸ್‌ ಎಂಟರ ಘಟ್ಟ ತಲುಪಿರುವುದು ಅಮೆರಿಕದ ಆಟಗಾರನೊಬ್ಬ ಹೊಸ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್‌ ಆಗುವ ಆಶಾಕಿರಣ ಮೂಡಿಸಿದೆ. 2003ರಲ್ಲಿ ಆ್ಯಂಡಿ ರಾಡಿಕ್ ಅವರು ಪ್ರಶಸ್ತಿ ಗೆದ್ದ ನಂತರ ಪುರುಷರ ವಿಭಾಗದಲ್ಲಿ ಅಮೆರಿಕದ ಆಟಗಾರರು ಪ್ರಶಸ್ತಿ ಗೆದ್ದಿಲ್ಲ.

23 ವರ್ಷ ವಯಸ್ಸಿನ ನವಾರೊ ನಾಲ್ಕನೇ ಸುತ್ತಿನ ಪಂದ್ಯದಲ್ಲಿ 6–3, 4–6, 6–3 ರಿಂದ ಮೂರನೇ ಶ್ರೇಯಾಂಕದ ಗಾಫ್‌ ಅವರ ಸವಾಲನ್ನಡಗಿದರು. 20 ವರ್ಷ ವಯಸ್ಸಿನ ಗಾಫ್‌ ಈ ಪಂದ್ಯದಲ್ಲಿ 19 ಡಬಲ್‌ಫಾಲ್ಟ್‌ಗಳನ್ನು ಮಾಡಿದರು. ಅವರ ಕೈಯಾರೆ 60 ತಪ್ಪುಗಳಾದವು. ವಿಜಯದ ಹೊಡೆತಗಳು ಬರೇ 14. ನವಾರೊ ಅವರ ಕ್ವಾರ್ಟರ್‌ಫೈನಲ್‌ ಎದುರಾಳಿ ಸ್ಪೇನ್‌ನ ಪೌಲಾ ಬಡೋಸಾ.

2014 ರಲ್ಲಿ ಸೆರೇನಾ ವಿಲಿಯಮ್ಸ್‌ ನಂತರ ಅಮೆರಿಕದ ಯಾವುದೇ ಆಟಗಾರ್ತಿ ಫ್ಲಷಿಂಗ್ ಮಿಡೊದಲ್ಲಿ ಪ್ರಶಸ್ತಿ ಉಳಿಸಿಕೊಂಡಿಲ್ಲ.

‘ನನ್ನ ಸರ್ವ್‌ಗಳು ಉತ್ತಮವಾಗಿರಬೇಕಿತ್ತು. ನಾನು ಉತ್ತಮವಾಗಿ ಸರ್ವ್‌ಗಳನ್ನು ಮಾಡಿದಲ್ಲಿ ಕಥೆಯೇ ಬೇರೆಯಾಗುತಿತ್ತೇನೊ’ ಎಂದು ಪ್ರತಿಕ್ರಿಯಿಸಿದರು. ಜುಲೈನಲ್ಲಿ ನಡೆದ ವಿಂಬಲ್ಡನ್‌ನಲ್ಲೂ, ನವಾರೊ ಅವರು ಗಾಫ್‌ ಮೇಲೆ ಜಯಗಳಿಸಿದ್ದರು. ಭಾನುವಾರದ ಪಂದ್ಯದಲ್ಲೂ ಅವರು ಹಿಡಿತ ಸಾಧಿಸಿದರು.

ಝೆಂಗ್ ದಾಖಲೆ:

ಚೀನಾದ ಝೆಂಗ್‌ ಕ್ವಿನ್ವೆನ್‌ ಅವರು ನಾಲ್ಕನೇ ಸುತ್ತಿನಲ್ಲಿ ಡೊನ್ನಾ ವೆಕಿಕ್ ಅವರನ್ನು ಸೋಲಿಸುವ ಹಾದಿಯಲ್ಲಿ ಅತಿ ತಡವಾಗಿ ಮಹಿಳಾ ಸಿಂಗಲ್ಸ್ ಪಂದ್ಯ ಮುಗಿಸಿದ ದಾಖಲೆಗೆ ಪಾತ್ರರಾದರು. ಈ ಫಲಿತಾಂಶ ತಿಂಗಳ ಹಿಂದೆ ನಡೆದ ಒಲಿಂಪಿಕ್ಸ್‌ ಟೆನಿಸ್‌ ಫೈನಲ್‌ನ ಪುನರಾವರ್ತನೆಯಾಗಿತ್ತು.

ಏಳನೇ ಶ್ರೇಯಾಂಕದ ಝೆಂಗ್‌ 7–6 (7–2), 4–6, 6–2 ರಿಂದ 24ನೇ ಕ್ರಮಾಂಕದ ಕ್ರೊವೇಷ್ಯಾ ಆಟಗಾರ್ತಿಯನ್ನು ಸೋಲಿಸಿದರು. ಪಂದ್ಯ 2 ಗಂಟೆ 50 ನಿಮಿಷ ನಡೆಯಿತು. ಪಂದ್ಯ ಮುಗಿಯುವಾಗ ತಡರಾತ್ರಿ 2.15 ಆಗಿತ್ತು. ಆಗ 24000 ಪ್ರೇಕ್ಷಕರ ಸಾಮರ್ಥ್ಯದ ಆರ್ಥರ್ ಆ್ಯಷ್‌ ಕ್ರೀಡಾಂಗಣದಲ್ಲಿ ಕೆಲವೇ ನೂರಾರು ಮಂದಿಯಷ್ಟೇ ಉಳಿದಿದ್ದರು.

ಮರಿಯಾ ಸಕ್ಕರಿ 2021ರ ಆವೃತ್ತಿಯಲ್ಲಿ ಬಿಯಾಂಕ ಆಂಡ್ರುಸ್ಕ್ಯು ಅವರನ್ನು ಸೋಲಿಸಿದಾಗ ರಾತ್ರಿ 2.13 ನಿಮಿಷ ಆಗಿದ್ದು ಈ ಹಿಂದಿನ ದಾಖಲೆಯಾಗಿತ್ತು. ಶಕ್ತಿಶಾಲಿ ಹೊಡೆತಗಳನ್ನಾಡುವ 21 ವರ್ಷ ವಯಸ್ಸಿನ ಝೆಂಗ್‌ ಅವರ ಮುಂದಿನ ಎದುರಾಳಿ, ವಿಶ್ವದ ಎರಡನೇ ಕ್ರಮಾಂಕದ ಅರಿನಾ ಸಬಲೆಂಕಾ. ಕಳೆದ ವರ್ಷದ ಎಂಟರ ಘಟ್ಟದ ಪಂದ್ಯದಲ್ಲಿ ಸಬಲೆಂಕಾ, ಝೆಂಗ್ ಅವರನ್ನು ಸೋಲಿಸಿದ್ದರು. ಈ ವರ್ಷದ ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ನಲ್ಲೂ ಇವರಿಬ್ಬರು ಎದುರಾಗಿ ಸಬಲೆಂಕಾ ವಿಜೇತೆಯಾಗಿದ್ದರು.

ಅಮೆರಿಕ ಓಪನ್‌ನಲ್ಲಿ ಎರಡು ಬಾರಿ ಎಂಟರ ಘಟ್ಟ ತಲುಪಿದ ಚೀನಾದ ಎರಡನೇ ಆಟಗಾರ್ತಿ ಎಂಬ ಗೌರವ ಝೆಂಗ್‌ ಅವರದಾಯಿತು. ಈ ಹಿಂದೆ 2009 ಮತ್ತು 2013ರಲ್ಲಿ ಲೀ ನಾ ಎಂಟರ ಘಟ್ಟ ಪ್ರವೇಶಿಸಿದ್ದರು.

ಸಬಲೆಂಕಾ 6–2, 6–4 ರಿಂದ ಬೆಲ್ಜಿಯಮ್‌ನ ಎಲಿಸ್‌ ಮೆರ್ಟೆನ್ಸ್ ವಿರುದ್ಧ ಜಯಗಳಿಸಿದರು.

ಟಿಯಾಫೊ ಮುನ್ನಡೆ

ವಿಶ್ವದ 20ನೇ ಕ್ರಮಾಂಕದ ಫ್ರಾನ್ಸಿನ್‌ ಟಿಯಾಫೊ ಅವರು 2000 ನಂತರ, ಕಡೇಪಕ್ಷ  ಮೂರು ಬಾರಿ ಅಮೆರಿಕ ಓಪನ್ ಎಂಟರ ಘಟ್ಟ ತಲುಪಿದ ಅಮೆರಿಕದ ನಾಲ್ಕನೇ ಆಟಗಾರ ಎನಿಸಿದರು. ಮಾಜಿ ಚಾಂಪಿಯನ್ನರಾದ ಆಂಡ್ರೆ ಅಗಾಸ್ಸಿ, ಆ್ಯಂಡಿ ರಾಡಿಕ್ ಮತ್ತು ಪೀಟ್‌ ಸಾಂಪ್ರಸ್‌ ಅವರು ಇತರ ಮೂವರು.

ಟಿಯಾಫೊ ನಾಲ್ಕನೇ ಸುತ್ತಿನಲ್ಲಿ 6–4, 7–6 (7–3), 2–6, 6–3 ರಿಂದ ‘ದೈತ್ಯಸಂಹಾರಿ’  ಅಲೆಕ್ಸೈ ಪಾಪಿರಿನ್‌ ಮೇಲೆ ಜಯಗಳಿಸಿದರು. ಆಸ್ಟ್ರೇಲಿಯಾದ ಪಾಪಿರಿನ್ ಈ ಹಿಂದಿನ ಸುತ್ತಿನಲ್ಲಿ ನೊವಾಕ್ ಜೊಕೊವಿಚ್‌ ಅವರ ನಿರ್ಗಮನಕ್ಕೆ ಕಾರಣರಾಗಿದ್ದರು. ಟಿಯಾಫೊ ಎಂಟರ ಘಟ್ಟದಲ್ಲಿ ಬಲ್ಗೇರಿಯಾದ ಅನುಭವಿ ಗ್ರಿಗೊರ್ ಡಿಮಿಟ್ರೊವ್ ಅವರನ್ನು ಎದುರಿಸಲಿದ್ದಾರೆ.

ಒಂಬತ್ತನೇ ಶ್ರೇಯಾಂಕದ ಡಿಮಿಟ್ರೊವ್‌ 6–3, 7–6 (7–3), 1–6, 3–6, 6–3 ರಿಂದ ಆರನೇ ಶ್ರೇಯಾಂಕದ ಆ್ಯಂಡ್ರಿ ರುಬ್ಲೇವ್ ಅವರನ್ನು ಸೋಲಿಸಿ ಎಂಟರ ಘಟ್ಟ ತಲುಪಿದರು. 2019ರ ನಂತರ ಅವರು ಇಲ್ಲಿ ಈ ಹಂತಕ್ಕೇರಿದ್ದಾರೆ. ಆ ವರ್ಷ, ಕೊನೆಯ ದಾಗಿ ಇಲ್ಲಿ ಕಣಕ್ಕಿಳಿದಿದ್ದ ರೋಜರ್ ಫೆಡರರ್‌ ಅವರನ್ನು ಡಿಮಿಟ್ರೊವ್ ಸೋಲಿಸಿದ್ದರು.

ಅಲೆಕ್ಸಾಂಡರ್‌ ಜ್ವರೇವ್‌ 3–6, 6–1, 6–2, 6–2 ರಿಂದ ಅಮೆರಿಕದ ಬ್ರಾಂಡನ್ ನಕಾಶಿಮಾ ಅವರನ್ನು ಸೋಲಿಸಿ ಇಲ್ಲಿ ನಾಲ್ಕನೇ ಬಾರಿ ಕ್ವಾರ್ಟರ್ಸ್ ತಲುಪಿದರು. ಅವರ ಮುಂದಿನ ಎದುರಾಳಿ ಅಮೆರಿಕದ ಇನ್ನೊಬ್ಬ ಆಟಗಾರ ಟೇಲರ್ ಫ್ರಿಟ್ಜ್‌.

12ನೇ ಶ್ರೇಯಾಂಕದ ಫ್ರಿಟ್ಜ್‌ 3–6 6–4, 6–3, 6–2 ರಿಂದ 2022ರ ರನ್ನರ್ ಅಪ್ ಹಾಗೂ ಎಂಟನೇ ಶ್ರೇಯಾಂಕದ ಕ್ಯಾಸ್ಪರ್ ರುಡ್ ಮೇಲೆ ಜಯಗಳಿಸಿದರು.

ಬೋಪಣ್ಣ– ಎಬ್ಡೆನ್‌ ಜೋಡಿಗೆ ಆಘಾತ

ನ್ಯೂಯಾರ್ಕ್‌: ಭಾರತದ ರೋಹನ್‌ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯಾದ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರು ಪುರುಷರ ಡಬಲ್ಸ್‌ನ ಮೂರನೇ ಸುತ್ತಿನಲ್ಲಿ ಹೊರಬಿದ್ದರು.

ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಬೋಪಣ್ಣ- ಎಬ್ಡೆನ್ ಜೋಡಿಗೆ 1-6, 5-7ರಿಂದ 16ನೇ ಶ್ರೇಯಾಂಕದ ಅರ್ಜೆಂಟೀನಾದ ಮ್ಯಾಕ್ಸಿಮೊ ಗೊನ್ಸಾಲೆಜ್ ಮತ್ತು ಆಂಡ್ರೆಸ್ ಮೊಲ್ಟೆನಿ ಜೋಡಿಯು ಆಘಾತ ನೀಡಿತು.

ಬೋಪಣ್ಣ ಸೋಲುವುದರೊಂದಿಗೆ ಡಬಲ್ಸ್‌ನಲ್ಲಿ ಭಾರತ ಆಟಗಾರರ ಸವಾಲು ಅಂತ್ಯಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT