ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup: ಅರ್ಷದೀಪ್ ಕ್ಷಮೆ ಕೇಳಿದ ಅಕ್ಮಲ್

Published 11 ಜೂನ್ 2024, 23:59 IST
Last Updated 11 ಜೂನ್ 2024, 23:59 IST
ಅಕ್ಷರ ಗಾತ್ರ

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವಿಕೆಟ್‌ಕೀಪರ್ ಕಮ್ರನ್ ಅಕ್ಮಲ್ ಅವರು ಭಾರತದ ಬೌಲರ್ ಅರ್ಷದೀಪ್ ಸಿಂಗ್  ಅವರ ಕ್ಷಮೆಯಾಚಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಭಾನುವಾರ ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯದಲ್ಲಿ ಅವರು ಆರ್ಷದೀಪ್ ಸಿಂಗ್ ಕೊನೆಯ ಓವರ್‌ ಬೌಲಿಂಗ್ ಮಾಡಲು ಬಂದಾಗ ಅಕ್ಮಲ್ ‘ಅನುಚಿತ’ ಹೇಳಿಕೆ ನೀಡಿದ್ದರು. ಇದು ಟೀಕೆಗೆ ಒಳಗಾಗಿತ್ತು. ವೀಕ್ಷಕ ವಿವರಣೆಕಾರ ಹರ್ಭಜನ್ ಸಿಂಗ್ ಕೂಡ ಅಕ್ಮಲ್ ಹೇಳಿಕೆಗೆ ಖಾರವಾದ ಪ್ರತಿಕ್ರಿಯೆ ನೀಡಿದ್ದರು. 

‘ನನ್ನ ಹೇಳಿಕೆಗಳ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ಹರಭಜನ್ ಸಿಂಗ್ ಮತ್ತು ಸಿಖ್ ಸಮುದಾಯದ ಕ್ಷಮೆಯಾಚಿಸುತ್ತಿದ್ದೇನೆ.  ವಿಶ್ವದ ಎಲ್ಲ ಕಡೆ ಇರುವ ಸಿಖ್ ಸಮುದಾಯದ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ಯಾರ ಮನಸ್ಸು ನೋಯಿಸುವ ಉದ್ದೇಶ ನನಗಿರಲಿಲ್ಲ. ಸತ್ಯವಾಗಿಯೂ ಕ್ಷಮೆಯಾಚಿಸುತ್ತೇನೆ’ ಎಂದು ಹ್ಯಾಷ್‌ಟ್ಯಾಗ್ ರೆಸ್ಪೆಕ್ಟ್ ಹಾಗೂ ಅಪಾಲಜಿ ಎಂದು ಅಕ್ಮಲ್ ಅವರು  ಎಕ್ಸ್‌ ನಲ್ಲಿ ಬರೆದು ವಿಡಿಯೊ ಹಾಕಿದ್ದಾರೆ.

ಆ ಪಂದ್ಯದಲ್ಲಿ ಪಾಕ್ ತಂಡವು 120 ರನ್‌ಗಳ ಗುರಿ ಬೆನ್ನಟ್ಟಿತ್ತು. ಕೊನೆಯ ಓವರ್‌ ನಿರ್ಣಾಯಕವಾಗಿತ್ತು. 

‘ಈಗ ಏನು ಬೇಕಾದರೂ ಆಗಬಹುದು. ಅರ್ಷದೀಪ್ ಸಿಂಗ್ ಬೌಲಿಂಗ್ ಮಾಡಲು ಬಂದಿದ್ದಾರೆ. ಅಷ್ಟೊಂದು ಲಯದಲ್ಲಿ ಅವರಿದ್ದಂತೆ ಕಾಣುವುದಿಲ್ಲ. ಅಲ್ಲದೇ ಈಗ 12 ಗಂಟೆಯೂ ಆಗಿದೆ’  ಎಂದು ಅಕ್ಮಲ್ ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ಕಾಮೆಂಟೇಟರ್ ಹರಭಜನ್ ಸಿಂಗ್, ‘ನೀವು ಬಾಯಿಬಿಡುವ ಮುನ್ನ ಸಿಖ್ ಜನಾಂಗದ ಇತಿಹಾಸ ತಿಳಿದುಕೊಳ್ಳಬೇಕು. ತಮ್ಮ ತಾಯಂದಿರು, ಸಹೋದರಿಯರು ಅತಿಕ್ರಮಣಕಾರರ ದಾಳಿಗೆ ಸಿಲುಕಿಕೊಂಡಾಗ ಸಿಖ್‌ ವೀರರೇ ರಕ್ಷಿಸಿದ್ದರು. ಆಗಲೂ ರಾತ್ರಿ 12 ಗಂಟೆಯಾಗಿತ್ತು. ನಾಚಿಕೆಯಾಗಬೇಕು ನಿಮಗೆ, ಒಂದಿಷ್ಟಾದರೂ ಕೃತಜ್ಞರಾಗಿರಿ’ ಎಂದು ಕಿಡಿಕಾರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT