ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್: ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಕರ್ನಾಟಕದ ನಿಕ್ಷೇಪ್

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಬಿ.ಆರ್. ನಿಕ್ಷೇಪ್ ಅವರು ನವದೆಹಲಿಯಲ್ಲಿ ನಡೆಯುತ್ತಿರುವ ಫೆನೆಸ್ಟಾ ಓಪನ್ ರಾಷ್ಟ್ರೀಯ ಜೂನಿಯರ್ ಟೆನಿಸ್ ಚಾಂಪಿಯನ್‌ಷಿಪ್‌ನ ಬಾಲಕರ 14 ವರ್ಷ ವಯಸ್ಸಿನೊಳಗಿನವರ ವಿಭಾಗದ ಸೆಮಿಫೈನಲ್‌ನಲ್ಲಿ ನಿರಾಸೆಗೊಂಡರು.

ಶುಕ್ರವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ನಿಕ್ಷೇಪ್ 1-6, 3-6ರಲ್ಲಿ ಅಗ್ರ ಶ್ರೇಯಾಂಕದ ಆಟಗಾರ ಸಚಿನ್ ಕಾರ್ತಿಕ್ ವಿರುದ್ಧ ಪರಾಭವಗೊಂಡರು ಎಂದು ಇಲ್ಲಿಗೆ ಬಂದ ವರದಿಗಳು ತಿಳಿಸಿವೆ. ನಿಕ್ಷೇಪ್ ಎದುರು ಗೆದ್ದ ಸಚಿನ್‌ಗೆ ಫೈನಲ್‌ನಲ್ಲಿ ಧ್ರುವ್ ಪಾಲ್ ಎದುರಾಗಲಿದ್ದಾರೆ. ಸೆಮಿಫೈನಲ್‌ನಲ್ಲಿ ಧ್ರುವ್ ಪ್ರಬಲ ಹೋರಾಟ ನಡೆಸಿ 3-6, 6-2, 7-5ರಲ್ಲಿ ವಿಶು ಪ್ರಸಾದ್ ವಿರುದ್ಧ ವಿಜಯ ಸಾಧಿಸಿದರು.

ಇದೇ ವಯೋವರ್ಗದ ಡಬಲ್ಸ್‌ನಲ್ಲಿ ಫೈನಲ್ ತಲುಪಿದ್ದ ನಿಕ್ಷೇಪ್ ಅವರು ರನ್ನರ್ ಅಪ್ ಸ್ಥಾನಕ್ಕೆ ಸಮಾಧಾನ ಪಡಬೇಕಾಯಿತು. ಅಂತಿಮ ಹಣಾಹಣಿಯಲ್ಲಿ ಅಲೆಕ್ಸ್ ಸೋಳಂಕಿ ಜೊತೆಗೂಡಿ ಆಡಿದ ನಿಕ್ಷೇಪ್ 4-6, 4-6ರಲ್ಲಿ ಎರಡನೇ ಶ್ರೇಯಾಂಕ ಹೊಂದಿರುವ ಜೋಡಿಯಾದ ರವಿ ರಾಶ್ವಂತ್ ಹಾಗೂ ಆರ‌್ಯನ್ ಗೋವೆಸ್ ಎದುರು ಸೋಲುಂಡರು.

16 ವರ್ಷ ವಯಸ್ಸಿನೊಳಗಿನ ಬಾಲಕರ ವಿಭಾಗದ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕಿತ ಫತೇಹ್‌ದೀಪ್ ಸಿಂಗ್ ಹಾಗೂ ಕರಣ್ ಸಲ್ವಾನ್ ಎದುರಾಗಲಿದ್ದಾರೆ. ನಾಲ್ಕರ ಘಟ್ಟದಲ್ಲಿ ಫತೇಹ್ 6-1, 3-6, 6-0ಯಲ್ಲಿ ಜ್ಯೂಡ್ ರೇಮಾಂಡ್ ವಿರುದ್ಧ ಜಯಿಸಿದರು. ಇನ್ನೊಂದು ಪಂದ್ಯದಲ್ಲಿ ಕರಣ್ 6-2, 6-2ರಲ್ಲಿ ನೇರ ಸೆಟ್‌ಗಳಿಂದ ದೀಪಕ್ ವಿಶ್ವಕರ್ಮ ಅವರನ್ನು ಮಣಿಸಿದರು.

ಬಾಲಕಿಯರ ಸಿಂಗಲ್ಸ್‌ನಲ್ಲಿ ದೆಹಲಿಯ ಸಿಮ್ರನ್ ಕೌರ್ ಸೇಥಿ ಹಾಗೂ ತರನ್ನುಮ್ ಹಂಡಾ ನಡುವೆ ಪ್ರಶಸ್ತಿಗಾಗಿ ಪೈಪೋಟಿ ನಡೆಯಲಿದೆ. ಶುಕ್ರವಾರ ಸೆಮಿಫೈನಲ್ಲಿ ಸಿಮ್ರನ್ 6-2, 6-4ರಲ್ಲಿ ತೀರ್ಥಾ ಇಸ್ಕಾ ವಿರುದ್ಧವೂ ಹಾಗೂ ತರನ್ನುಮ್ 6-3, 6-2ರಲ್ಲಿ ನಯನಿಕಾ ರೆಡ್ಡಿ ಎದುರು ಜಯಿಸಿದರು. ಗಾಯಗೊಂಡಿದ್ದ ಕಾರಣ ನಯನಿಕಾ ನಿರೀಕ್ಷಿತ ಮಟ್ಟದಲ್ಲಿ ಚುರುಕಿನ ಆಟವನ್ನು ಆಡಲು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT