ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಡದ ಸದ್ಯದ ಸ್ಥಿತಿ ಅನಿರೀಕ್ಷಿತವೇನಲ್ಲ : ದೋನಿ

Last Updated 12 ಡಿಸೆಂಬರ್ 2012, 14:11 IST
ಅಕ್ಷರ ಗಾತ್ರ

ನಾಗ್ಪುರ (ಪಿಟಿಐ) : `ಟೆಸ್ಟ್ ಕ್ರಿಕೆಟ್‌ನಲ್ಲಿ ದಂತಕಥೆ ಎನಿಸಿರುವ ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಅವರಂತಹ ಆಟಗಾರರ ನಿವೃತ್ತಿ ಬಳಿಕ ಭಾರತ ಟೆಸ್ಟ್ ಕ್ರಿಕೆಟ್ ಇಂತಹದೊಂದು ಹಂತಕ್ಕೆ ಬಂದು ತಲುಪಲಿದೆ ಎಂಬುದು ಎಲ್ಲರಿಗೂ ತಿಳಿದಿತ್ತು' - ಇದು ಇಂಗ್ಲೆಂಡ್ ತಂಡದ ವಿರುದ್ಧ ಎರಡು ಟೆಸ್ಟ್ ಪಂದ್ಯಗಳಲ್ಲಿ ಹೀನಾಯ ಸೋಲು ಕಂಡ ಬಳಿಕ ಬುಧವಾರ ಇಲ್ಲಿ ನಾಯಕ ಮಹೇಂದ್ರ ಸಿಂಗ್ ದೋನಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ರೀತಿ.  

`ಹಿರಿಯ ಆಟಗಾರರು  ತಂಡದಿಂದ  ಹೊರಹೋದ ಬಳಿಕ ಯುವ ಆಟಗಾರರ ಮೇಲೆ ಒತ್ತಡ ಹೆಚ್ಚಾಗಿದ್ದು ನಾವು ಕಠಿಣ ಹಾದಿಯಲ್ಲಿದ್ದೇವೆ. ಇಂತಹ ಸ್ಥಿತಿಯನ್ನು ಎಲ್ಲರೂ ನಿರೀಕ್ಷಿಸಿದ್ದರು. ಹೀಗಾಗಿಯೇ ಈಗಿರುವ ತಂಡದ ಬಗ್ಗೆ ಎಲ್ಲರೂ ಮಾತನಾಡುತ್ತಿರುವುದು' ಎಂದು ದೋನಿ ಹೇಳಿದರು.

`ಮುಂಬೈ ಮತ್ತು ಕೋಲ್ಕತ್ತದಲ್ಲಿ ನಡೆದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ನಾವು ತುಂಬಾ ಹೋರಾಟ ನಡೆಸಿದೆವು. ಆ ಎರಡು ಟೆಸ್ಟ್ ಪಂದ್ಯಗಳನ್ನೇ ಪರಿಗಣಿಸಿ ನೀವು ನಮ್ಮನ್ನು ಪ್ರಶ್ನಿಸುವುದಾದರೆ ಮುಂದಿನ ಎರಡೂ ಪಂದ್ಯಗಳಲ್ಲೂ ನಾವು ಸೋಲಬಹುದು' ಎನ್ನುವ ಮೂಲಕ ಟೀಕಾಕಾರರ ಟೀಕೆಗಳಿಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡದ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗರಾದ ದ್ರಾವಿಡ್ ಮತ್ತು ಮೊಹಿಂದರ್ ಅಮರ್‌ನಾಥ್ ಅವರ ಟೀಕೆಗಳ ಬಗ್ಗೆ ವರದಿಗಾರರು ಪ್ರಶ್ನಿಸಿದಾಗ, `ಮಾಜಿ ಕ್ರಿಕೆಟಿಗರ ಅಭಿಪ್ರಾಯಗಳನ್ನು ನಾವು ಗೌರವಿಸುತ್ತೇವೆ. ಆದರೆ ನಮಗೆ ನಮ್ಮದೇ ಆದ ತೊಂದರೆಗಳಿದ್ದು ಅದನ್ನು ಮೊದಲು ಬಗೆಹರಿಸಿಕೊಳ್ಳಬೇಕಿದೆ' ಎಂದು ದೋನಿ ತಿಳಿಸಿದರು.

ಭಾರತ ತಂಡವು 1-2 ರಿಂದ ಸರಣಿಯಲ್ಲಿ ಹಿನ್ನಡೆ ಅನುಭವಿಸಿದ್ದು, ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಅನುಭವಿಸಿದ್ದ ಸರಣಿ ಸೋಲಿನ ಸೇಡು ತಿರಿಸಿಕೊಳ್ಳುವ ಲೆಕ್ಕಾಚಾರ ತಲೆಕೆಳಗಾಗಿದೆ. ಹೀಗಿರುವಾಗ ನಾಗ್ಪುರದಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದಲ್ಲಿ ಸರಣಿ ಸಮಬಲ ಸಾಧಿಸುತ್ತದೆ. ಒಂದೊಮ್ಮೆ ನಾಲ್ಕನೇ ಪಂದ್ಯ ಡ್ರಾದಲ್ಲಿ ಕೊನೆಗೊಂಡರೆ ಪ್ರವಾಸಿಗರು 28ವರ್ಷಗಳ ಬಳಿಕ ಮೊದಲ ಬಾರಿಗೆ ಸರಣಿ ಗೆದ್ದ ಸಾಧನೆ ಮಾಡಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT