ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನಮ್ಮ ಸಮಸ್ಯೆಗೆ ಪರಿಹಾರ ನೀಡುವವರು ಇಲ್ಲಿಲ್ಲ'

ಪತ್ರಿಕೆ ಓದುವುದ್ಲ್ಲಿಲ, ಟಿವಿ ನೋಡುವುದಿಲ್ಲ: ದೋನಿ
Last Updated 12 ಡಿಸೆಂಬರ್ 2012, 19:50 IST
ಅಕ್ಷರ ಗಾತ್ರ

ನಾಗಪುರ: `ನಿಮ್ಮ ಫಾರ್ಮ್ ಹಾಗೂ ನಾಯಕತ್ವದ ಬಗ್ಗೆ ಟೀಕಾ ಪ್ರಹಾರವೇ ಹರಿಯುತ್ತಿದೆ. ಈ ವಿಷಯ ನಿಮಗೆ ಗೊತ್ತಾ? ನೀವು ಟಿವಿ ವೀಕ್ಷಿಸಿದ್ದೀರಾ? ದಿನಪತ್ರಿಕೆ ಓದುತ್ತ್ದ್ದಿದೀರಾ?'

ನಾಯಕತ್ವದಿಂದ ವಜಾ ಮಾಡಬೇಕು ಎಂದು ಮಾಜಿ ಆಟಗಾರ ಮೋಹಿಂದರ್ ಅಮರ್‌ನಾಥ್ ಸೇರಿದಂತೆ ಪ್ರಮುಖರು ಮಾಡುತ್ತಿರುವ ಆಗ್ರಹ ಸಂಬಂಧ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ನಾಯಕ ದೋನಿ ಅವರತ್ತ ತೂರಿಬಂದ ಪ್ರಶ್ನೆಗಳಿವು.

`ವಿಷಯ ಗೊತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಾನು ಪತ್ರಿಕೆ ಓದುತ್ತಿಲ್ಲ, ಟಿವಿ ನೋಡುತ್ತಿಲ್ಲ. ಹಾಗೆ ಮಾಡಲು ನನಗೇನು ಕಷ್ಟ ಎನಿಸಿಲ್ಲ. ಮಾಜಿ ಆಟಗಾರರ ಹೇಳಿಕೆಯನ್ನು ನಾನು ಗೌರವಿಸುತ್ತೇನೆ. ಆದರೆ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಲು ನನಗೆ ಸಮಯವಿಲ್ಲ. ಏಕೆಂದರೆ ತಂಡದಲ್ಲಿ ನಮ್ಮದೇ ಆದ ಹಲವು ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸುವುದರತ್ತ ಚಿತ್ತ ಹರಿಸುತ್ತೇನೆ' ಎಂದು ದೋನಿ ಹೇಳಿದರು.

`ಇಲ್ಲಿ ಪ್ರತಿಯೊಬ್ಬರೂ ಕ್ರಿಕೆಟ್ ವಿಶ್ಲೇಷಿಸಲು ಶುರು ಮಾಡುತ್ತಾರೆ. ಅತಿರೇಕದ ಅನಿಸಿಕೆ ಮುಂದಿಡುತ್ತಾ ಹೋಗುತ್ತಾರೆ. ನಮ್ಮತ್ತ ಸದಾ ಒಂದು ಕಣ್ಣು ಇಟ್ಟಿರುತ್ತಾರೆ. ಆದರೆ ಅವರ ಬಳಿ ನಮ್ಮ ಸಮಸ್ಯೆಗಳಿಗೆ ಉತ್ತರ ಮಾತ್ರ ಇರುವುದಿಲ್ಲ. ಇದು ನಮ್ಮ ದೇಶದ ಕ್ರಿಕೆಟ್ ಪರಿಸ್ಥಿತಿ' ಎಂದರು.

`ಭಾರತ ತಂಡವೀಗ ಕಷ್ಟದ ಹಂತದಲ್ಲಿದೆ. ಕೆಲ ಹಿರಿಯ ಆಟಗಾರರು ಫಾರ್ಮ್‌ನಲ್ಲಿಲ್ಲ. ಅಕಸ್ಮಾತ್ ಎ್ಲ್ಲಲಾ ಹಿರಿಯ ಆಟಗಾರರು ಹೊರ ಹೋದರೆ ಯುವ ಆಟಗಾರರ ಮೇಲೆ ಒತ್ತಡ ಬೀಳುತ್ತದೆ. ಸ್ವಲ್ಪ ದಿನ ಕಳೆದ ಮೇಲೆ ಮತ್ತೆ ಈ ರೀತಿ ಸೋಲು ಎದುರಾದರೆ ಯುವ ಆಟಗಾರರು ಹೊರಹೋಗಲಿ, ಬೇರೆಯವರಿಗೆ ಅವಕಾಶ ನೀಡಿ ಎಂಬ ಕೂಗು ಕೇಳಿಬರುತ್ತದೆ.

ಹಾಗಾಗಿ ಭಾರತದ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿರುವ ಆಟಗಾರರ ಜೀವನವನ್ನು ಒಂದೆರಡು ಸರಣಿಗಳ ಪ್ರದರ್ಶನದ ಮೇಲೆ ನಿರ್ಧರಿಸಬಾರದು' ಎಂದು ಮಹಿ ವಿವರಿಸಿದರು.

`2007ರಲ್ಲಿ ಟ್ವೆಂಟಿ-20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಾಗ ಜನರು ತುಂಬಾ ಹೊಗಳಿದರು. ಅದು ನನ್ನ ತಲೆಗೇರಲಿಲ್ಲ. ಈಗ ಟೀಕೆಗೆ ಒಳಗಾಗಿದ್ದೇನೆ. ಭಾರತದಲ್ಲಿ ಕ್ರಿಕೆಟ್ ಅಭಿಮಾನ ಹೇಗಿದೆಯೆಂದರೆ ಗೆದ್ದಾಗ ಮೇಲೆ ಕೂರಿಸುತ್ತಾರೆ, ಸೋತರೆ ಅಲ್ಲಿಂದ ಕೆಳಗೆ ಎಳೆಯುತ್ತಾರೆ. ಹಾಗಾಗಿ ನಾನು ಮಧ್ಯದಲ್ಲಿರಲು ಪ್ರಯತ್ನಿಸುತ್ತೇನೆ' ಎಂದು ನುಡಿದರು.

ಸಚಿನ್ ಬಗ್ಗೆ ಪ್ರತಿಕ್ರಿಯಿಸಿದ ಅವರು, `ನಾವೀಗ ತುಂಬಾ ಕಷ್ಟದ ಸನ್ನಿವೇಶದಲ್ಲಿದ್ದೇವೆ. ಇಂತಹ ಸಮಯದಲ್ಲಿ ನಮಗೆ ಸಚಿನ್ ಸೇವೆ ತುಂಬಾ ಅಗತ್ಯವಿದೆ. ಅವರ ಅನುಭವ ನಮ್ಮ ಕಷ್ಟವನ್ನು ದೂರಮಾಡಬಲ್ಲದು. ಹಾಗಾಗಿ ಸಚಿನ್ ವಿಷಯದಲ್ಲಿ ನಾನೆಂದೂ ಭವಿಷ್ಯ ನುಡಿಯಲಾರೆ' ಎಂದರು.

`ಸೋಲು ಎದುರಾದರೂ ನಮ್ಮ ಡ್ರೆಸ್ಸಿಂಗ್ ಕೋಣೆಯ ವಾತಾವರಣ ಅತ್ಯುತ್ತಮವಾಗಿದೆ. ಎಲ್ಲರೂ ಹುರುಪಿನಿಂದ ಕೂಡಿದ್ದಾರೆ. ಸೋಲು ಎದುರಾಗುತ್ತಿದ್ದಾಗ ನಮ್ಮನ್ನು ಟೀಕಿಸದೆ ಸ್ಫೂರ್ತಿ ತುಂಬುವ ವ್ಯಕ್ತಿಗಳೆಂದರೆ ಸಹಾಯಕ ಸಿಬ್ಬಂದಿ ಹಾಗೂ ಸಹ ಆಟಗಾರರು ಮಾತ್ರ.

ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲು ಸಚಿನ್, ವೀರೂ ಅವರಂಥ ಆಟಗಾರರು ಇದ್ದಾರೆ. ಹಾಗಾಗಿ ತಿರುಗೇಟು ನೀಡುವ ಶಕ್ತಿ ನಮ್ಮಲ್ಲಿದೆ. ಈ ಹಿಂದೆ ಕೂಡ ಇಂತಹ ಸನ್ನಿವೇಶಕ್ಕೆ ಸಿಲುಕಿಕೊಂಡಿದ್ದೆವು. ಆದರೆ ಆಗ ಯಶಸ್ಸು ಕಂಡ ಉದಾಹರಣೆ ಇದೆ' ಎಂದು ದೋನಿ ಹೇಳಿದರು.

31ನೇ ವರ್ಷಕ್ಕೆ ಕಾಲಿರಿಸಿದ ಯುವರಾಜ್ ಸಿಂಗ್ ಅವರಿಗೆ ಜನ್ಮ ದಿನದ ಶುಭಾಶಯ ಹೇಳಲು ದೋನಿ ಮರೆಯಲಿಲ್ಲ. ಆದರೆ ಯುವರಾಜ್ ಈಗ ಟೆಸ್ಟ್ ತಂಡದಿಂದ ಸ್ಥಾನ ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT