ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಖರ ಕಾರಣ ಇಲ್ಲದ ಕ್ಯಾನ್ಸರ್ ಇದು

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಬಳಲುತ್ತಿರುವುದು ಶ್ವಾಸಕೋಶದ ಕ್ಯಾನ್ಸರ್‌ನಿಂದ ಅಲ್ಲ. ಕ್ಯಾನ್ಸರ್ ಗೆಡ್ಡೆ ಅವರ ಎಡ ಮತ್ತು ಬಲ ಶ್ವಾಸಕೋಶದ ಮಧ್ಯೆ ಕಾಣಿಸಿಕೊಂಡಿದೆ. ವೈದ್ಯಕೀಯ ಭಾಷೆಯಲ್ಲಿ ಇದಕ್ಕೆ `ಜರ್ಮ್ ಸೆಲ್~ ಕ್ಯಾನ್ಸರ್ ಎನ್ನುತ್ತಾರೆ.

ಯುವರಾಜ್ ಇದೀಗ ಅಮೆರಿಕದ  ಬಾಸ್ಟನ್‌ನ ಕ್ಯಾನ್ಸರ್ ರೀಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಜರ್ಮ್ ಸೆಲ್ ಕ್ಯಾನ್ಸರ್ ಸಾಮಾನ್ಯವಾಗಿ ವೃಷಣ ಮತ್ತು ಅಂಡಾಶಯಗಳಲ್ಲಿ ಕಂಡುಬರುತ್ತದೆ. ಆದರೆ ಯುವರಾಜ್‌ಗೆ ಎಡ ಮತ್ತು ಬಲ ಶ್ವಾಸಕೋಶಗಳ ನಡುವೆ ಇರುವ `ಮೀಡಿಯಸ್ಟೀನಮ್~ ಭಾಗದಲ್ಲಿ ಕಂಡುಬಂದಿದೆ. ಎದೆಗೂಡನ್ನು ಎಡ ಮತ್ತು ಬಲ ಭಾಗಗಳಾಗಿ ವಿಭಾಗಿಸುವ ಚರ್ಮದ ಭಿತ್ತಿಗೆ `ಮೀಡಿಯಸ್ಟೀನಮ್~ ಎಂಬ ಹೆಸರಿದೆ.

`ಕ್ಯಾನ್ಸರ್ ಗೆಡ್ಡೆ ಶ್ವಾಸಕೋಶದ ಒಳಭಾಗದಲ್ಲಿ ಕಂಡುಬಂದಿಲ್ಲ. ಆದ್ದರಿಂದ ಇದು ಶ್ವಾಸಕೋಶದ ಕ್ಯಾನ್ಸರ್ ಅಲ್ಲ. ಬಲು ಅಪರೂಪವಾಗಿ ಕಾಣಿಸಿಕೊಳ್ಳುವ ಜರ್ಮ್ ಸೆಲ್ ಕ್ಯಾನ್ಸರ್~ ಎಂದು ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿಯ ಡಾ. ರಾಧೇಶ್ಯಾಮ್ `ಪ್ರಜಾವಾಣಿ~ಗೆ ತಿಳಿಸಿದರು.

`ಈ ರೀತಿಯ ಕ್ಯಾನ್ಸರ್‌ಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದಿಲ್ಲ. ಧೂಮಪಾನ ಅಥವಾ ಮದ್ಯಪಾನದಿಂದ ಬರುವಂತಹ ಕ್ಯಾನ್ಸರ್ ಇದಲ್ಲ. ಹುಟ್ಟಿನಿಂದಲೇ ಬರುತ್ತದೆ ಎನ್ನುವುದೂ ಕಷ್ಟ~ ಎಂದು ಕಳೆದ ಕೆಲ ವರ್ಷಗಳಿಂದ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಿದ ಅನುಭವ ಹೊಂದಿರುವ ಅವರು ತಿಳಿಸಿದರು.

`ಆರಂಭದಲ್ಲಿ ಕೆಮ್ಮು, ಉಸಿರಾಟದ ತೊಂದರೆ, ಎದೆನೋವು ಮುಂತಾದ ಲಕ್ಷಣಗಳು ಕಾಣಿಸುತ್ತವೆ. ಪರೀಕ್ಷೆಗೆ ಒಳಗಾದಾಗ ಕ್ಯಾನ್ಸರ್ ಇರುವುದು ಗೊತ್ತಾಗುತ್ತದೆ. ಯುವರಾಜ್‌ಗೆ ಆಗಿರುವುದು ಇದೇ ಕ್ಯಾನ್ಸರ್~ ಎಂದರು.
`ಈ ರೀತಿಯ ಕ್ಯಾನ್ಸರ್‌ಗೆ ಕಿಮೋಥೆರಪಿ ಸೂಕ್ತ ಚಿಕಿತ್ಸೆ~ ಎಂದ ರಾಧೇಶ್ಯಾಮ್, `ಶೇ 100 ರಷ್ಟು ಅಲ್ಲದಿದ್ದರೂ, ಶೇ 90-95 ರಷ್ಟು ಗುಣಪಡಿಸಲು ಸಾಧ್ಯ. ಚಿಕಿತ್ಸೆಯ ಅವಧಿ ಕನಿಷ್ಠ ನಾಲ್ಕರಿಂದ ಆರು ತಿಂಗಳವರೆಗೆ ಇರುವುದು~ ಎಂದು ವಿವರಿಸಿದರು.

`ಕಿಮೋಥೆರಪಿ ಸಂದರ್ಭದಲ್ಲಿ ರೋಗಿ ದೈಹಿಕವಾಗಿ ಸಾಕಷ್ಟು ಬಳಲುತ್ತಾನೆ. ಚಿಕಿತ್ಸೆ ಕೊನೆಗೊಂಡ ಒಂದೆರಡು ತಿಂಗಳಲ್ಲಿ ಮೊದಲಿನ ದೈಹಿಕ ಸಾಮರ್ಥ್ಯ ಪಡೆಯಬಹುದು. ಈ ಕಾರಣ ಯುವರಾಜ್ ಮತ್ತೆ ಕ್ರಿಕೆಟ್ ಆಡಲು ಸಾಧ್ಯ~ ಎಂದು ನುಡಿದರು.

`ಕಿಮೋಥೆರಪಿ ಚಿಕಿತ್ಸೆ ಭಾರತದ ಪ್ರಮುಖ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಲಭ್ಯವಿದೆ. ನಾನು ಪ್ರತಿ ವರ್ಷ ಸಾಮಾನ್ಯವಾಗಿ ಇಂತಹ ಒಂದೆರಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇನೆ~ ಎಂದೂ ಅವರು ತಿಳಿಸಿದರು.
ಯುವರಾಜ್ ಅವರು ಮೇ ತಿಂಗಳ ವೇಳೆ ಮತ್ತೆ ಕಣಕ್ಕಿಳಿಯುವರು ಎಂಬ ವಿಶ್ವಾಸವನ್ನು ಅವರ ಫಿಸಿಯೋ ಜತಿನ್ ಚೌಧರಿ ವ್ಯಕ್ತಪಡಿಸಿದ್ದರು. ಅವರಿಗೆ ಆರಂಭದಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯ ನಿಕೇಶ್ ರೋಹ್ಟಗಿ ಕೂಡಾ ಇದೇ ಅಭಿಪ್ರಾಯ ತಿಳಿಸಿದ್ದರು. `10 ವಾರಗಳ ಬಳಿಕ ಯುವರಾಜ್ ಪೂರ್ಣ ರೀತಿಯ ದೈಹಿಕ ತರಬೇತಿ ನಡೆಸಬಹುದು~ ಎಂದಿದ್ದರು.

ಅಮೆರಿಕದ ಸೈಕಲ್ ಸ್ಪರ್ಧಿ ಲ್ಯಾನ್ಸ್   ಆರ್ಮ್‌ಸ್ಟ್ರಾಂಗ್ ಕೂಡಾ `ಜರ್ಮ್ ಸೆಲ್~ ಕ್ಯಾನ್ಸರ್‌ನಿಂದ ಬಳಲಿದ್ದರು. ಆದರೆ ಎದೆಯ ಬದಲು ವೃಷಣದಲ್ಲಿ ಕ್ಯಾನ್ಸರ್ ಕಂಡುಬಂದಿತ್ತು. ಕಿಮೋಥೆರಪಿ ಚಿಕಿತ್ಸೆಯಿಂದ ಸಂಪೂ ರ್ಣವಾಗಿ ಗುಣಮುಖರಾಗಿದ್ದ ಅವರು ಸ್ಪರ್ಧಾ ಕಣಕ್ಕೆ ಮರಳುವಲ್ಲೂ ಯಶಸ್ವಿಯಾಗಿದ್ದರು. 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT