ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋರ್ಸ್ ಇಂಡಿಯಾ ಅಕಾಡೆಮಿಗೆ ಚಾಲನೆ

Last Updated 12 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಫಾರ್ಮುಲಾ ಒನ್ ರೇಸ್‌ನಲ್ಲಿ ಭಾರತದವರೇ ಫೋರ್ಸ್ ಇಂಡಿಯಾ ಕಾರಿನ ಡ್ರೈವರ್ ಆಗಿರಬೇಕು ಎಂಬ ಉದ್ದೇಶ ಹಾಗೂ ಕನಸು ಹೊಂದಿರುವ ‘ಫೋರ್ಸ್ ಇಂಡಿಯಾ ಅಕಾಡೆಮಿ’ಗೆ ಚಾಲನೆ ಲಭಿಸಿದೆ.

ಉದ್ಯಾನ ನಗರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಫೋರ್ಸ್ ಇಂಡಿಯಾ ತಂಡದ ಮುಖ್ಯಸ್ಥ ಹಾಗೂ ಉದ್ಯಮಿ ವಿಜಯ್ ಮಲ್ಯ ಚಾಲನೆ ನೀಡಿದರು.
‘ಹಂಟ್ ಫಾರ್ ಒನ್ ಫ್ರಮ್ ಎ ಬಿಲಿಯನ್’ (ಒಂದು ಬಿಲಿಯನ್ ಜನರಲ್ಲಿ ಒಬ್ಬನ ಶೋಧ) ಎಂಬ ಪ್ರತಿಭಾ ಶೋಧ ಕಾರ್ಯಕ್ರಮದಡಿ ಈ ಅಕಾಡೆಮಿಯಲ್ಲಿ ಪ್ರತಿಭಾವಂತ ಯುವಕರಿಗೆ ತರಬೇತಿ ನೀಡಲಾಗುತ್ತದೆ.

‘ಭಾರತದವರೇ ಫಾರ್ಮುಲಾ ಒನ್ ರೇಸ್‌ನಲ್ಲಿ ಫೋರ್ಸ್ ಇಂಡಿಯಾ ಕಾರಿನ ಡ್ರೈವರ್ ಆಗಬೇಕು ಎಂಬುದು ನನ್ನ ಬಹುದಿನಗಳ ಕನಸು. ಆ ಕನಸು ಈಡೇರಿಸಿಕೊಳ್ಳಲು ನಾನು ಈ ಅಕಾಡೆಮಿ ಸ್ಥಾಪಿಸಿದ್ದೇನೆ. ರೇಸಿಂಗ್‌ನಲ್ಲಿ ಆಸಕ್ತಿ ಹೊಂದಿರುವ ಪ್ರತಿಭಾವಂತ ಯುವಕರಿಗೆ ತರಬೇತಿ ನೀಡಲಾಗುವುದು’ ಎಂದು ಮಲ್ಯ ಹೇಳಿದ್ದಾರೆ.

ಹಾಗಾಗಿ 14ರಿಂದ 17 ವರ್ಷ ವಯಸ್ಸಿನ ಹುಡುಗರು ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದು. ಬಳಿಕ ಏಪ್ರಿಲ್ 25ರಿಂದ ದೇಶದ ಏಳು ನಗರಗಳಲ್ಲಿ ರೇಸ್ ನಡೆಯಲಿದೆ. ಇದರಲ್ಲಿ ಅರ್ಹತೆ ಪಡೆಯುವ ಪ್ರತಿ ನಗರದ ತಲಾ 14 ಮಂದಿ ಹಾಗೂ ಇಬ್ಬರು ವೈಲ್ಡ್‌ಕಾರ್ಡ್ ಪ್ರವೇಶ ಪಡೆದವರು ರಾಷ್ಟ್ರೀಯ ಫೈನಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದರಲ್ಲಿ ಯಶಸ್ವಿಯಾಗುವ 10 ಮಂದಿಗೆ ಇಂಗ್ಲೆಂಡ್‌ನ ಸಿಲ್ವರ್‌ಸ್ಟೋನ್ ಟ್ರ್ಯಾಕ್‌ನಲ್ಲಿ ತರಬೇತಿ ನೀಡಲಾಗುವುದು. ಅಂತಿಮವಾಗಿ ಮೂರು ಮಂದಿಯನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಅವರು ವಿವರಿಸಿದ್ದಾರೆ.

ಮುಂಬೈ, ಗೋವಾ, ಕೊಲ್ಹಾಪುರ, ಬೆಂಗಳೂರು, ಹೈದರಾಬಾದ್, ಚೆನ್ನೈ ಹಾಗೂ ಅಮೃತಸರದಲ್ಲಿ ಮೊದಲ ಹಂತದ ಸ್ಪರ್ಧೆ ನಡೆಯಲಿದೆ.
‘30 ವರ್ಷಗಳಿಂದ ಮೋಟಾರ್ ಸ್ಪೋರ್ಟ್ಸ್‌ನಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಆದರೆ ಅಂತಿಮ ಮೂರು ಮಂದಿಯನ್ನು ಆಯ್ಕೆ ಮಾಡುವ ಆ ಕ್ಷಣವನ್ನು ಎದುರು ನೋಡುತ್ತಿದ್ದೇನೆ. ಜೊತೆಗೆ ಕಾರಿನ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸುವ ಕನಸು ಇದೆ’ ಎಂದು ಮಲ್ಯ ತಿಳಿಸಿದ್ದಾರೆ.

ಸದ್ಯ ಭಾರತದ ಡ್ರೈವರ್‌ಗಳು ಫಾರ್ಮುಲಾ ಒನ್ ರೇಸ್‌ನಲ್ಲಿ ಪಾಲ್ಗೊಳ್ಳುವ ಗುಣಮಟ್ಟ ಹೊಂದಿಲ್ಲ. ಹಾಗಾಗಿ ನಾನು ವಿದೇಶಿ ಡ್ರೈವರ್‌ಗಳನ್ನು ಹೊಂದಿದ್ದೇನೆ ಎಂದರು.
ಹಾಗೇ, ಗ್ರೇಟರ್ ನೊಯಿಡಾದಲ್ಲಿ ನಡೆಯಲಿರುವ ಭಾರತದ ಹಂತದ ಫಾರ್ಮುಲಾ ಒನ್ ರೇಸ್‌ಗೆ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ ಎಂದು ಮಲ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT