ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಸೋಲಿಗೆ ದೋನಿಯೇ ಕಾರಣ

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಭಾರತ ತಂಡದವರು ಹೊರಬೀಳಲು ನಾಯಕ ಮಹೇಂದ್ರ ಸಿಂಗ್ ದೋನಿ ಅವರ ಎಡವಟ್ಟುಗಳೇ ಕಾರಣ ಎಂದು ಮಾಜಿ ಕ್ರಿಕೆಟಿಗ ಚೇತನ್ ಶರ್ಮ ದೂರಿದ್ದಾರೆ.

`ಟೂರ್ನಿಯಿಂದ ಹೊರಬೀಳಲು ಕಾರಣವಾಗಿದ್ದಕ್ಕೆ ಇಡೀ ತಂಡವನ್ನು ದೂರಬಾರದು. ಬದಲಾಗಿ ನಾಯಕ ದೋನಿ ಕಾರಣ. ಇದಕ್ಕೆ ಅವರೇ ಹೊಣೆಗಾರರು. ಅದನ್ನು ಬಿಟ್ಟು ಸೋಲಿಗೆ ಮಳೆ ಕಾರಣ ಎಂದು ದೋನಿ ಹೇಳುತ್ತಿದ್ದಾರೆ~ ಎಂದು ಶರ್ಮ ನುಡಿದಿದ್ದಾರೆ.

ಸೂಪರ್ 8 ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿಗೆ ಮಳೆ ಕಾರಣ ಎಂದು ದೋನಿ ಹೇಳಿದ್ದರು.
`ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಮುಖ ಪಂದ್ಯಕ್ಕೆ ಅನುಭವಿ ಹರಭಜನ್ ಸಿಂಗ್ ಅವರನ್ನು ಪರಿಗಣಿಸಬೇಕಿತ್ತು. ಅವರನ್ನು ಕಣಕ್ಕಿಳಿಸದ್ದು ನನಗೆ ಆಘಾತ ಮೂಡಿಸಿತು. ನಿರಾಸೆಯನ್ನೂ ಉಂಟು ಮಾಡಿತು. ತಂಡ ಆಯ್ಕೆಯಲ್ಲಿ ದೋನಿ ಸಂಪೂರ್ಣ ಎಡವಿದ್ದಾರೆ~ ಎಂದು ಚೇತನ್ ಶರ್ಮ ತಿಳಿಸಿದ್ದಾರೆ.

ತಂಡದಲ್ಲಿ ಒಡಕು?: ವಿಶ್ವಕಪ್‌ನಿಂದ ಹೊರಬಿದ್ದಿರುವ ಭಾರತ ತಂಡದ ಆಟಗಾರರು ಹಾಗೂ ಕೋಚ್ ನಡುವೆ ಒಡಕು ಮೂಡಿದೆ ಎಂಬುದು ತಿಳಿದು ಬಂದಿದೆ. ಕೆಲ ಆಟಗಾರರ ವರ್ತನೆ ಬಗ್ಗೆ ಕೋಚ್ ಡಂಕನ್ ಫ್ಲೆಚರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೆಲ ಸುದ್ದಿ ವಾಹಿನಿಗಳು ವರದಿ ಮಾಡಿವೆ.

ಆದರೆ ಈ ವರದಿಗಳನ್ನು ಬಿಸಿಸಿಐ ಅಲ್ಲಗಳೆದಿದೆ. `ನೀವು ಹೇಳುತ್ತಿರುವು ವಿಷಯಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ವರದಿಯಾಗ್ದ್ದಿದಕ್ಕೆಲ್ಲಾ ನಾನು ಪ್ರತಿಕ್ರಿಯಿಸುವುದಿಲ್ಲ~ ಎಂದು ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ನುಡಿದಿದ್ದಾರೆ. `ಈ ವರದಿಗಳಲ್ಲಿ ಸತ್ಯಾಂಶವಿಲ್ಲ. ಇವೆಲ್ಲಾ ಕೇವಲ ವದಂತಿ~ ಎಂದು ತಂಡದ ಮ್ಯಾನೇಜರ್ ಸಂಜಯ್ ಪಟೇಲ್ ಹೇಳಿದ್ದಾರೆ.

ಪ್ರಮುಖವಾಗಿ ದೋನಿ ನಾಯಕತ್ವದ ಶೈಲಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟೂರ್ನಿಯಲ್ಲಿ ತಂಡ ಆಯ್ಕೆ ವೇಳೆ ದೋನಿ ತುಂಬಾ ತಪ್ಪೆಸಗಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸೀಮ್ ಅಕ್ರಂ ಕೂಡ ಅದಕ್ಕೆ ಧ್ವನಿಗೂಡಿಸಿದ್ದಾರೆ. ಆದರೆ ನಾಯಕತ್ವ ಬದಲಾವಣೆಗೆ ಇನ್ನೂ ಸಮಯ ಬಂದಿಲ್ಲ ಎಂದು ಸುನಿಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಅವರು ವಿಶ್ವಕಪ್‌ನ ಸೂಪರ್ 8 ಪದ್ಧತಿಯನ್ನು ಟೀಕಿಸಿದ್ದಾರೆ. ಟ್ವೆಂಟಿ-20 ಟೂರ್ನಿ ವೇಳೆ ಇನ್ನುಮುಂದೆ ಯುವ ಆಟಗಾರರಿಗೆ ಅವಕಾಶ ನೀಡಿ ಎಂದು ರವಿಶಾಸ್ತ್ರಿ ನುಡಿದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT