ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ವೀಕ್ಷಕಿ ಹುದ್ದೆಗೆ ಮೇರಿ ಕೋಮ್ ರಾಜೀನಾಮೆ

Last Updated 1 ಡಿಸೆಂಬರ್ 2017, 19:53 IST
ಅಕ್ಷರ ಗಾತ್ರ

ನವದೆಹಲಿ: ಅಗ್ರಗಣ್ಯ ಬಾಕ್ಸರ್‌ ಎಮ್‌.ಸಿ ಮೇರಿ ಕೋಮ್‌ ಭಾರತ ಬಾಕ್ಸಿಂಗ್ ಸಂಸ್ಥೆಯ ರಾಷ್ಟ್ರೀಯ ವೀಕ್ಷಕಿ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

‘ಸಕ್ರಿಯ ಆಟಗಾರರನ್ನು ವೀಕ್ಷಕರ ಸ್ಥಾನಕ್ಕೆ ಪರಿಗಣಿಸುವುದಿಲ್ಲ’ ಎಂದು ಕ್ರೀಡಾ ಸಚಿವರಾದ ರಾಜ್ಯವರ್ಧನ್‌ ಸಿಂಗ್‌ ರಾಥೋಡ್ ಅವರು ಹೇಳಿಕೆ ನೀಡಿದ ಬಳಿಕ ಮೇರಿ ಕೋಮ್ ರಾಜೀನಾಮೆ ನೀಡಿದ್ದಾರೆ.

‘ಈ ಸ್ಥಾನಕ್ಕಾಗಿ ನಾನು ಬೇಡಿಕೆ ಇಟ್ಟಿರಲಿಲ್ಲ. ಮನವಿ ಮಾಡಿಕೊಂಡ ಕಾರಣಕ್ಕೆ ಹುದ್ದೆಯನ್ನು ಒಪ್ಪಿಕೊಂಡಿದ್ದೆ’ ಎಂದು ಅವರು ಹೇಳಿದ್ದಾರೆ.

‘ಕ್ರೀಡಾ ಕಾರ್ಯದರ್ಶಿ ಇಂಜೆತಿ ಶ್ರೀನಿವಾಸ್‌ ಅವರು ವೀಕ್ಷಕಿ ಹುದ್ದೆಯನ್ನು ಒಪ್ಪಿಕೊಳ್ಳಲು ಹೇಳಿಕೊಂಡಾಗ ಕ್ರಿಯಾಶೀಲ ಆಟಗಾರರು ಈ ಹುದ್ದೆಯಲ್ಲಿ ಕೆಲಸ ಮಾಡಬಾರದು ಎಂಬ ಬಗ್ಗೆ ಯಾವುದಾದರೂ ನಿಯಮ ಇದೆಯಾ ಎಂದು ಪರೀಕ್ಷಿಸಿ ಬಳಿಕ ಒಪ್ಪಿಕೊಂಡಿದ್ದೆ’ ಎಂದು ಮೇರಿ ಸ್ಪಷ್ಟನೆ ನೀಡಿದ್ದಾರೆ.

‘ನನಗೆ ಅನಗತ್ಯ ವಿವಾದವನ್ನು ಎಳೆದುಕೊಳ್ಳಲು ಇಷ್ಟವಿಲ್ಲ. ಆ ಸಮಯದಲ್ಲಿ ನನಗೆ ವೀಕ್ಷಕಿ ಹುದ್ದೆಯನ್ನು ಒಪ್ಪಿಕೊಳ್ಳಲು ಒತ್ತಾಯ ಮಾಡಲಾಗಿತ್ತು. ಸಚಿವಾಲಯದ ಒತ್ತಾಯಕ್ಕೆ ನಾನು ಮಣಿದಿದ್ದೆ ಅಷ್ಟೇ’ ಎಂದು ಅವರು ಹೇಳಿದ್ದಾರೆ.

ಈ ಮೊದಲು ಕ್ರೀಡಾ ಸಚಿವರಾಗಿದ್ದ ವಿಜಯ್ ಗೋಯಲ್ ಅವರು ಮಾರ್ಚ್ ತಿಂಗಳಿನಲ್ಲಿ ಮೇರಿ ಕೋಮ್ ಅವರನ್ನು ಸೇರಿ ಒಟ್ಟು 12 ಮಂದಿಯನ್ನು ರಾಷ್ಟ್ರೀಯ ವೀಕ್ಷಕ ಹುದ್ದೆಗೆ ನೇಮಕ ಮಾಡಿದ್ದರು.

ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದ ಶೂಟರ್‌ ಅಭಿನವ್ ಬಿಂದ್ರಾ, ಸುಶೀಲ್ ಕುಮಾರ್‌, ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದ ಅಖಿಲ್ ಕುಮಾರ್ ಕೂಡ ಇದ್ದರು.

ಸುಶೀಲ್ ಹಾಗೂ ಮೇರಿ ಕೋಮ್ ಈಗಲೂ ಕ್ರೀಡೆಯಲ್ಲಿ ಸಕ್ರಿಯರಾಗಿದ್ದಾರೆ. ಅಖಿಲ್ ಅಮೆಚೂರ್ ಬಾಕ್ಸಿಂಗ್‌ನಿಂದ ದೂರ ಉಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT