ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ದಾರ್ ಸಿಂಗ್‌ಗೆ ಕೊಕ್‌, ರೂಪಿಂದರ್‌ಗೆ ಸ್ಥಾನ

Last Updated 17 ನವೆಂಬರ್ 2017, 20:03 IST
ಅಕ್ಷರ ಗಾತ್ರ

ನವದೆಹಲಿ: ಹಿರಿಯ ಮಿಡ್‌ ಫೀಲ್ಡರ್‌ ಸರ್ದಾರ್ ಸಿಂಗ್ ಅವರನ್ನು ಹಾಕಿ ವಿಶ್ವ ಲೀಗ್‌ ಫೈನಲ್‌ಗೆ ಶುಕ್ರವಾರ ಪ್ರಕಟಗೊಂಡ ಭಾರತ ತಂಡದಿಂದ ಕೈಬಿಡಲಾಗಿದೆ.

ಮುಂದಿನ ತಿಂಗಳು ಭುವನೇಶ್ವರದಲ್ಲಿ ನಡೆಯುವ ಪ್ರಮುಖ ಟೂರ್ನಿಗೆ 18 ಆಟಗಾರರನ್ನು ಒಳಗೊಂಡ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಫಿಟ್‌ನೆಸ್ ಮರಳಿ ಪಡೆದುಕೊಂಡಿರುವ ರೂಪಿಂದರ್ ಪಾಲ್‌ ಸಿಂಗ್‌ ಹಾಗೂ ಬೀರೇಂದ್ರ ಲಾಕ್ರಾ ಅವರಿಗೆ ಅವಕಾಶ ನೀಡಲಾಗಿದೆ.

ಢಾಕಾದಲ್ಲಿ ಹೋದ ತಿಂಗಳು ನಡೆದ ಏಷ್ಯನ್‌ ಕಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದ ಭಾರತ ತಂಡದಲ್ಲಿ ಸರ್ದಾರ್ ಸಿಂಗ್ ಆಡಿದ್ದರು. 2017ರಲ್ಲಿ ಅವರು ಖೇಲ್‌ ರತ್ನ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹಿರಿಯ ಆಟಗಾರನಿಗೆ ಸ್ಥಾನ ನೀಡದಿರುವುದು ಹಾಕಿ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಮಾಜಿ ನಾಯಕನ ವೃತ್ತಿಜೀವನ ಅಂತ್ಯಗೊಳ್ಳಲಿದೆಯೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

ರೋಲಂಟ್ ಓಲ್ಟಮನ್ಸ್ ಅವರ ನಿರ್ಗಮನದ ಬಳಿಕ ಹೊಸ ಕೋಚ್‌ ಆಗಿ ನೇಮಕಗೊಂಡ ಶೊರ್ಡ್‌ ಮ್ಯಾರಿಜ್ ಅವರು ಸರ್ದಾರ್ ಸಿಂಗ್ ಅವರ ಫಿಟ್‌ನೆಸ್ ಕುರಿತು ಅತೃಪ್ತಿ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಮಂಡಿ ಗಾಯದಿಂದ ಚೇತರಿಸಿಕೊಂಡಿರುವ ರೂಪಿಂದರ್ ಐದು ತಿಂಗಳ ಬಳಿಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಎಸ್‌.ಕೆ. ಉತ್ತಪ್ಪ ಮತ್ತು ಎಸ್‌.ವಿ.ಸುನೀಲ್‌ ಅವರೂ ತಂಡದಲ್ಲಿದ್ದಾರೆ. ಆಯ್ಕೆ ಸಮಿತಿ ಮನ್‌ಪ್ರೀತ್ ಸಿಂಗ್ ಅವರನ್ನೇ ತಂಡದ ನಾಯಕನನ್ನಾಗಿ ಉಳಿಸಿಕೊಂಡಿದೆ. ಚಿಂಗ್ಲೆನ್‌ಸನಾ ಸಿಂಗ್‌ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಆಕಾಶ್‌ ಚಿಕ್ಟೆ ಮತ್ತು ಸೂರಜ್‌ ಕರ್ಕೆರಾ ತಂಡದ ಗೋಲ್‌ ಕೀಪರ್‌ಗಳಾಗಿ ಅವಕಾಶ ಪಡೆದಿದ್ದಾರೆ.

**

ಕರ್ನಾಟಕದ ಇಬ್ಬರಿಗೆ ಸ್ಥಾನ

ತಂಡದಲ್ಲಿ ಕರ್ನಾಟಕದ ಇಬ್ಬರು ಆಟಗಾರರಿಗೆ ಸ್ಥಾನ ನೀಡಲಾಗಿದೆ. ಏಷ್ಯನ್‌ ಕಪ್‌ನಲ್ಲಿ ಆಡಿದ್ದ ಎಸ್‌.ವಿ ಸುನಿಲ್ ಫಾವರ್ಡ್ ವಿಭಾಗದಲ್ಲಿ ಭಾರತ ತಂಡಕ್ಕೆ ಬಲ ತುಂಬಲಿದ್ದಾರೆ. ಮಿಡ್‌ಫೀಲ್ಡರ್‌ ಎಸ್‌.ಕೆ.ಉತ್ತಪ್ಪ ಅವರೂ ತಂಡಕ್ಕೆ ಮರಳಿದ್ದಾರೆ.

**

ತಂಡ ಇಂತಿದೆ:

ಗೋಲ್‌ಕೀಪರ್‌: ಆಕಾಶ್‌ ಅನಿಲ್ ಚಿಕ್ತೆ, ಸೂರಜ್ ಕರ್ಕೆರಾ, ಡಿಫೆಂಡರ್‌: ಹರ್ಮನ್‌ಪ್ರೀತ್ ಸಿಂಗ್‌, ಅಮಿತ್‌ ರೋಹಿದಾಸ್‌, ದಿಪ್ಸನ್‌ ಟರ್ಕಿ, ವರುಣ್ ಕುಮಾರ್, ರೂಪಿಂದರ್‌ ಪಾಲ್ ಸಿಂಗ್‌, ಬೀರೇಂದ್ರ ಲಾಕ್ರಾ. ಮಿಡ್‌ಫೀಲ್ಡರ್‌: ಮನ್‌ಪ್ರೀತ್ ಸಿಂಗ್‌ (ನಾಯಕ), ಚಿಂಗ್ಲೆನ್‌ಸನಾ ಸಿಂಗ್‌ (ಉಪ ನಾಯಕ), ಎಸ್‌,ಕೆ.ಉತ್ತಪ್ಪ, ಸುಮಿತ್‌, ಕೊಥಾಜಿತ್ ಸಿಂಗ್‌. ಫಾವರ್ಡ್‌: ಎಸ್‌.ವಿ ಸುನಿಲ್‌, ಆಕಾಶ್‌ದೀಪ್ ಸಿಂಗ್‌, ಮನ್‌ದೀಪ್ ಸಿಂಗ್‌, ಲಲಿತ್ ಕುಮಾರ್ ಉಪಾಧ್ಯಾಯ, ಗುರ್ಜಂತ್ ಸಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT